ಬೆಂಗಳೂರು:
ಬಿಎಂಟಿಸಿ ಬಸ್‌ಗೆ ಇಂದು ಮತ್ತೊಬ್ಬರನ್ನು ಬಲಿ ಪಡೆದುಕೊಂಡಿದೆ. ಮಡಿವಾಳದ ಪೊಲೀಸ್ ಠಾಣೆ ಹತ್ತಿರ ನಡೆದುಕೊಂಡು ಹೋಗುತ್ತಿದ್ದ ವೃದ್ಧನ ಮೇಲೆ ಬಸ್ ಹರಿದಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಡಿವಾಳ ನಿವಾಸಿ ವೆಂಕಟರಾಮಯ್ಯ ಮೃತ ವ್ಯಕ್ತಿ. ಘಟನೆಗೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಜನರು ಅಕ್ರೋಶ ಹೊರಹಾಕಿದ್ದಾರೆ. ವೃದ್ಧನ ತಲೆ ಮೇಲೆಯೇ ಬಸ್ ಚಕ್ರಗಳು ಹರಿದಿದ್ದು, ತಲೆ ಛಿದ್ರವಾಗಿದೆ. ಮಡಿವಾಳ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂದೆಯಿಂದ ಬಂದ ಬಿಎಂಟಿಸಿ ಬಸ್ ವೃದ್ಧನಿಗೆ ಡಿಕ್ಕಿಯಾಗಿದೆಎ ಎಂದು ತಿಳಿದು ಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.
ಕಳೆದ ತಿಂಗಳು ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿ ಹೊಡೆದು ವೃದ್ಧೆಯೊಬ್ಬರು ಸಾವಿಗೀಡಾಗಿರುವ ಘಟನೆ ಸೆಂಟ್ರಲ್ ಸಿಲ್ಕ್ ಬೋರ್ಡ್ ಬಸ್ ನಿಲ್ದಾಣದ ಬಳಿ ನಡೆದಿತ್ತು. 62 ವರ್ಷದ ಹಿರಿಯ ನಾಗರಿಕರೊಬ್ಬರು ಎಲೆಕ್ಟ್ರಿಕ್ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದರು. ಬೆಂಗಳೂರಿನಲ್ಲಿ ಚಾಲಕರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಬಿಎಂಟಿಸಿ ಬಸ್ಸುಗಳಿಗೆ ಅನೇಕರು ಬಲಿಯಾಗುತ್ತಿದ್ದಾರೆ.
ಆಗಸ್ಟ್‌ನಲ್ಲಿ ಯಲಹಂಕದ ಬಳಿ 10 ವರ್ಷದ ಬಾಲಕಿ ಮೇಲೆ ಬಸ್ ಹರಿದು ಮೃತಪಟ್ಟ ಘಟನೆ ನಡೆದಿತ್ತು. ತನ್ವಿ (10) ಮೃತ ಬಾಲಕಿ. ತನ್ವಿ ಮಿಲಿಯನಿಯಂ ಸ್ಕೂಲ್‌ನಲ್ಲಿ 5 ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ತಾಯಿ ಹರ್ಷಿತಾ ಅವರು ಮಗಳನ್ನು ಸ್ಕೂಲ್‌ಗೆ ಬಿಡಲು ಹೋದಾಗ ದುರ್ಘಟನೆ ನಡೆದಿತ್ತು. ಹರ್ಷಿತಾ ಅವರು ಮಗಳನ್ನು ಹೋಂಡಾ ಆಕ್ಟಿವಾದಲ್ಲಿ ಸ್ಕೂಲ್‌ಗೆ ಬಿಡಲು ತೆರಳಿದ್ದ ವೇಳೆ ಸ್ಕೂಟರ್ ಯಲಹಂಕದ ಕೋಗಿಲು ಮುಖ್ಯ ರಸ್ತೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಹತ್ತಿರ ಸ್ಕಿಡ್ ಆಗಿತ್ತು. ಈ ವೇಳೆ ಸ್ಕೂಟರ್‌ನ ಹಿಂಬದಿ ಕುಳಿತಿದ್ದ ತನ್ವಿ ಕೆಳಕ್ಕೆ ಬಿದ್ದು, ಬಸ್‌ನ ಚಕ್ರದಡಿ ಸಿಲುಕಿದ್ದಳು. ಆಕೆಯ ಮೇಲೆಯೇ ಬಿಎಂಟಿಸಿ ಬಸ್‌ನ ಚಕ್ರ ಹರಿದಿದ್ದರಿಂದ ತನ್ವಿ ಸ್ಥಳದಲ್ಲೇ ಮೃತಪಟ್ಟಿದ್ದಳು.








