ಚಿಕ್ಕಬಳ್ಳಾಪುರ
ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಗಮನ ಸೆಳೆದ ಕ್ಷೇತ್ರವಾದ ಹಾಸನ ವಿಧಾನಸಭಾ ಕ್ಷೇತ್ರ ಈ ಬಾರಿಯ ಹೈವೋಲ್ಟೆಜ್ ಕ್ಷೇತ್ರವಾಗಿದ್ದು, ಹಾಸನದಲ್ಲಿ ರೇವಣ್ಣ ಕುಟುಂಬ ವಿರುದ್ದ ತೊಡೆ ತಟ್ಟಿದ್ದ ಪ್ರೀತಂ ಗೌಡ ಈಗಾಗಲೇ ಹಾಸನ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ರಾಜಕೀಯ ಎದುರಾಳಿ ಎಚ್.ಡಿ. ರೇವಣ್ಣ ವಿರುದ್ಧ ಸ್ಪರ್ಧಿಸಲು ಹೊಳೇನರಸೀಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ ಎನ್ನುವ ಸುದ್ದಿ ಚರ್ಚೆಯಾಗುತ್ತಿದೆ.
ಈ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಯಾರು ಎಲ್ಲಿಂದ ಬೇಕಾದ್ರೂ ನಿಂತುಕೊಳ್ಳಲಿ. ನಾನು ತಡೆಯೋಕೆ ಆಗುತ್ತಾ? ಇದು ಪ್ರಜಾಪ್ರಭುತ್ವ ವ್ಯವಸ್ಥೆ. ದುಡ್ಡು ಇದೆ ಅಂತಾ ಮದದಿಂದ ನಡೆದುಕೊಳ್ತಿದ್ದಾರೆ. ಯಾರ್ ರೀ ಅವ ಪ್ರೀತಂ ಗೌಡ, ದುಡ್ಡು ಇದೆ ಅಂತ ಆಟ ಆಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ದುಡ್ಡು ಇದ್ದವರು ಆಟ ಆಡ್ತಾರೆ, ನಾಮಪತ್ರ ಸಲ್ಲಿಸುವುದಕ್ಕೆ ಸಚಿವ ಸುಧಾಕರ್ ಎಷ್ಟು ಖರ್ಚು ಮಾಡಿದ್ರು ಗೊತ್ತಾ? ಕೇವಲ ನಾಮಪತ್ರ ಸಲ್ಲಿಸೋಕೆ ಬಿಜೆಪಿ ಅಭ್ಯರ್ಥಿ 10 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಚುನಾವಣೆ ಹತ್ತಿರ ಬಂದಿದೆ. ದುಡ್ಡಿದ್ದವರು ಏನೇನೋ ಮಾಡ್ತಾರೆ. ಸುಧಾಕರ್ 8 ರಿಂದ 10 ಸಾವಿರ ಸ್ಟೌವ್ ಹಂಚಿದ್ದಾರೆ. ಅದಕ್ಕೆ ಗ್ಯಾಸ್ ಸಂಪರ್ಕ ಕೊಡೋರು ಯಾರು? ಎಂದು ಪ್ರಶ್ನಿಸಿದ ಅವರು, ಜನ ಎಲ್ಲಿಂದ ಸಿಲಿಂಡರ್ ತಗೆದುಕೊಳ್ಳುತ್ತಾರೆ. ಗ್ಯಾಸ್ ಸಂಪರ್ಕ ಇಲ್ಲ ಅಂದರೆ ಒಲೆಯನ್ನು ಶೋಕೇಸ್‌ನಲ್ಲಿ ಇಡಬೇಕಾ ಎಂದು ಸುಧಾಕರ್ ಅವರನ್ನ ಪ್ರಶ್ನಿಸಿದರು.
ಇನ್ನೂ ಜೆಡಿಎಸ್ ಮೇಲೆ ಆರೋಪ ಮಾಡುತ್ತಾರೆ. ಒಂದು ಕಡೆ ವರುಣಾದಲ್ಲಿ ಸಿದ್ದರಾಮಯ್ಯ ಬಿಜೆಪಿ, ಜೆಡಿಎಸ್ ಒಳ ಒಪ್ಪಂದ ಅಂತಾರೆ. ಮತ್ತೊಂದು ಕಡೆ ಶಿಗ್ಗಾಂವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್, ಜೆಡಿಎಸ್ ಒಳ ಒಪ್ಪಂದ ಅಂತಾರೇ. ಆದರೆ, ಜನ ಯಾರದ್ದು ಒಳ ಒಪ್ಪಂದ, ಯಾರಿಗೆ ಅಧಿಕಾರ ನೀಡಬೇಕು ಎಂಬುದನ್ನು ತೀರ್ಮಾನ ಮಾಡುತ್ತಾರೆ ಎಂದು ಕಿಡಿಕಾರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ