ಬೆಂಗಳೂರು:
ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನೀಡಲಾಗುತ್ತಿದ್ದ 5 ಕೆಜಿ ಅಕ್ಕಿಗೆ ಹಣದ ಬದಲಾಗಿದೆ ಇನ್ನು ಮುಂದೆ ಬೇಳೆ, ಎಣ್ಣೆ ಹಾಗೂ ಸಕ್ಕರೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಾದಾಗ ಪ್ರತಿ ಫಲಾನುಭವಿಗೆ ತಿಂಗಳಿಗೆ 10 ಕೆಜಿ ಅಕ್ಕಿ ನೀಡುವ ಭರವಸೆ ನೀಡಿತ್ತು. ಆದರೆ, ಕೇವಲ 5 ಕೆಜಿ ಅಕ್ಕಿ ಮಾತ್ರ ಪೂರೈಸಲು ಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ 5 ಕೆಜಿ ಅಕ್ಕಿಗೆ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕುತ್ತಿತ್ತು.
ಆದರೆ, ರಾಜ್ಯ ಸರಕಾರ ನಡೆಸಿದ ಸಮೀಕ್ಷೆಯಲ್ಲಿ ಶೇ.93ರಷ್ಟು ಫಲಾನುಭವಿಗಳು ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯ ಬದಲಿಗೆ ಇತರೆ ಅಗತ್ಯ ವಸ್ತುಗಳನ್ನು ಪಡೆಯಲು ಆಸಕ್ತಿ ತೋರಿದ್ದಾರೆಂಬುದು ತಿಳಿದುಬಂದಿತ್ತು.ಈ ಹಿನ್ನೆಲೆಯಲ್ಲಿ ಹಣದ ಬದಲಿಗೆ ಬೇಳೆ, ಎಣ್ಣೆ ಹಾಗೂ ಸಕ್ಕರೆ ನೀಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಸಚಿವ ಮುನಿಯಪ್ಪ ಅವರು ಮಂಗಳವಾರ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ಒದಗಿಸುವಂತ ಮನವಿ ಮಾಡಿಕೊಂಡರು.
ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಸರ್ಕಾರ ಅಕ್ಕಿ ಮಾರಾಟ ಮಾಡಲು ಒಪ್ಪಿಕೊಂಡಿದೆ. ಅಗತ್ಯ ಅಕ್ಕಿಯನ್ನು ನೀಡಲಾಗುತ್ತದೆ. ಮಾಸಿಕ 20 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೇಕಾಗುತ್ತದೆ. ಕೇಂದ್ರ ನೀಡಲು ಆರಂಭಿಸಿದ ಕೂಡಲೇ ಫಲಾನುಭವಿಗಳಿಗೆ ಸಂಪೂರ್ಣ 10 ಕೆಜಿ ಅಕ್ಕಿಯನ್ನೇ ನೀಡುತ್ತೇವೆಂದು ತಿಳಿಸಿದರು. ರಾಜ್ಯ ಸರ್ಕಾರ ಕರ್ನಾಟಕದಲ್ಲಿ 13 ಲಕ್ಷ ಬಿಪಿಎಲ್ ಪಡಿತರ ಕಾರ್ಡುಗಳನ್ನು ಹೊಂದಿದ್ದು ಅಂದರೆ 40 ರಿಂದ 50 ಲಕ್ಷ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಅಕ್ಕಿಯನ್ನು ಕೊಡುತ್ತಿದ.
ಅದಕ್ಕೆ ನಾವು ಕೇಂದ್ರ ಸ್ವಾಮ್ಯದ ಕೇಂದ್ರೀಯ ಭಂಡಾರ ಎನ್.ಸಿ.ಸಿ.ಎಫ್ ಅವರ ಮುಖಾಂತರ ಅಕ್ಕಿಯನ್ನು ಖರೀದಿ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ ನಮಗೆ ಕೆಜಿಗೆ 28 ರೂ.ಗೆ ಅಕ್ಕಿಯನ್ನು ನೀಡಿದೆ ಈಗ ಕೇಂದ್ರ ಸರ್ಕಾರ ಮುಂದೆ ಬಂದಿದೆ,
ನಾನು ಆದಷ್ಟು ಬೇಗ ಸಚಿವರಾದ ಪ್ರಹ್ಲಾದ್ ಜೋಶಿಯವರೊಂದಿಗೆ ಮಾತನಾಡಿ ನಮ್ಮ ರಾಜ್ಯಕ್ಕೆ ಬೇಕಾಗಿರುವ ಅಕ್ಕಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇನ್ನುಳಿದ 5 ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರಕ್ಕೆ ಮೊದಲು ಕೇಳಿದ್ದೆವು ಆದರೆ, ಕೇಂದ್ರ ಸರ್ಕಾರ ಕೊಡಲಿಲ್ಲ. ಈಗ ಅಕ್ಕಿ ಕೊಡಲು ಕೇಂದ್ರ ಸರ್ಕಾರ ಮುಂದೆ ಬಂದಿದೆ. ಅದಕ್ಕೆ ನಾನು ಸ್ವಾಗತಿಸುತ್ತೇನೆ ಎಂದು ತಿಳಿಸಿದರು.
ನಾವು ರಾಜ್ಯದಲ್ಲಿ ಸರ್ವೇ ಮಾಡಿರುವ ಪ್ರಕಾರ ಗ್ರಾಹಕರು ಐದು ಕೆಜಿ ಅಕ್ಕಿ ಜೊತೆಗೆ ಬೇಳೆ, ಎಣ್ಣೆ ,ಸಕ್ಕರೆ ಮುಂತಾದ ಆಹಾರ ಸಾಮಗ್ರಿಗಳನ್ನು (ಪದಾರ್ಥಗಳನ್ನು) ಕೊಟ್ಟರೆ ಅನುಕೂಲವಾಗುತ್ತದೆ ಎಂದು ರಾಜ್ಯದ 93 ಪರ್ಸೆಂಟ್ ಜನ ಅಭಿಪ್ರಾಯಪಟ್ಟಿದ್ದಾರೆ. ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಗೂ ಉಪ ಮುಖ್ಯಮಂತ್ರಿ ,ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ಜೊತೆ ಚರ್ಚಿಸಿ ಯಾವ ರೀತಿ ಮಾಡಬೇಕು ಅನ್ನೋದನ್ನು ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
ಒಟ್ಟಾರೆ ರಾಜ್ಯ ಸರ್ಕಾರ ನೇರವಾಗಿ ಅಕ್ಕಿಯನ್ನು ಕೊಡುವುದರ ಬದಲಾಗಿ ಹಕ್ಕಿಯ ಜೊತೆ ಬೇಳೆ ಸಕ್ಕರೆ ಎಣ್ಣೆ ಮುಂತಾದ ಪದಾರ್ಥಗಳನ್ನು ನೀಡಿ ಎಂದು ಗ್ರಾಹಕರು ಕೇಳುತ್ತಿದ್ದು. ಇದರ ಅಂತಿಮ ತೀರ್ಮಾನ ಸರ್ಕಾರ ಕೈಗೊಳ್ಳಬೇಕಾಗುತ್ತದೆ ಎಂದರು.ರಾಜ್ಯ ಸರ್ಕಾರ ಘೋಷಿಸಿದ್ದ ಹೆಚ್ಚುವರಿ 5 ಕೆಜಿ ಅಕ್ಕಿ ಸಿಗದ ಕಾರಣ, ಅಖ್ಕಿ ಬದಲು ಹಣವನ್ನು ಸರ್ಕಾರ ಫಲಾನುಭವಿಗಳಿಗೆ ನೀಡುತ್ತಿತ್ತು. ತಲಾ ಒಂದು ಕೆಜಿಗೆ 34 ರೂಪಾಯಿಯಂತೆ 170 ರೂಪಾಯಿ ಖಾತೆ ನೀಡಲಾಗುತ್ತಿತ್ತು.