ಹಾಸನ
ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಸಮಯದಲ್ಲಿ ಅನೇಕ ರೀತಿಯ ಆರೋಪ ಪ್ರತ್ಯಾರೋಪಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಇಂತಹದ್ದೇ ಆರೋಪಕ್ಕೆ ಸದ್ಯ ಅರಸೀಕೆರೆ ಜೆಡಿಎಸ್ ಶಾಸಕ ಕೆ.ಎಂ ಶಿವಲಿಂಗೇಗೌಡ ಗುರಿಯಾಗಿದ್ದಾರೆ.
ಬಿಜೆಪಿ ಮುಖಂಡ ಎನ್. ಆರ್ ರಮೇಶ್ ಶಾಸಕ ಶಿವಲಿಂಗೇಗೌಡ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಕೋಟಿ ಕೋಟಿ ಹಣವನ್ನು ಶಾಸಕ ಲಪಟಾಯಿಸಿದ್ದಾರೆಂದು ಎನ್. ಆರ್ ರಮೇಶ್ ಲೋಕಾಯುಕ್ತಕ್ಕೆ ಶಿವಲಿಂಗೇಗೌಡ ವಿರುದ್ಧ ದೂರು ಕೊಟ್ಟಿದ್ದಾರೆ. ಇದರಿಂದಾಗಿ ಚುನಾವಣೆ ಹೊಸ್ತಿಲಲ್ಲೇ ಅರಸೀಕೆರೆ ಜೆಡಿಎಸ್ ಶಾಸಕ ಕೆ.ಎಂ ಶಿವಲಿಂಗೇಗೌಡರಿಗೆ ಸಂಕಷ್ಟ ಬಂದೊದಗಿದೆ.
ಹಾಸನ ಜಿಲ್ಲೆ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಎರಡು ಮಹತ್ವಾಕಾಂಕ್ಷಿ ನರೇಗಾ ಹಾಗೂ ಎತ್ತಿನಹೊಳೆ ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ. 200 ಕೋಟಿಗೂ ಅಧಿಕ ಹಣ ಭ್ರಷ್ಟಾಚಾರ ಆಗಿರೋ ಬಗ್ಗೆ ಎನ್.ಆರ್ ರಮೇಶ್ ದಾಖಲೆ ಬಿಡುಗಡೆ ಮಾಡಿದ್ದಾರೆ.
ಮಲೆನಾಡಿನ ಬಯಲು ಸೀಮೆ ಪ್ರದೇಶ, ಎತ್ತಿನಹೊಳೆಯಿಂದ ಕುಡಿಯುವ ನೀರಿನ ಯೋಜನೆಗೆ ಕಳೆದ ಮೂರು ವರ್ಷದಲ್ಲಿ ಕೋಟಿ ಕೋಟಿ ಅನುದಾನ ಬಿಡುಗಡೆ ಆಗಿದೆ. ಆದರೆ ಐದು ಕೋಟಿ ಕಾಮಗಾರಿಗೆ ಟೆಂಡರ್ ಕರೆಯದೇ ಏಕಾಏಕಿ ಕೆಲಸ ಮಾಡಲಾಗಿದೆ. ಕೆಲವು ಕಡೆ ಕಾಂಕ್ರಿಟೀಕರಣ ಆಗಿದ್ದರೂ ಮತ್ತೆ ಆ ರಸ್ತೆ ದುರಸ್ಥಿ ಮಾಡಲಾಗಿದೆ ಎಂದು ಎನ್ ಆರ್ ರಮೇಶ್ ಆರೊಪಿಸಿದ್ದಾರೆ.
ನರೇಗಾ ಕೆಲಸದಲ್ಲಿ 150 ಕೋಟಿ, ಎತ್ತಿನಹೊಳೆ ಯೋಜನೆಯಲ್ಲಿ 100 ಕೋಟಿ ನುಂಗಿರುವ ಆರೋಪವನ್ನು ಬಿಜೆಪಿ ಮುಖಂಡ ಎನ್.ಆರ್ ರಮೇಶ್ ಮಾಡಿದ್ದಾರೆ. ಕೋಟ್ಯಾಂತರ ರೂಪಾಯಿ ಬಳಕೆ ಮಾಡಿ ಸುಳ್ಳು ದಾಖಲೆ ಸಲ್ಲಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರು ದಾಖಲಿಸಿರುವುದಾಗಿ ಎನ್.ಆರ್ ರಮೇಶ್ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ