ಬೆಂಗಳೂರು:
ಬೆಂಗಳೂರಿನ ಮತ್ತೊಂದು ಸಿಂಗಲ್ ಸ್ಕ್ರೀನ್ ಥಿಯೇಟರ್ ಬಾಗಿಲು ಹಾಕಿದ್ದು, ಬೆಂಗಳೂರಿನ ಅತಿದೊಡ್ಡ ಚಿತ್ರಮಂದಿರಗಳಲ್ಲಿ ಒಂದಾಗಿದ್ದ ಸ್ಯಾಂಕಿ ರಸ್ತೆಯ ʻಕಾವೇರಿʼ ಚಿತ್ರಮಂದಿರ ಈಗ ಶಾಶ್ವತವಾಗಿ ಮುಚ್ಚಿದೆ ಎಂದು ಹೇಳಲಾಗಿದೆ.
ಒಟಿಟಿ , ಮಲ್ಟಿಪ್ಲೆಕ್ ಇತ್ಯಾದಿ ಕಾರಣಗಳಿಂದ ಇತ್ತೀಚೆಗೆ ಚಿತ್ರಮಂದಿರಗಳು ಮುಚ್ಚುತ್ತಿದ್ದು, ಕಲೆಕ್ಷನ್, ಜನರ ಆಗಮನ ಕೂಡ ಕಡಿಮೆಯಾಗಿದ್ದು, ಹಲವು ಚಿತ್ರಮಂದಿರಗಳು ಮುಚ್ಚುವ ನಿರ್ಧಾರಕ್ಕೆ ಬಂದಿದೆ. ಇದೀಗ ಈ ಪಟ್ಟಿದೆ ಸ್ಯಾಂಕಿ ರಸ್ತೆಯ ʻಕಾವೇರಿʼ ಚಿತ್ರಮಂದಿರ ಕೂಡ ಸೇರಿದ್ದು, ಸುಮಾರು 50 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಕಾವೇರಿ ಚಿತ್ರ ಮಂದಿರ ಇದೀಗ ಶಾಶ್ವತವಾಗಿ ಮುಚ್ಚಲ್ಪಟ್ಟಿದೆ.
1974ರ ಜನವರಿ 11ರಂದು ಡಾ. ರಾಜ್‌ಕುಮಾರ್ ನಟನೆಯ ‘ಬಂಗಾರದ ಪಂಜರ’ ಸಿನಿಮಾ ಪ್ರದರ್ಶನದ ಮೂಲಕ ʻʻಕಾವೇರಿʼʼ ಚಿತ್ರಮಂದಿರ ಶುರುವಾಗಿತ್ತು. ಅಂದಿನಿಂದ ಇಲ್ಲಿಯವರೆಗೂ ಈ ಚಿತ್ರ ಮಂದಿರದಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ನಾನಾ ಭಾಷೆಯ ಚಿತ್ರಗಳು ತೆರೆಕಂಡಿದ್ದವು. ಸಿಂಗಲ್ ಸ್ಕ್ರೀನ್ ಆಗಿದ್ದರೂ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಈ ಚಿತ್ರಮಂದಿರದಲ್ಲಿ ಇತ್ತು. ಈ ಚಿತ್ರಮಂದಿರದಲ್ಲಿ ಸಿನಿಮಾದ ಚಿತ್ರೀಕರಣ ಕೂಡ ನಡೆದಿದೆ. ಪುನೀತ್ ರಾಜ್‌ಕುಮಾರ್ ಅಭಿನಯದ ‘ಪರಮಾತ್ಮ’ ಸಿನಿಮಾದ ಆರಂಭಿಕ ಸೀನ್ ಅನ್ನು ಇಲ್ಲಿಯೇ ಶೂಟಿಂಗ್ ಮಾಡಲಾಗಿತ್ತು.
ಉತ್ತರ ಬೆಂಗಳೂರಿಗರಿಗೆ ಇದೊಂದು ಸಾಂಸ್ಕೃತಿಕ ಸ್ಥಳವೇ ಆಗಿತ್ತು. ‘ಬಂಗಾರದ ಪಂಜರ, ‘ಶಂಕರಾಭರಣಂ’, ‘ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ’ ಸಿನಿಮಾಗಳು ಇಲ್ಲಿ 25 ವಾರ ಪ್ರದರ್ಶನ ಕಂಡಿದ್ದವು. ಈ ವರ್ಷ ಜನವರಿ 11ಕ್ಕೆ 50 ವರ್ಷ ಪೂರೈಸಿ, ಗೋಲ್ಡನ್ ಜ್ಯುಬಿಲಿ ಸಂಭ್ರಮಾಚರಣೆಯಲ್ಲಿತ್ತು. ಕಮಲ್ ಹಾಸನ್ ಅವರ ʼಇಂಡಿಯನ್ʼ (1996) 100 ದಿನ, ʼಕಾಂತಾರʼ 50 ದಿನಗಳ ಪ್ರದರ್ಶನ ಕಂಡಿದೆ. ಇದೀಗ ಈ ಭವ್ಯ ಇತಿಹಾಸದ ಚಿತ್ರಮಂದಿರಕ್ಕೆ ಬೀಗ ಬಿದ್ದಿದ್ದು, ಮುಂದೆ ಇಲ್ಲಿ ವಾಣಿಜ್ಯ ಕಟ್ಟಡ ತಲೆ ಎತ್ತುವ ಸಾಧ್ಯತೆ ಇದೆ. ಅದರಲ್ಲಿ ಮಲ್ಟಿ ಪ್ಲೆಕ್ಸ್ ಚಿತ್ರ ಮಂದಿರ ನಿರ್ಮಾಣ ಆಗುವ ಸಾಧ್ಯತೆಯೂ ಇದೆ.
ಇನ್ನು ಕಳೆದ 2 ವರ್ಷದಲ್ಲೇ ಬೆಂಗಳೂರಿನ 6 ಪ್ರಮುಖ ಥಿಯೇಟರ್ ಗಳು ಬೀಗ ಹಾಕಿವೆ. ಮೈಸೂರು ರಸ್ತೆಯಲ್ಲಿರುವ ನಳಂದಾ, ಉಮಾ, ಕೃಷ್ಣ, ಮೆಜೆಸ್ಟಿಕ್ ನಲ್ಲಿರುವ ಮೂವಿಲ್ಯಾಂಡ್, ತುಳಸಿ ಥಿಯೇಟರ್ ಗಳು ಈ ಹಿಂದೆ ಬಾಗಿಲು ಹಾಕಿದ್ದವು. ಇದೀಗ ಈ ಪಟ್ಟಿಗೆ ಇದೀಗ ಕಾವೇರಿ ಚಿತ್ರ ಮಂದಿರ ಸೇರ್ಪಡೆಯಾಗಿದೆ.
ಇನ್ನು ಚಿತ್ರಮಂದಿರ ನಡೆಸುವುದು ಕಷ್ಟ ಎಂಬ ಕಾರಣಕ್ಕೆ ಮಾಲೀಕರು ಪ್ರದರ್ಶನ ನಿಲ್ಲಿಸಿದ್ದಾರೆ. ಆ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣವಾಗಲಿದೆ ಎನ್ನಲಾಗಿದೆ. ಮೆಜೆಸ್ಟಿಕ್‌ನ ʻಕಪಾಲಿʼ ಚಿತ್ರಮಂದಿರದ ನಂತರ ಅತಿ ಹೆಚ್ಚು ಸಿಟ್ಟಿಂಗ್ ವ್ಯವಸ್ಥೆ ಇದ್ದ ಈ ಚಿತ್ರಮಂದಿರ ಆರಂಭವಾಗಿದ್ದಾಗ 1300ರಷ್ಟು ಸೀಟುಗಳ ವ್ಯವಸ್ಥೆ ಇತ್ತು. ಜತೆಗೆ ಮಿನಿ ಬಾಲ್ಕನಿ ಇದ್ದ ಕೆಲವೇ ಚಿತ್ರಮಂದಿರಗಳಲ್ಲಿ ಇದೂ ಒಂದಾಗಿತ್ತು.