ನವದೆಹಲಿ:
ತಂತ್ರಜ್ಞಾನ ಜಗತ್ತಿನ ದಿಗ್ಗಜ ಕಂಪನಿ ಆಗಿರುವ ಆಪಲ್ ತನ್ನ ಐ-ಫೋನ್ ಬಳಕೆದಾರರಿಗೆ ಮರ್ಸೆನರಿ ಸ್ಪೈವೇರ್ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು, ಬಳಕೆದಾರರು ಆತಂಕ ಎದುರಿಸುವಂತಾಗಿದೆ. ಜಗತ್ತಿನ 92 ದೇಶಗಳಲ್ಲಿನ ಬಳಕೆದಾರರಿಗೆ ಬುಧವಾರ ರಾತ್ರಿಯೇ ಈ ಸಂದೇಶ ರವಾನೆಯಾಗಿದ್ದು, ಆ ಪೈಕಿ ಭಾರತವೂ ಒಂದಾಗಿದೆ.
ಮರ್ಸೆನರಿ ಸ್ಪೈವೇರ್ ದಾಳಿಗೆ ಒಳಗಾದವರಿಗೆ ‘ಅವರು ಯಾರು, ಏನು ಮಾಡುತ್ತಾರೆ’ ಎಂಬ ಕುರಿತು ಮಾಹಿತಿ ನೀಡಲು ಹಾಗೂ ಅಗತ್ಯ ನೆರವು ನೀಡುವಂತೆ ಈ ನೋಟಿಫಿಕೇಷನ್ ವಿನ್ಯಾಸ ಮಾಡಲಾಗಿದೆ ಎಂದು ಆಪಲ್ ತಿಳಿಸಿದೆ. ಈ ಸ್ಪೈವೇರ್ ದಾಳಿಕೋರರು ಬಹಳ ಕಡಿಮೆ ಸಂಖ್ಯೆಯ ನಿರ್ದಿಷ್ಟ ವ್ಯಕ್ತಿಗಳು ಮತ್ತು ಅವರ ಸಾಧನಗಳನ್ನು ಗುರಿಯಾಗಿಸಲು ಅಸಾಧಾರಣ ಸಂಪನ್ಮೂಲಗಳನ್ನು ಅನ್ವಯಿಸುವುದರಿಂದ ಸಾಮಾನ್ಯ ಸೈಬರ್ ಕ್ರಿಮಿನಲ್ ಚಟುವಟಿಕೆ ಮತ್ತು ಗ್ರಾಹಕ ಮಾಲ್ವೇರ್ಗಿಂತ ಇಂತಹ ದಾಳಿಗಳು ಹೆಚ್ಚು ಸಂಕೀರ್ಣವಾಗಿರುತ್ತವೆ. ಈ ದಾಳಿಗಳಿಗೆ ಮಿಲಿಯನ್ಗಟ್ಟಲೆ ಡಾಲರ್ಗಳ ವೆಚ್ಚ ಮಾಡುವುದರಿಂದ ಮತ್ತು ಸಾಮಾನ್ಯವಾಗಿ ಕಡಿಮೆ ಅವಧಿ ಹೊಂದಿರುವುದರಿಂದ ಇವುಗಳನ್ನು ಪತ್ತೆ ಹಚ್ಚುವುದು ಮತ್ತು ತಡೆಯುವುದು ಕೂಡ ಹೆಚ್ಚು ಕಷ್ಟ. ಅದಾಗ್ಯೂ ಬಹುಪಾಲು ಬಳಕೆದಾರರು ಇಂತಹ ದಾಳಿಗಳಿಗೆ ಗುರಿಯಾಗುವುದಿಲ್ಲ ಎಂದು ಆಪಲ್ ತನ್ನ ಸೂಚನೆಯಲ್ಲಿ ತಿಳಿಸಿದೆ.
ಈ ಹಿಂದಿನ ಪೆಗಾಸಸ್ ದಾಳಿ ಉಲ್ಲೇಖಿಸಿರುವ ಆಪಲ್, ಇಂಥ ದಾಳಿಗಳು ಗಣ್ಯ ವ್ಯಕ್ತಿಗಳನ್ನು ಗುರಿಯಾಗಿಸಿ ನಡೆಯುವುದರಿಂದ ಜಗತ್ತಿನ ಕೆಲವು ಪತ್ರಕರ್ತರು, ಕಾರ್ಯಕರ್ತರು, ರಾಜಕಾರಣಿಗಳು, ರಾಜತಾಂತ್ರಿಕರು ಈ ದಾಳಿಗೆ ಒಳಗಾಗುವ ಸಾಧ್ಯತೆ ಇರುತ್ತದೆ ಎಂದು ನೋಟಿಸ್ ತಿಳಿಸಿದೆ. 2021ರಿಂದ ಈಚೆಗೆ ವರ್ಷದಲ್ಲಿ ಹಲವು ಸಲ ಇಂಥ ದಾಳಿಗಳನ್ನು ಪತ್ತೆ ಹಚ್ಚಲಾಗಿದ್ದು, ಇದುವರೆಗೆ 150 ದೇಶಗಳಲ್ಲಿನ ನಮ್ಮ ಬಳಕೆದಾರರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ ಎಂದು ಆಪಲ್ ಹೇಳಿದೆ.
ಬಳಕೆದಾರರು appleid.apple.com ತಾಣಕ್ಕೆ ಲಾಗಿನ್ ಆದಾಗ ಪೇಜ್ನ ಮೇಲ್ಭಾಗದಲ್ಲಿ ನೋಟಿಫಿಕೇಷನ್ ಕಾಣಿಸುತ್ತದೆ. ಅಲ್ಲದೆ ಬಳಕೆದಾರರ ಆಪಲ್ ಐಡಿಗೆ ಲಿಂಕ್ ಮಾಡಲಾದ ಫೋನ್ ನಂಬರ್, ಇ-ಮೇಲ್ ವಿಳಾಸಕ್ಕೆ ಸಂದೇಶ ರವಾನೆ ಆಗಿರುತ್ತದೆ.
ಎಚ್ಚರಿಕೆ ಸಂದೇಶ ಸ್ವೀಕರಿಸಿದ ಬಳಕೆದಾರರು ಮೊದಲಿಗೆ ಐಫೋನ್ನಲ್ಲಿ ಲಾಕ್ಡೌನ್ ಮೋಡ್ ಎನೇಬಲ್ ಮಾಡಿಕೊಳ್ಳಬೇಕು. ಸೆಟ್ಟಿಂಗ್ಸ್ ನಲ್ಲಿ ಪ್ರೖೆವೆಸಿ ಆಂಡ್ ಸೆಕ್ಯುರಿಟಿಗೆ ಹೋಗಿ ನಂತರ ಅಲ್ಲಿ ಲಾಕ್ಡೌನ್ ಮೋಡ್ ಆನ್ ಮಾಡಿಕೊಳ್ಳಬಹುದು. ದಾಳಿಗೊಳಗಾದ ಬಳಕೆದಾರರಿಗೆ ಇದರಿಂದ ಹೆಚ್ಚಿನ ಡಿಜಿಟಲ್ ಭದ್ರತೆ ಲಭಿಸುತ್ತದೆ. ಅಲ್ಲದೆ, ಬಳಕೆದಾರರು ಐಫೋನ್ನ ಇತ್ತೀಚಿನ ಆವೃತ್ತಿಗೆ ಅಪ್ಡೇಟ್ ಮಾಡಿಕೊಳ್ಳುವಂತೆಯೂ ಆಪಲ್ ಶಿಫಾರಸು ಮಾಡಿದೆ.
ಐಫೋನ್ ಮಾತ್ರವಲ್ಲದೆ ಮ್ಯಾಕ್ ಇಲ್ಲವೇ ಐಪ್ಯಾಡ್ ಬಳಕೆದಾರರೂ ಈ ಕ್ರಮಗಳನ್ನು ಅನುಸರಿಸಬೇಕು. ಬಳಕೆದಾರರು ಅಗತ್ಯವಾದರೆ ಡಿಜಿಟಲ್ ಸೆಕ್ಯುರಿಟಿ ಹೆಲ್ಪ್ ಲೈನ್ನಲ್ಲಿ ಪರಿಣತರ ಸಹಾಯವನ್ನೂ ಪಡೆಯಬಹುದು. ಸ್ಪೈವೇರ್ ಕುರಿತು ಎಚ್ಚರಿಕೆ ಸಂದೇಶ ಸ್ವೀಕರಿಸಿರದ ಬಳಕೆದಾರರು ಕೂಡ ದಾಳಿಗೆ ಒಳಗಾಗುವ ಸಾಧ್ಯತೆ ಇರಬಹುದಾದ್ದರಿಂದ ಅಂಥವರು ಯಾವುದಕ್ಕೂ ಒಮ್ಮೆ ಲಾಕ್ಡೌನ್ ಮೋಡ್ ಆನ್ ಮಾಡಿಕೊಂಡು ಹೆಚ್ಚಿನ ಸುರಕ್ಷತೆಗೆ ಒಳಗಾಗಬಹುದು ಎಂದೂ ಆಪಲ್ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ
