ಚಾಮರಾಜನಗರ:
ಇಲ್ಲಿನ ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಸಾವಿನ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದು, ಹುಲಿಗಳ ಸಾವಿಗೆ ವಿಷಪ್ರಾಶನವೇ ಕಾರಣ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ದೃಢವಾಗಿದೆ. ಈ ಬೆನ್ನಲ್ಲೇ ಬಂಡೀಪುರ ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ಮತ್ತೊಂದು ಹುಲಿ ಅಸಹಜವಾಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. 4ರಿಂದ 5 ವರ್ಷ ವಯಸ್ಸಿನ ಹೆಣ್ಣು ಹುಲಿ ಸಾವನ್ನಪ್ಪಿದ್ದು, ಅರಣ್ಯ ಸಿಬ್ಬಂದಿ ಗಸ್ತಿನ ವೇಳೆ ಕಳೇಬರ ಪತ್ತೆಯಾಗಿದೆ. ಶನಿವಾರ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಐದು ಹುಲಿಗಳು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಐವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಹುಲಿಗಳ ಸಾವು ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಆಶ್ವಾಸನೆ ನೀಡಿದೆ. ಹುಲಿ ಸಾವು ಸಂಬಂಧ ಮೀಣ್ಯಂ ಅರಣ್ಯ ಪ್ರದೇಶ ಸಮೀಪದ ಗ್ರಾಮಸ್ಥರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಪೊಲೀಸರು ಗ್ರಾಮಸ್ಥರನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಾಹಿತಿ ಕಲೆಹಾಕುತ್ತಿದ್ದಾರೆ.
ಸದ್ಯ ಮೃತಪಟ್ಟಿರುವ 5 ಹುಲಿಗಳ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಅಂಗಾಂಗಗಳ ಪರೀಕ್ಷೆ ನಡೆಸಲು ಸ್ಯಾಂಪಲ್‌ಗಳನ್ನ ಲ್ಯಾಬ್‌ಗೆ ಕಳುಹಿಸಲಾಗಿದೆ. NTCA ನಿಯಮಾನುಸಾರ ಹುಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೂರು ಗುಂಪುಗಳಾಗಿ ಮಾದರಿ ಸಂಗ್ರಹಿಸಿರುವ ಪ್ರಾಣಿಶಾಸ್ತ್ರಜ್ಞರು ಮತ್ತು ಪಶು ವೈದ್ಯರು ಹುಲಿ ಸಾವಿಗೆ ಕಾರಣ ಪತ್ತೆ ಹಚ್ಚುತ್ತಿದ್ದಾರೆ. ಈ ನಡುವೆ ಹನೂರು ತಾಲೂಕಿನ ಗಾಜನೂರಿನ ಐವರನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.
ಹುಲಿಗಳು ಸಾವಿಗೂ ಮುನ್ನ ಒಂದೇ ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಇಬ್ಬರನ್ನು ಹುಲಿ ತಿಂದು ಹಾಕಿದೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು, ಹಸುವಿನ ಕಳೇಬರಕ್ಕೆ ವಿಷಹಾಕಿ ಹುಲಿಗಳನ್ನ ಕೊಂದಿರುವ ಶಂಕೆ ಇದೆ. ಯಳಂದೂರಿನ ಬಿಳಿಗಿರಿರಂಗನ ಬೆಟ್ಟ ವ್ಯಾಪ್ತಿಯ ರಾಮಯ್ಯನಪೋಡು ಬಳಿ ರಂಗಮ್ಮ ಎಂಬ ವೃದ್ಧೆಯನ್ನ ಹುಲಿ ಕೊಂದಿತ್ತು. ಇದರಿಂದ ಸ್ಥಳೀಯುರ ಬೆಚ್ಚಿಬಿದ್ದಿದ್ದರು. ಆ ಘಟನೆಯ ಕಹಿ ನೆನೆಪು ಮಾಸುವ ಮುನ್ನವೇ ಪುಟ್ಟಮ್ಮ ಎಂಬವರು ಹುಲಿ ದಾಳಿಗೆ ಸಾವನ್ನಪ್ಪಿದ್ದರು. ಇದೇ ಸೇಡಿಗೆ ಜನರು ಹುಲಿಗಳನ್ನ ಬಲಿಪಡೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ.








