ಕೊಚ್ಚಿ
ಎರ್ನಾಕುಲಂ ಉತ್ತರ ಪೊಲೀಸ್ ಠಾಣೆಯಲ್ಲಿ ಮದ್ಯದ ಅಮಲಿನಲ್ಲಿ ಗಲಾಟೆ ಸೃಷ್ಟಿಸಿದ ಆರೋಪದ ಮೇಲೆ ಖ್ಯಾತ ಮಲಯಾಳಿ ನಟ ವಿನಾಯಕನ್ ಅವರನ್ನು ಮಂಗಳವಾರ ಬಂಧಿಸಿ ಬಿಡುಗಡೆ ಮಾಡಲಾಗಿದೆ.
ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿ ಜತೆಗಿನ ವಿವಾದ ಇತ್ಯರ್ಥಗೊಳಿಸಲು ವಿನಾಯಕನ್ ಅವರನ್ನು ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು.
ರಾತ್ರಿ 7:30ರ ಸುಮಾರಿಗೆ ಠಾಣೆಗೆ ಆಗಮಿಸಿದ ಅವರು ಅಲ್ಲಿದ್ದ ಪೊಲೀಸ್ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದರು. ಸುಮಾರು 20 ನಿಮಿಷಗಳ ಕಾಲ ಆತನ ಅಶಿಸ್ತಿನ ವರ್ತನೆಯನ್ನು ಸಹಿಸಿಕೊಂಡ ಅಧಿಕಾರಿಗಳು ಅಂತಿಮವಾಗಿ ಆತನನ್ನು ಬಂಧಿಸಲು ನಿರ್ಧರಿಸಿದರು.
ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ್ದಕ್ಕಾಗಿ ನಟ ವಿನಾಯಕನ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ನಂತರ ನಟ ವಿನಾಯಕನ್ ಅವರನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು.
ಜಾಮೀನು ಮೇಲೆ ಬಿಡುಗಡೆಗೊಂಡ ಬಳಿಕ ವರದಿಗಾರರೊಂದಿಗೆ ಪ್ರತಿಕ್ರಿಯಿಸಿದ ವಿನಾಯಕನ್, ತನ್ನನ್ನು ಏಕೆ ಬಂಧಿಸಲಾಯಿತು ಎಂಬುದು ನನಗೆ ಗೊತ್ತಿಲ್ಲ. ನಾನು ಇಲ್ಲಿಗೆ ದೂರು ನೀಡಲು ಬಂದಿದ್ದೆ. ಆದರೆ ನನ್ನನ್ನು ಬಂಧಿಸಿ ಆಸ್ಪತ್ರೆಗೆ ಏಕೆ ಕರೆದೊಯ್ಯಲಾಯಿತು ಎಂಬುದನ್ನು ಪೊಲೀಸರನ್ನೇ ಕೇಳಿ ಎಂದು ಹೇಳಿದ್ದಾರೆ.
ನಟ ಕುಡಿದ ಮತ್ತಿನಲ್ಲಿದ್ದರು, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ನಂತರ ಪ್ರಕರಣ ದಾಖಲಿಸಲಾಗಿದೆ ಮತ್ತು ಪೊಲೀಸ್ ಠಾಣೆಯಲ್ಲಿ ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದ. ವೈದ್ಯಕೀಯ ಪರೀಕ್ಷೆಗಾಗಿ ಠಾಣೆಯಿಂದ ಹೊರಗೆ ಕರೆದುಕೊಂಡು ಹೋಗುತ್ತಿದ್ದಾಗಲೂ ಅವರು ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.