ತುಮಕೂರು:
ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಗುಸುಗುಸು ಸ್ಫೋಟಗೊಂಡಿದ್ದು, ಭಾರೀ ಸಂಚಲನ ಮೂಡಿಸಿದೆ.
ಈ ನನ್ ಮಗ, ನಮ್ ಮಂತ್ರಿ ಹೇಂಗೆ ಗೊತ್ತಾ? ದಕ್ಷಿಣ ಕೋರಿಯಾದ ಕಿಂಗ್ ಪಿನ್ ಇದಾನಲ್ಲ ಅವನಂತೆ. ಕೆಟ್ಟ ನನ್ಮಗ. ಇವನಿಂದ ಜಿಲ್ಲೆಯಲ್ಲಿ ಒಂದು ಸೀಟ್ ಬರೋಲ್ಲ… ಹಾಳು ಮಾಡಿಬಿಟ್ಟಿದ್ದಾನೆ ನಮ್ಮ ಜಿಲ್ಲೆಯನ್ನ.
ಮಾತು ಎತ್ತಿದ್ರೆ ಹೊಡಿ ಬಡಿ ಕಡಿ ಅಂತಾನೆ… ಎಂದು ಸುದ್ದಿಗೋಷ್ಠಿಯಲ್ಲೇ ಕುಳಿತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜುಗೆ ಸಂಸದ ಜಿ.ಎಸ್.ಬಸವರಾಜು ಚಾಡಿ ಹೇಳುತ್ತಿದ್ದ ವಿಡಿಯೋ ವೈರಲ್ ಆಗಿದೆ.
ತುಮಕೂರು ನಗರದಲ್ಲಿ ವಿವಿಧ ಕಟ್ಟಡಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಗುರುವಾರ ಸುದ್ದಿಗೋಷ್ಠಿಗೆ ಸಂಸದ ಜಿ.ಎಸ್.ಬಸವರಾಜು ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಆಗಮಿಸಿದ್ದರು.
ಇಬ್ಬರೂ ಪಕ್ಕದಲ್ಲೇ ಕುಳಿತು ಕುಶಲೋಪರಿ ವಿಚಾರಿಸುತ್ತಾ ಗುಸುಗುಸು ಮಾತನಾಡಲು ಶುರು ಮಾಡಿದರು. ಆ ವೇಳೆ ಸಚಿವರ ಕಿವಿಯಲ್ಲಿ ಪಿಸುಗುಟ್ಟಿದ ಜಿಎಸ್ಬಿ, ‘ಈ ನನ್ ಮಗ, ನಮ್ ಮಂತ್ರಿ ಹೇಂಗೆ ಗೊತ್ತಾ? ದಕ್ಷಿಣ ಕೋರಿಯಾದ ಕಿಂಗ್ ಪಿನ್ ಇದಾನಲ್ಲ ಅವನಂತೆ.
ಕೆಟ್ಟ ನನ್ಮಗ. ಇವನಿಂದ ಜಿಲ್ಲೆಯಲ್ಲಿ ಒಂದು ಸೀಟ್ ಬರೋಲ್ಲ… ಹಾಳು ಮಾಡಿಬಿಟ್ಟಿದ್ದಾನೆ ನಮ್ಮ ಜಿಲ್ಲೆಯನ್ನ…’ ಎಂದು ಚಾಡಿ ಹೇಳುತ್ತಾ ಬೈಯ್ಯುತ್ತಲೇ ಇದ್ದರು. ‘ಸುಮ್ಮನಿರು ಆಮೇಲೆ ಮಾತಾಡೋಣ’ ಎಂದು ಬೈರತಿ ಹೇಳಿದರೂ ಸಂಸದರು ಮಾತ್ರ ಬೈಯ್ಯುತ್ತಲೇ ಇದ್ದರು.
‘ಹಾಳು ಮಾಡಿಬಿಟ್ಟಿದ್ದಾನೆ ನಮ್ಮ ಜಿಲ್ಲೆಯನ್ನ. ಒಂದು ಸೀಟ್ ಬರಲ್ಲ. ಮಾತು ಎತ್ತಿದ್ರೆ ಹೊಡಿ, ಬಡಿ, ಕಡಿ ಅಂತಾನೆ. ಅವನ್ಯಾರೋ ಎಕ್ಸಿಕ್ಯೂಟಿವ್ ಇಂಜಿನಿಯರ್ಗೆ ಹೆಂಡ್ತಿ ಸೀರೆ ಹೊಗೆಯೋಕೆ ಲಾಯಕ್ ನೀನು ಅಂತ ಈ ಮಿನಿಸ್ಟರ್ ಹೇಳ್ತಾನೆ. ಒಂದು ಹ್ಯಾಂಡ್ ಬಿಲ್ ಪ್ರಿಂಟ್ ಮಾಡಿಸಲ್ಲ.
ಮೊನ್ನೆ ಸಾವಿರ ಕೋಟಿ ಡಿಕ್ಲೈರ್ ಮಾಡಿಕೊಂಡು ಬಂದವ್ನೆ. ನಮಗೆ ಯಾರಿಗೂ ಇನ್ವಿಟೇಶನ್ ಇಲ್ಲ, ಕರೆಯೋದು ಇಲ್ಲ’ ಎಂದು ಸಚಿವ ಮಾಧುಸ್ವಾಮಿ ಅವರ ಹೆಸರೇಳದೆ ಸಂಸದರು ಚಾಡಿ ಹೇಳುತ್ತಿರುವ ದೃಶ್ಯ ಮಾಧ್ಯಗಳಲ್ಲಿ ರೆಕಾರ್ಡ್ ಆಗಿದೆ.
ಕಳೆದ ಅಕ್ಟೋಬರ್ನಲ್ಲಿ ಕಾಂಗ್ರೆಸ್ನಲ್ಲೂ ಇಂತಹದ್ದೇ ಗುಸುಗುಸು ಭಾರೀ ಕೋಲಾಹಲವನ್ನೇ ಸೃಷ್ಟಿಸಿತ್ತು. ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ವೇಳೆ ಡಿಕೆಶಿ ಆಪ್ತ ಸಲೀಂ ಮತ್ತು ಮಾಜಿ ಸಂಸದ ಉಗ್ರಪ್ಪ ಅವರು ಡಿ.ಕೆ.ಶಿವಕುಮಾರ್ ಬಗ್ಗೆ ಗುಸುಗುಸು ಮಾತನಾಡಿಕೊಂಡರು.
‘ಡಿಕೆಶಿ ದೊಡ್ಡ ಸ್ಕ್ರ್ಯಾಮ್, ಕಲೆಕ್ಷನ್ ಗಿರಾಕಿ’ ಎಂದು ಡಿಕೆಶಿ ಆಪ್ತ ಹೇಳಿದ್ರೆ, ಅತ್ತ ಉಗ್ರಪ್ಪ, ‘ನಿಮಗೆ ಗೊತ್ತಿಲ್ಲ ನಾವೆಲ್ಲ ಪಟ್ಟು ಹಿಡಿದು ಅಧ್ಯಕ್ಷ ಸ್ಥಾನ ಕೊಡಿಸಿದ್ದು, ಆದರೆ ತಕ್ಕಡಿ ಮೇಲೆ ಹೇಳುತ್ತಿಲ್ಲ.’ ಎಂದಿದ್ದ ಸಂಭಾಷಣೆ ವೈರಲ್ ಆಗಿತ್ತು.