ಬೆಂಗಳೂರು
ಐದು ಮಹತ್ವದ ಉಚಿತ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಅವುಗಳನ್ನು ಜಾರಿ ಮಾಡಿದೆ. ಆದರೆ, ಅಧಿಕಾರಕ್ಕೆ ಬಂದು ವರ್ಷ ಆಗುತ್ತಿದ್ದಂತೆಯೇ ಒಂದೊಂದು ಯೋಜನೆಗಳಿಗೆ ಅದ್ಯಾಕೋ ಗ್ರಹಣ ಬಡಿದಂತಾಗುತ್ತಿದೆ. ಸದ್ಯ ಗೃಹಲಕ್ಷ್ಮಿ ಯೋಜನೆಯಡಿ ನೀಡುತ್ತಿದ್ದ 2,000 ರೂ. ಎರಡು ತಿಂಗಳುಗಳಿಂದ ಫಲಾನುಭವಿಗಳ ಖಾತೆಗೆ ವರ್ಗವಾಗಿಲ್ಲ. ಇದೀಗ ಅನ್ನಭಾಗ್ಯದ ಹಣ ಕೂಡ 2 ತಿಂಗಳಿನಿಂದ ಬಂದಿಲ್ಲ ಅಂತ ಬಿಪಿಎಲ್ ಫಲಾನುಭವಿಗಳು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ಕಿಯ ಕೊರತೆ ಕಾರಣ ನೀಡಿ ಬಿಪಿಎಲ್ ಕಾರ್ಡ್‌ದಾರ ಕುಟುಂಬಗಳ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಬದಲಾಗಿ ಸರಕಾರ ಫಲಾನುಭವಿಗಳ ಮುಖ್ಯಸ್ಥರ ಖಾತೆಗೆ ಹಣ ವರ್ಗಾವಣೆ ಮಾಡುತ್ತಿತ್ತು. ಪ್ರತಿ ಕೆಜಿ ಅಕ್ಕಿಗೆ ತಲಾ 34ರೂ.ನಂತೆ ಒಟ್ಟು 5 ಕೆಜಿ ಅಕ್ಕಿಗೆ 170ರೂ ನೀಡಲಾಗುತ್ತಿತ್ತು. ಅದರಂತೆ ಫಲಾನುಭವಿಗಳ ಖಾತೆಗೆ ಹಣ ಕೂಡ ಜಮಾವಣೆಯಾಗುತ್ತಿತ್ತು. ಆದರೆ, ಕಳೆದ ಎರಡು ತಿಂಗಳಿಂದ ಹಣ ಪಾವತಿಯಾಗಿಲ್ಲ. ಹೀಗಾಗಿ ಫಲಾನುಭವಿಗಳು ಪ್ರತಿದಿನ ಬೆಂಗಳೂರು ಒನ್ ಹಾಗೂ ಬ್ಯಾಂಕ್ಗಳನ್ನ ಸುತ್ತುತ್ತಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಾವೇನೂ ಸಿದ್ದರಾಮಾಯ್ಯನವರನ್ನ ದುಡ್ಡೇ ಕೊಡಿ, ಅಕ್ಕಿಕೊಡಿ, ಫ್ರಿ ಬಸ್ ಕೊಡಿ ಅಂತ ಹೇಳಿಲ್ಲ. ಆದರೆ ಅಧಿಕಾರಕ್ಕೆ ಬರುವ ಆಸೆಗಾಗಿ ಯೋಜನೆ ಜಾರಿ ಮಾಡಿ, ಸ್ವಲ್ಪ ದಿನ ಕೊಟ್ಟು ಜನರಿಗೆ ಮೋಸ ಮಾಡಿದ್ದಾರೆ. ಸರ್ಕಾರ ಕೊಡುವ ದುಡ್ಡನ್ನು ನಂಬಿ ನಾವು ಜೀವನ ಮಾಡುತ್ತಿಲ್ಲ. ಆದರೆ ಕೊಡುತ್ತೇವೆ ಎಂದು ಮೋಸ ಮಾಡಿದರು ಎಂದು ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದುಡ್ಡು ಬರುತ್ತದೆ ಎಂದು ಇ-ಕೆವೈಸಿ ಮಾಡಿ, ಪಾನ್ ಲಿಂಕ್ ಮಾಡ್ಸಿ, ಆಧಾರ್ ಲಿಂಕ್ ಮಾಡ್ಸಿ ಎಂದು ಬೆಂಗಳೂರು ಒನ್ ಕೇಂದ್ರಗಳಲ್ಲಿ ವಾರಗಟ್ಟಲೆ ನಿಂತು ಅರ್ಜಿ ಸಲ್ಲಿಕೆ ಮಾಡಿದೆವು. ಈಗ ನೋಡಿದರೆ ಹಣವೂ ಇಲ್ಲ, ಅಕ್ಕಿಯೂ ಇಲ್ಲ. ನಮಗೆ ದುಡ್ಡು ಕೊಡದೇ ಇದ್ದರೂ ಪರ್ವಾಗಿಲ್ಲ. ಆದರೆ ಅಕ್ಕಿಯನ್ನಾದರೂ ಕೊಡಿ ಎಂದು ಫಲಾನುಭವಿ ಕಮಲ ಎಂಬವರು ಆಗ್ರಹಿಸಿದ್ದಾರೆ.ಈ ಕುರಿತಾಗಿ ನಾಗರೀಕ ಆಹಾರ ಸರಬರಾಜು ಇಲಾಖೆಯ ಸಚಿವರನ್ನ ಪ್ರಶ್ನಿಸಿದರೆ, ಸದ್ಯದಲ್ಲೆ ಹಣ ವರ್ಗಾವಣೆ ಮಾಡುತ್ತೇವೆ ಎಂದು ಹೇಳಿ ನುಣುಚಿಕೊಂಡಿದ್ದಾರೆ.
ಪ್ರತಿ ಮನೆಯ ಯಜಮಾನಿಯ ಬ್ಯಾಂಕ್ ಖಾತೆಗೆ ತಿಂಗಳಿಗೆ 2,000 ರೂ. ವರ್ಗಾವಣೆ ಮಾಡುವ ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ಎರಡು ತಿಂಗಳದ್ದು ಬಾಕಿ ಇದೆ. ಜೂನ್ ತಿಂಗಳ ಮೊತ್ತವನ್ನು ಕೆಲವು ದಿನಗಳ ಹಿಂದಷ್ಟೇ ಸರ್ಕಾರ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಿತ್ತು.
ಸರ್ಕಾರದಿಂದ ಹಣ ಬಿಡುಗಡೆ ವಿಳಂಬವಾಗುತ್ತಿರುವ ಕಾರಣ ಫಲಾನುಭವಿಗಳ ಖಾತೆಗೆ ವರ್ಗಾವಣೆ ತಡವಾಗುತ್ತಿದೆ. ಜುಲೈ, ಆಗಸ್ಟ್ ಗೃಹಲಕ್ಷ್ಮಿ ಹಣ ಶೀಘ್ರ ಫಲಾನುಭವಿಗಳ ಖಾತೆಗಳಿಗೆ ವರ್ಗವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿಎ ಲಕ್ಷ್ಮೀ ಹೆಬ್ಬಾಳ್ಕರ್ ಕೆಲವು ದಿನಗಳ ಹಿಂದೆ ತಿಳಿಸಿದ್ದರು.