ನವದೆಹಲಿ:
ಇಂಗ್ಲೆಂಡ್‌ನಲ್ಲಿ ನಡೆಯುವ ದಿ ಹಂಡ್ರೆಡ್ ಟೂರ್ನಿಯ ಡ್ರಾಫ್ಟ್ ಮುಕ್ತಾಯವಾಗಿದೆ ಮತ್ತು ದೊಡ್ಡ ಸುದ್ದಿಯೆಂದರೆ ಈ ಇಂಗ್ಲಿಷ್ ಲೀಗ್‌ನಲ್ಲಿ ಪಾಕಿಸ್ತಾನದ ಯಾವುದೇ ಆಟಗಾರ ಆಯ್ಕೆಯಾಗಿಲ್ಲ. ಐದು ಮಂದಿ ಮಹಿಳಾ ಆಟಗಾರ್ತಿಯರು ಸೇರಿದಂತೆ 50 ಮಂದಿ ಪಾಕಿಸ್ತಾನ ಆಟಗಾರರು ತಮ್ಮ ಹೆಸರುಗಳನ್ನು ನೀಡಿದ್ದರು ಆದರೆ ಒಂದೇ ಒಂದು ತಂಡವೂ ಅವರನ್ನು ಖರೀದಿಸಲಿಲ್ಲ. ಪಾಕಿಸ್ತಾನ ತಂಡದ ಪ್ರಮುಖ ಆಟಗಾರರಾದ ನಸೀಮ್ ಶಾ, ಶದಾಬ್ ಖಾನ್, ಹಸನ್ ಅಲಿ, ಶಾನ್ ಮಸೂದ್, ಸೈಮ್ ಆಯುಬ್ ದಿ ಹಂಡ್ರೆಡ್‌ನಲ್ಲಿ ಆಡಲು ಬಯಸಿದ್ದರು ಆದರೆ ಯಾರೂ ಅವರನ್ನು ಖರೀದಿಸಲಿಲ್ಲ. ಈ ಸುದ್ದಿ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಿಗೆ ತುಂಬಾ ನಿರಾಶೆಯನ್ನುಂಟು ಮಾಡಿದೆ.
2025ರ ‘ದಿ ಹಂಡ್ರೆಡ್’ ಸೀಸನ್‌ನ ಆಟಗಾರರ ಡ್ರಾಫ್ಟ್‌ನಲ್ಲಿ ಯಾವುದೇ ಪಾಕಿಸ್ತಾನಿ ಆಟಗಾರನಿಗೆ ಸ್ಥಾನ ಸಿಕ್ಕಿಲ್ಲ. ಪುರುಷರ ಡ್ರಾಫ್ಟ್‌ನಲ್ಲಿ ಪಾಕಿಸ್ತಾನದ 45 ಆಟಗಾರರು ನೋಂದಾಯಿಸಿಕೊಂಡಿದ್ದರು, ಆದರೆ ಅವರಲ್ಲಿ ಯಾರನ್ನೂ ತಂಡಗಳು ಖರೀದಿಸಲು ಮನಸು ಮಾಡಲಿಲ್ಲ. ಈ ನಿರ್ಧಾರ ಸ್ವಲ್ಪ ಆಶ್ಚರ್ಯಕರವಾಗಿದೆ, ಏಕೆಂದರೆ ಕಳೆದ ಋತುವಿನಲ್ಲಿ ‘ದಿ ಹಂಡ್ರೆಡ್’ ನಲ್ಲಿ ಪಾಕಿಸ್ತಾನಿ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದರು. ಒಸಾಮಾ ಮಿರ್, ಹ್ಯಾರಿಸ್ ರೌಫ್, ಇಮಾದ್ ವಾಸಿಮ್ ಮತ್ತು ಶಾಹೀನ್ ಅಫ್ರಿದಿಯಂತಹ ಆಟಗಾರರು ಈ ಲೀಗ್‌ನಲ್ಲಿ ಆಡಿ ಮಿಂಚಿದ್ದರು.
ಈ ವರ್ಷ ‘ದಿ ಹಂಡ್ರೆಡ್’ ನಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು (ECB) ಫ್ರಾಂಚೈಸಿಗಳಲ್ಲಿ ಹೊರಗಿನ ಹೂಡಿಕೆಯನ್ನು ಕೂಡ ಆಹ್ವಾನಿಸಿತ್ತು ಮತ್ತು ಇದೀಗ ಐಪಿಎಲ್ ತಂಡಗಳ ಪೈಕಿ ನಾಲ್ಕು ಫ್ರಾಂಚೈಸಿಗಳು ಕೂಡ ದಿ ಹಂಡ್ರೆಡ್ ಟೂರ್ನಿಗೆ ಎಂಟ್ರಿ ನೀಡಿವೆ. ಪ್ರಶ್ನೆ ಏನೆಂದರೆ, ಐಪಿಎಲ್ ಫ್ರಾಂಚೈಸಿಗಳಿಂದಾಗಿ ಪಾಕಿಸ್ತಾನ ನಷ್ಟ ಅನುಭವಿಸಿದೆಯೇ? ಏಕೆಂದರೆ 2008 ರ ಮುಂಬೈ ದಾಳಿಯ ನಂತರ, ಪಾಕಿಸ್ತಾನಿ ಆಟಗಾರರಿಗೆ ಐಪಿಎಲ್‌ನಲ್ಲಿ ಆಡಲು ಅವಕಾಶ ನೀಡಲಾಗಿಲ್ಲ ಮತ್ತು ಈ ಬಾರಿ ದಿ ಹಂಡ್ರೆಡ್‌ನಲ್ಲಿ ಪಾಕಿಸ್ತಾನಿ ಆಟಗಾರರ ಹಠಾತ್ ಕಣ್ಮರೆ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕುತ್ತಿದೆ. ಆದರೆ ಇಲ್ಲಿರುವ ದೊಡ್ಡ ಪ್ರಶ್ನೆಯೆಂದರೆ, ಐಪಿಎಲ್ ತಂಡಗಳ ಒಡೆತನದಲ್ಲಿಲ್ಲದ ಇತರ ನಾಲ್ಕು ತಂಡಗಳು ಪಾಕಿಸ್ತಾನಿ ಆಟಗಾರರನ್ನು ಏಕೆ ಖರೀದಿಸಲಿಲ್ಲ ಎಂಬುದು.
ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿರುವ ಎಲ್ಲಾ ಆರು ತಂಡಗಳು ಸಹ ಐಪಿಎಲ್ ಫ್ರಾಂಚೈಸಿಗಳ ಒಡೆತನದಲ್ಲಿವೆ ಮತ್ತು ಇಲ್ಲಿಯವರೆಗೆ ಒಬ್ಬ ಪಾಕಿಸ್ತಾನಿ ಆಟಗಾರನೂ ಈ ಲೀಗ್‌ನಲ್ಲಿ ಸ್ಥಾನ ಪಡೆದಿಲ್ಲ. ‘ದಿ ಹಂಡ್ರೆಡ್’ ನಲ್ಲಿ ಐಪಿಎಲ್ ಹೂಡಿಕೆ ಮಾಡಿದ ನಂತರ, ಪಾಕಿಸ್ತಾನಿ ಆಟಗಾರರ ಮೇಲೆ ‘ಮೃದು ನಿಷೇಧ’ ಹೇರಬಹುದೆಂಬ ಭಯವಿತ್ತು. ಆದಾಗ್ಯೂ, ಪಾಕಿಸ್ತಾನಿ ಆಟಗಾರರ ಭಾಗವಹಿಸುವಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಇಸಿಬಿ ಅಧ್ಯಕ್ಷ ರಿಚರ್ಡ್ ಗೌಲ್ಡ್ ಕಳೆದ ತಿಂಗಳು ಸ್ಪಷ್ಟಪಡಿಸಿದ್ದರು. ಆದರೆ ಡ್ರಾಫ್ಟ್ ನಂತರ, ಈಗ ಪಾಕಿಸ್ತಾನಿ ಅಭಿಮಾನಿಗಳು ಈ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಪಾಕಿಸ್ತಾನ ಆಟಗಾರರ ಜೊತೆಗೆ ಇಂಗ್ಲೆಂಡ್ ಹಿರಿಯ ವೇಗಿ ಜೇಮ್ಸ್ ಆಂಡರ್ಸನ್ ಅವರು ಕೂಡ ದಿ ಹಂಡ್ರೆಡ್ ಟೂರ್ನಿಯಲ್ಲಿ ಅನ್‌ಸೋಲ್ಡ್ ಆಗಿದ್ದಾರೆ. ಅಫಘಾನಿಸ್ತಾನ ತಂಡದ ಎಡಗೈ ಸ್ಪಿನ್ನರ್ ನೂರ್ ಅಹ್ಮದ್ ಹಾಗೂ ನ್ಯೂಜಿಲೆಂಡ್ ತಂಡದ ಆಲ್‌ರೌಂಡರ್ ಮೈಕಲ್ ಬ್ರೇಸ್‌ವೆಲ್ ಅವರು ಕ್ರಮವಾಗಿ 2.25 ಕೋಟಿ ರೂ. ಗಳಿಗೆ ಸೋಲ್ಡ್ ಆಗಿದ್ದಾರೆ. ನೂರ್ ಅಹ್ಮದ್ ಮ್ಯಾಂಚೆಸ್ಟರ್ ಒರಿಜಿನಲ್ಸ್‌ಗೆ ಸೇರಿದರೆ, ಮೈಕಲ್ ಬ್ರೇಸ್‌ವೆಲ್ ಅವರು ಸೌಥೆರ್ನ್ ಬ್ರೇವ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಲಂಡನ್ ಸ್ಪಿರಿಟ್ಸ್ ತಂಡಕ್ಕೆ ಡೇವಿಡ್ ವಾರ್ನರ್ ಸೇರ್ಪಡೆಯಾಗಿದ್ದಾರೆ.
