ಭರವಸೆಯಂತೆ ನಾಳೆ ಅನ್ನಭಾಗ್ಯ ಜಾರಿ…..!

ಬೆಂಗಳೂರು: 

      ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡು ಹೊಂದಿರುವವರಿಗೆ ನೀಡುವ 5 ಕೆಜಿ ಅಕ್ಕಿ  ಜೊತೆ ಉಳಿದ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡುವುದಾಗಿ ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿದ್ದು, ಅದರಂತೆ ನಾಳೆ ಯೋಜನೆ ಜಾರಿಗೆ ಬರಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಕೆ.ಹೆಚ್​.ಮುನಿಯಪ್ಪ ತಿಳಿಸಿದ್ದಾರೆ.  

    ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಕೇಂದ್ರದ 5 ಕೆಜಿ ಅಕ್ಕಿ ವಿತರಣೆ ಜೊತೆ ಉಳಿದ 5 ಕೆಜಿ ಅಕ್ಕಿ ಬದಲಿಗೆ ಸದ್ಯಕ್ಕೆ ಕುಟುಂಬದ ಪ್ರತಿ ವ್ಯಕ್ತಿಗೆ 170 (ಪ್ರತಿ ಕೆ.ಜಿಗೆ 34 ರೂಪಾಯಿಗಳಂತೆ) ನೀಡುತ್ತೇವೆ. 90 ಪರ್ಸೆಂಟ್​ ಫಲಾನುಭವಿಗಳಲ್ಲಿ ಖಾತೆಗಳಿವೆ. ಅಕೌಂಟ್ ಇಲ್ಲದವರು  ಮಾಡಿಸಿಕೊಳ್ಳಬೇಕು. ಒಬ್ಬರಿಗೆ 170 ರೂಪಾಯಿ ಕೊಡುತ್ತೇವೆ. ಅಕ್ಕಿ ಸಿಗುವರೆಗೆ ಮಾತ್ರ ಈ ಹಣ ನೀಡುವ ವ್ಯವಸ್ಥೆಯಿರುತ್ತದೆ ಎಂದರು. 

 

ಪ್ರದೇಶವಾರು ಧಾನ್ಯ ವಿತರಣೆ: 

    ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಅಕ್ಕಿಯನ್ನು ಮೂರೂ ಹೊತ್ತು ಜನರು ಸೇವಿಸುವುದಿಲ್ಲ. ದಕ್ಷಿಣ ಭಾಗದ ಜನರಿಗೆ ರಾಗಿ ನೀಡುತ್ತೇವೆ. ಉತ್ತರ ಕರ್ನಾಟಕ ಜನರಿಗೆ ಜೋಳ ಕೊಡುತ್ತೇವೆ. ರಾಗಿ ದಾಸ್ತಾನು ಇದೆ, ಜೋಳ ದಾಸ್ತಾನು ಇಲ್ಲ. ದಾಸ್ತಾನು ಆದ ಬಳಿಕ ಧಾನ್ಯಗಳ ಹಂಚಿಕೆ ಮಾಡುತ್ತೇವೆ. ಎಂಎಸ್ ಪಿ ಮೂಲಕ ಧಾನ್ಯ ಖರೀದಿ ಮಾಡುತ್ತೇವೆ. ಎರಡು ಕೆಜಿ, ಜೋಳ ಅಥವಾ ರಾಗಿ ಕೊಡುತ್ತೇವೆ. ಎಂಟು ಕೆಜಿ ಅಕ್ಕಿ ಕೊಡುತ್ತೇವೆ. ಮಾತು ಕೊಟ್ಟಂತೆ ನಾಳೆಯಿಂದ ಜಾರಿ ಖಂಡಿತ ಎಂದರು. 

    ನಾಳೆಯಿಂದಲೇ ಫಲಾನುಭವಿಗಳ ಖಾತೆಗೆ ಹಣ: ಕೇಂದ್ರ ಸರ್ಕಾರ ಮನಸ್ಸು ಬದಲಾಯಿಸಿ ಅಕ್ಕಿ ಕೊಟ್ಟರೆ ನಾವು ಅಕ್ಕಿ ಹಂಚಿಕೆ ಮಾಡುತ್ತೇವೆ. ಕೇಂದ್ರದ ಬಳಿ ಅಕ್ಕಿ ದಾಸ್ತಾನು ಇದೆ. ಇಲ್ಲವೆ ಟೆಂಡರ್ ಕರೆದು ಅಕ್ಕಿ ಖರೀದಿ ಮಾಡುತ್ತೇವೆ. ಹಣ ರೆಡಿ ಇದೆ, ಅಕೌಂಟ್ ಗೆ ವರ್ಗಾವಣೆ ಆಗುತ್ತದೆ. ನಾಳೆಯಿಂದಲೇ ಖಾತೆಗೆ ಹಣ ಹಾಕುತ್ತೇವೆ. ಅನ್ನಭಾಗ್ಯ ಯೋಜನೆ ಜಾರಿಗೆಗೆ ಸಮಾವೇಶ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

     ರಾಜ್ಯದಲ್ಲಿ ಒಟ್ಟು 1 ಕೋಟಿ 28 ಲಕ್ಷ ಬಿಪಿಎಲ್, ಅಂತ್ಯೋದಯ ಕಾರ್ಡ್‌ದಾರರು ಇದ್ದು, 4 ಕೋಟಿ 42 ಲಕ್ಷ ಫಲಾನುಭವಿಗಳಿದ್ದಾರೆ. 1 ಕೋಟಿ 28 ಲಕ್ಷ ಕಾರ್ಡ್ ಗಳ ಪೈಕಿ 99.99% ಆಧಾರ್ ಸೀಡಿಂಗ್ ಆಗಿದೆ. ಇನ್ನು 1.22 ಕಾರ್ಡ್‌ದಾರರ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದೆ. ಇನ್ನುಳಿದ ಬಾಕಿ ಉಳಿದಿರುವ 6 ಲಕ್ಷ ಕಾರ್ಡ್‌ಗಳು ಆಧಾರ್ ಲಿಂಕ್ ಆಗಬೇಕು. ಆಧಾರ್ ಲಿಂಕ್ ಆಗುತ್ತಿದ್ದಂತೆಯೇ ಬ್ಯಾಂಕ್ ಅಕೌಂಟ್ ಕೂಡ ಕಾರ್ಡ್ ಗಳಿಗೆ ಅಪ್ಡೇಟ್ ಆಗುತ್ತದೆ. ಹೀಗಾಗಿ ಗೊಂದಲಕ್ಕೆ ಅವಕಾಶವಿಲ್ಲ ಎಂದು ಸಚಿವರು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap