ಬೊಮ್ಮಾಯಿ ಕುಟುಂಬದತ್ತ ಮತದಾರನ ಚಿತ್ತ : ಅರವಿಂದ್‌ ಬೆಲ್ಲದ್

ಹುಬ್ಬಳ್ಳಿ:

   ಶಿಗ್ಗಾವಿ-ಸವಣೂರು ವಿಧಾನಸಭಾ ಕ್ಷೇತ್ರಕ್ಕೆ ಹಾಲಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕುಟುಂಬಕ್ಕೇ ಟಿಕೆಟ್ ನೀಡಬೇಕು ಎಂಬ ಅಭಿಪ್ರಾಯ ಅಲ್ಲಿನ ಮತದಾರರಿಂದ ವ್ಯಕ್ತವಾಗಿದೆ ಎಂದು ವಿಧಾನಸಭೆ ವಿರೋಧಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ತಿಳಿಸಿದರು.

    ಹುಬ್ಬಳ್ಳಿಯ ತಮ್ಮ ಗ್ರಹ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷದ ವರಿಷ್ಠರ ಸೂಚನೆಯಂತೆ ಶಿಗ್ಗಾವಿ-ಸವಣೂರು ಕ್ಷೇತ್ರದಲ್ಲಿ ಓಡಾಟ ನಡೆಸಿದ್ದೇನೆ. ಅಲ್ಲಿನ ಮತದಾರರ ಜೊತೆಗೆ ನಿರಂತರ ಸಂಪರ್ಕ ಇಟ್ಟುಕೊಂಡು ಅವರ ಭಾವನೆ ಏನೆಂಬುದನ್ನು ಅರಿತಿದ್ದೇನೆ. ಬಸವರಾಜ ಬೊಮ್ಮಾಯಿ ಅವರ ತಂದೆ ದಿ.ಎಸ್.ಆರ್. ಬೊಮ್ಮಾಯಿ ಅವರು ಮಾಡಿರುವ ಜನಪರ, ಅಭಿವೃದ್ಧಿ ಕೆಲಸಗಳಿಂದಾಗಿ ಆ ಭಾಗದಲ್ಲಿ ಬೊಮ್ಮಾಯಿ ಪರಿವಾರದ ಮೇಲೆ ವಿಶೇಷ ಅಭಿಮಾನವಿದೆ. ಹೀಗಾಗಿ ಉಪ ಚುನಾವಣೆಯ ಟಿಕೆಟ್ ಅನ್ನು ಬೊಮ್ಮಾಯಿ ಕುಟುಂಬಸ್ಥರಿಗೇ ನೀಡುವಂತೆ ಆಗ್ರಹ ವ್ಯಕ್ತವಾಗಿದ್ದು, ಜನರ ಸಂದೇಶವನ್ನು ಹೈಕಮಾಂಡ್‌ಗೆ ತಿಳಿಸಲಾಗಿದೆ. ಮುಂದಿನ ನಿರ್ಧಾರ ಅವರು ಕೈಗೊಳ್ಳಲಿದ್ದಾರೆ ಎಂದರು.

   ಬದವರಾಜ ಬೊಮ್ಮಾಯಿ ಅವರನ್ನು ವರಿಷ್ಠರು ದೆಹಲಿಗೆ ಕರೆಸಿಕೊಂಡಿದ್ದಾರೆ. ಅಲ್ಲಿ ಅವರಿಗೇನು ಸೂಚನೆ ನೀಡುತ್ತಾರೊ ಗೊತ್ತಿಲ್ಲ. ಶಿಗ್ಗಾವಿ-ಸವಣೂರು ವಿಧಾನಸಭಾ ಕ್ಷೇತ್ರದ ಸ್ಫರ್ಧೆ ಬಯಸಿ ೬೦ಕ್ಕೂ ಹೆಚ್ಚು ಜನ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಶ್ರೀಕಾಂತ ದುಂಡಿಗೌಡರ, ಶಶಿಧರ ಯಲಿಗಾರ, ಮ್ಯಾಗೇರಿ ಸೇರಿದಂತೆ ಹಲವು ಮುಖಂಡರು ರೇಸಿನಲ್ಲಿದ್ದಾರೆ. ಆದರೆ, ಹೈಕಮಾಂಡ್ ನಿರ್ಧಾರಕ್ಕೆ ಪಕ್ಷ ಮತ್ತು ಕಾರ್ಯಕರ್ತರು ಬದ್ಧರಾಗಿರಬೇಕು ಎಂದರು.

   ಚನ್ನಪಟ್ಟಣದ ಉಪ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಅಲ್ಲಿಯೂ ಸಂಚಾರ ಮಾಡಿದ್ದೇನೆ. ಬಿಜೆಪಿಯ ಸಿ.ಪಿ. ಯೋಗೇಶ್ವರ ಅವರು ಅಭ್ಯರ್ಥಿಯಾದರೆ ಗೆಲುವು ನಿಶ್ಚಿತ. ಅವರ ಹೊರತು ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಕಷ್ಟ ಎಂದರು. ಯೋಗೇಶ್ವರ ಹಿಂದೆ ಶಾಸಕರಾಗಿದ್ದಾಗ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಕಳೆದ ಬಾರಿಯೂ ಕೆಲವೇ ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಅಲ್ಲದೆ, ಲೋಕಸಭೆ ಚುನಾವಣೆಯಲ್ಲಿ ಮಂಜುನಾಥ ಅವರ ಪರವಾಗಿ ಬಿರುಸಿನ ಪ್ರಚಾರ ಮಾಡಿ, ಗೆಲುವಿಗೆ ಶ್ರಮಿಸಿದ್ದಾರೆ. ಹೀಗಾಗಿ ಯೋಗೀಶ್ವರ ಅವರಿಗೇ ಟಿಕೆಟ್ ಕೊಡಿಸುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಮನವಿ ಮಾಡಲಾಗಿದೆ ಎಂದರು.

  ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಲು ಈಡಿ ಇಲಾಖೆ ತಯಾರಿ ನಡೆಸಿದೆ. ಈಡಿ, ಐಟಿ ಸ್ವತಂತ್ರ ಸಂಸ್ಥೆಗಳಾಗಿದ್ದು ನಿಷ್ಪಕ್ಷಪಾತ ತನಿಖೆ ನಡೆಸಲಿವೆ ಎಂದರು.ಹಳೇ ಹುಬ್ಬಳ್ಳಿ ಗಲಭೆಯ ಪ್ರಕರಣವನ್ನು ಹಿಂಪಡೆಯಲು ನಿರ್ಧರಿಸಿರುವ ಸರ್ಕಾರದ ಕ್ರಮ ಖಂಡಿಸಿ ವಿಪಕ್ಷ ನಾಯಕ ಆರ್. ಅಶೋಕ, ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಚಲವಾದಿ ನಾರಾಯಣ ಸ್ವಾಮಿ ನೇತೃತ್ವದಲ್ಲಿ ಅ.೨೫ರಂದು ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ೨೫ ಸಾವಿರಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ ಎಂದರು.

   ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಹಿಂಪಡೆಯಲು ನಿರ್ಧರತಿಸುತ್ತಿದ್ದಂತೆ ಕೆ.ಜೆ. ಹಳ್ಳಿ, ಡಿ.ಜೆ ಹಳ್ಳಿಯ ಪುಂಡರೂ ತಮ್ಮ ಪ್ರಕರಣವನ್ನು ಹಿಂಪಡೆಯುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಇದು ಹೀಗೇ ಮುಂದುವರೆದರೆ ದೇಶವಿರೋಧಿ ಶಕ್ತಿಗಳಿಗೆ ಕುಮ್ಮಕ್ಕು ನೀಡಿದಂತಾಗುತ್ತದೆ. ಕರ್ನಾಟಕ ಬಿಹಾರವಾಗಿ ಮಾರ್ಪಡುತ್ತದೆ ಎಂದರು.

   ಬಿ.ಆರ್.ಟಿ.ಎಸ್ ಯೋಜನೆಯನ್ನು ಸುಧಾರಿಸಲು ಸಾಧ್ಯವಿಲ್ಲ. ಅದರ ಡಿಜೈನ್ ಬದಲಾಗುವವರೆಗೂ ಸಮಸ್ಯೆ ಬಗೆ ಹರಿಯುವುದಿಲ್ಲ. ಕಾರಿಡಾರ ಸ್ವರೂಪ ಬದಲಿಸದೇ ಕೇವಲ ವಾಹನ ಬದಲಿಸಿದರೆ ಸಮಸ್ಯೆ ದ್ವಿಗುಣಗೊಳ್ಳುತ್ತದೆ ಎಂದರು.ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ವಾಚಾರವಾಗಿ ಮಾತನಾಡಿದ ಅವರು, ಶ್ರೀಗಳ ನೇತೃತ್ವದಲ್ಲಿ ವಕೀಲರು ಇಂದು ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದಾರೆ. ಸಮಾಜದ ಎಲ್ಲ ಮುಖಂಡರ-ರಾಜಕಾರಣಿಗಳ ಪರವಾಗಿ ಕೂಡಲಸಂಗಮ ಪೀಠದ ಶ್ರೀಗಳು ಅಲ್ಲಿಗೆ ಹೋಗಿದ್ದಾರೆ. ಬಹುಶಃ ಮುಖ್ಯಮಂತ್ರಿಗಳಿಗೆ ಮುಸ್ಲಿಂ ಸಮಾಜವನ್ನು ಹೊರತುಪಡಿಸಿ ಬೇರಾವುದೇ ಸಮಾಜ ಕಾಣಲಿಕ್ಕಿಲ್ಲ ಎಂದು ವ್ಯಂಗ್ಯವಾಡಿದರು.

 

Recent Articles

spot_img

Related Stories

Share via
Copy link
Powered by Social Snap