ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು….!

ಬೆಂಗಳೂರು: 

    ಮುಡಾ ಹಗರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮಂಗಳವಾರ ಮತ್ತೊಂದು ದೂರು ದಾಖಲಾಗಿದೆ .ಮುಡಾ ಹಗರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರಿಗೆ ದಾಖಲೆ ಸಮೇತ ಮತ್ತೊಂದು ದೂರು ದಾಖಲಾಗಿದ್ದು, ತಮ್ಮ ಪ್ರಭಾವ ಬಳಸಿ ಅಕ್ರಮವಾಗಿ ಜಮೀನು ಡಿನೋಟಿಫೈ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

   ಹೀಗಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಲು ಕೋರಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಎಂಬುವವರು ದೂರು ರಾಜ್ಯಪಾಲರಿಗೆ ನೀಡಿದ್ದಾರೆ.

   ರಾಜ್ಯಪಾಲರಿಗೆ ದಾಖಲೆ ಸಮೇತ ದೂರು ನೀಡಿರುವ ಮೈಸೂರು ಮೂಲದ ಸ್ನೇಹಮಯಿ ಕೃಷ್ಣ, ‘1979ರಲ್ಲಿ ಮೈಸೂರು ತಾಲೂಕು ವರುಣದ ಉತ್ತನಹಳ್ಳಿಯಲ್ಲಿ ಆಶ್ರಯ ಮನೆಗಳಿಗಾಗಿ ಭೂಸ್ವಾಧೀನ ಮಾಡಿದ್ದ ಜಮೀನಿಗೆ 30 ವರ್ಷದ ಬಳಿಕ ಡಿನೋಟಿಫೈ ಮಾಡುವಂತೆ ಸಿದ್ದರಾಮಯ್ಯ ಪತ್ರ ಬರೆದಿದ್ದರು. ಮರಪ್ಪ ಎಂಬುವವರ ಹೆಸರಿಗೆ 1.39 ಎಕರೆ ಜಮೀನು ಡಿನೋಟಿಫೈ ಮಾಡುವಂತೆ ಸಿದ್ದರಾಮಯ್ಯ ಶಿಫಾರಸು ಮಾಡಿದ್ದರು. ಮರಪ್ಪ ಎಂಬುವವರಿಗೆ ಸಂಬಂಧವೇ ಇರದಿದ್ದರೂ ನಕಲಿ ದಾಖಲೆ ಆಧರಿಸಿ ಮರಪ್ಪ ಹೆಸರಿಗೆ ಡಿನೋಟಿಫೈ ಮಾಡಲಾಗಿದೆ ಎಂದು ದೂರುದಾರರು ದೂರಿನಲ್ಲಿ ಆರೋಪಿಸಿದ್ದಾರೆ.

  ಅಂತೆಯೇ ಸಿದ್ದರಾಮಯ್ಯ ಪತ್ರ ಆಧರಿಸಿ 14 ತಿಂಗಳ ಬಳಿಕ 1.39 ಎಕರೆಯನ್ನು ಅಂದಿನ ಮೈಸೂರು ಡಿಸಿ ಡಿನೋಟಿಫೈ ಮಾಡಿದ್ದರು. ಆದರೆ, ಡಿಸಿ ಆದೇಶ ಪ್ರಶ್ನಿಸಿ ಫಲಾನುಭವಿಗಳು ಮರು ದೂರು ಸಲ್ಲಿಸಿದ್ದರು. ಮೂಲ ಜಮೀನಿನ ಮಾಲೀಕರು ಮರಪ್ಪ ಅಲ್ಲ, ಆದರೂ ಅವರ ಹೆಸರಿಗೆ ಡಿನೋಟಿಫೈ ಮಾಡಲಾಗಿದೆ. ಡಿನೋಟಿಫೈ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯ ಕೂಡ ಭಾಗಿಯಾದ ಹಿನ್ನೆಲೆ ಸಿಎಂ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ನೇಹಮಯಿ ಕೃಷ್ಣ ದೂರಿನಲ್ಲಿ ಮನವಿ ಮಾಡಿದ್ದಾರೆ. 

  ಮುಡಾ ಅಕ್ರಮದಲ್ಲಿ ಸಿಎಂ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಈಗಾಗಲೇ ಸಚಿವ ಸಂಪುಟ ರಾಜ್ಯಪಾಲರಿಗೆ ಉತ್ತರ ನೀಡಿದೆ. ರಾಜ್ಯ ಸರ್ಕಾರ ಕಳುಹಿಸಿರುವ ನಿರ್ಣಯವನ್ನು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಪರಿಶೀಲನೆ ಮಾಡುತ್ತಿದ್ದಾರೆ. ಒಂದೆಡೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಕೊಡಲು ಸಿದ್ಧತೆ ನಡೆಸುತ್ತಿದ್ದರೆ, ಮತ್ತೊಂದೆಡೆ ಸಿದ್ದರಾಮಯ್ಯ ತಂಡ ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ.

Recent Articles

spot_img

Related Stories

Share via
Copy link
Powered by Social Snap