ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್ ಇಲ್ಲ: ಸಹಕಾರ ಸಂಘ, ಸಂಸ್ಥೆಗಳ ಆಡಿಟ್ ಕಟ್ಟುನಿಟ್ಟು; ಸಚಿವರ ಸ್ಪಷ್ಟನೆ

ಬೆಂಗಳೂರು:

ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಂಗಳವಾರ ಮೇಲ್ಮನೆಗೆ ಸ್ಪಷ್ಟಪಡಿಸಿದ್ದಾರೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಯಾವಾಗ ಹಿಂಪಡೆಯುತ್ತೀರಿ?

ಎಂದು ಕಾಂಗ್ರೆಸ್​ನ ಕೆ.ಹರೀಶ್ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಗಳನ್ನು ಹಿಂಪಡೆದಿರಬಹುದು ಆದರೆ, ರಾಜ್ಯದಲ್ಲಿ ಆ ರೀತಿಯ ತೀರ್ಮಾನ ಮಾಡಿಲ್ಲ ಎಂದರು.

ಬೆಳೆ ಬೆಳೆದ ರೈತ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದೆಂಬ ಕಾಯ್ದೆ ಮಾಡಿದ್ದೇವೆ. ಇದರಿಂದಾಗಿ ರೈತರ ಬೆಳೆಗೆ ಒಳ್ಳೆಯ ದರ ಸಿಗುತ್ತಿದೆ. ಉತ್ತಮ ದರ ಸಿಕ್ಕಿದರೆ ಮುಕ್ತವಾಗಿ ಮಾರಾಟ ಮಾಡುವ ಅವಕಾಶ ಕಲ್ಪಿಸಿರುವುದರಿಂದ ರೈತರಿಗೆ ಅನುಕೂಲವಾಗುತ್ತಿದೆ.

ರೈತರಿಗೆ ಹಿಂದೆ ದಂಡ ಹಾಕುತ್ತಿದ್ದ ವ್ಯವಸ್ಥೆ ಇತ್ತು. ಈಗ ಆ ರೀತಿಯ ಪರಿಸ್ಥಿತಿ ಇಲ್ಲ ಎಂದರು. ಸೆಸ್ ಕಡಿಮೆ ಮಾಡಿರುವುದರಿಂದ ಯಾವ ಎಪಿಎಂಸಿಗಳು ನಷ್ಟದಲ್ಲಿವೆ ಎಂಬ ಮಾಹಿತಿ ನಮಗಿಲ್ಲ.

ಮುಂಚೆ 1.50 ರೂ. ಸೆಸ್ ಸಂಗ್ರಹ ಆಗ್ತಿತ್ತು. ಈಗ 60 ಪೈಸೆ ಸಂಗ್ರಹ ಮಾಡ್ತಿದ್ದಾರೆ ಎಂದರು. ತಿದ್ದುಪಡಿಯ ಬಗ್ಗೆ ಅನುಕೂಲ, ಅನನುಕೂಲಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಡಬಲ್ ಇಂಜಿನ್ ಸರ್ಕಾರ: 

ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆ ಹಿಂಪಡೆದಿರುವುದು ತಪುಪ ಎನ್ನುತ್ತೀರಾ? ಎಂಬ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಪ್ರಶ್ನೆಗೆ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಹಕಾರ ಸಚಿವ ಸೋಮಶೇಖರ್ ಮತ್ತು ಹರಿಪ್ರಸಾದ್ ನಡುವೆ ವಾಗ್ವಾದ ನಡೆಯಿತು. ‘ನಮ್ಮದು ಡಬಲ್ ಇಂಜಿನ್ ಸರ್ಕಾರ ಎನ್ನುತ್ತೀರಿ. ಹಾಗಾದರೆ, ಅಲ್ಲಿ ಕಾಯ್ದೆ ವಾಪಸ್ ಪಡೆದು, ಇಲ್ಲಿ ವಾಪಸ್ ಪಡೆಯುವುದಿಲ್ಲ ಎನ್ನುವ ದ್ವಂದ್ವ ನಿಲುವು ಏಕೆ?’ ಎಂದು ಹರಿಪ್ರಸಾದ್ ಆಕ್ಷೇಪಿಸಿದರು.

39,270 ಸಹಕಾರ ಸಂಘ: 

ರಾಜ್ಯದಲ್ಲಿ 39,270 ಸಹಕಾರ ಸಂಸ್ಥೆ, 3,64,233 ಸಂಘ ಸಂಸ್ಥೆಗಳಿವೆ. 6059 ಕ್ಲಬ್​ಗಳು, 5160 ಸೌಹಾಧದ ಸಂಘಗಳು, 5045 ಲೇವಾದೇವಿದಾರರು, 8635 ಹಣಕಾಸು ಸಂಸ್ಥೆಗಳು, 7851 ಗಿರವಿದಾರರು, 980 ಚೀಟಿ ನಿಧಿ ಸಂಸ್ಥೆಗಳು ಇವೆ ಎಂದು ಸರ್ಕಾರ ತಿಳಿಸಿದೆ.

402 ಲೆಕ್ಕ ಪರಿಶೋಧಕ ಹುದ್ದೆ ಭರ್ತಿ: 

ಸಹಕಾರ ಇಲಾಖೆಯಲ್ಲಿ ಲೆಕ್ಕ ಪರಿಶೋಧನೆಯನ್ನು ಇಲಾಖೆ ವತಿಯಿಂದ ಕೈಗೊಳ್ಳಲು ಅನುಕೂಲವಾಗುವಂತೆ ಲೆಕ್ಕ ಪರಿಶೋಧನಾ ಇಲಾಖೆಯಲ್ಲಿ ಖಾಲಿ ಇರುವ 402 ಲೆಕ್ಕ ಪರಿಶೋಧಕರ ಹುದ್ದೆ ಭರ್ತಿ ಮಾಡಲಾಗುವುದು. ಈಗಾಗಲೇ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಬಿಜೆಪಿಯ ಭಾರತಿ ಶೆಟ್ಟಿ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಎಲ್ಲ ಸಂಘಗಳಲ್ಲಿ ಉತ್ತಮ ಲೆಕ್ಕ ಪರಿಶೋಧನೆ ಮಾಡಲು ಮಾರ್ಗಸೂಚಿ ಸಿದ್ಧಪಡಿಸಿ ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಇಲಾಖಾ ಲೆಕ್ಕ ಪರಿಶೋಧಕರು ಗುಣಮಟ್ಟದ ಆಡಿಟ್ ಮಾಡಿಸಬಹುದು. ಸರಿಯಾಗಿ ಆಡಿಟ್ ಮಾಡಿಸದ ಸುಮಾರು 60 ಸಹಕಾರ ಸಂಘಗಳನ್ನು ರದ್ದು ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಲೀನ ಪ್ರಸ್ತಾಪ ಇಲ್ಲ: 

ಸರ್ಕಾರ ತಾನೇ ತಾನಾಗಿ ಯಾವ ಎಪಿಎಂಸಿಯನ್ನೂ ವಿಲೀನ ಮಾಡು ವುದಿಲ್ಲ. ಎರಡು ಅಥವಾ ಹೆಚ್ಚು ಎಪಿಎಂಸಿ ಗಳು ವಿಲೀನಗೊಳ್ಳುವುದು ಅವಶ್ಯವೆಂದು ಮನದಟ್ಟಾದರೆ ಮಾತ್ರ ಅಂತಹ ಸಮಿತಿಗಳ ಜತೆ ಸಮಾಲೋಚಿಸಿ ವಿಲೀನಗೊಳಿಸುವ ಅಧಿಕಾರ ಹೊಂದಿರುತ್ತದೆ. ಆದರೆ, ಸದ್ಯ ವಿಲೀನಗೊಳಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸಹಕಾರ ಸಚಿವರು ಸ್ಪಷ್ಟಪಡಿಸಿದರು.

ಕಾಯ್ದೆಗೆ ಚಿಂತನೆ: 

ಸಹಕಾರ ಸಂಸ್ಥೆಗಳ ಆಡಿಟ್ ಹೊಣೆಯನ್ನು ಸಿಎಗಳಿಗೆ ವಹಿಸಿದ ಬಳಿಕ ವ್ಯಾಪಕ ಭ್ರಷ್ಟಾ ಚಾರ, ಅಕ್ರಮ ನಡೆಯುತ್ತಿದೆ ಎನ್ನುವ ದೂರುಗಳನ್ನು ಪರಿಶೀ ಲನೆ ಮಾಡಲಾಗುವುದು. ಇಲ್ಲಿ ರುವ ಲೋಪ ಸರಿಪಡಿ ಸಲು ಮುಂದಿನ ಅಧಿವೇಶನದಲ್ಲಿ ಸಮಗ್ರವಾದ ಕಾಯ್ದೆ ತರುವ ಚಿಂತನೆ ಇದೆ ಎಂದರು.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link