ಮಹಾಕುಂಭ ಮೇಳಕ್ಕೆ ಹೋಗ್ತಿದ್ದಿರಾ..? ಇಲ್ಲಿದೆ ಮಾರ್ಗದ ವಿವರ ..!

ಪ್ರಯಾಗ್‌ರಾಜ್‌:

    ಉತ್ತರಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಈ ಬಾರಿಯ ಮಹಾ ಕುಂಭ ಮೇಳ  ನಡೆಯಲಿದ್ದು, ಇದಕ್ಕಾಗಿ ಪೂರ್ವ ತಯಾರಿ ಸಿದ್ಧತೆಗಳು ಬಹತೇಕ ಪೂರ್ಣಗೊಂಡಿವೆ. ಪ್ರತೀ 12 ವರ್ಷಗಳಿಗೊಮ್ಮೆ ನಡೆಯುವ ಈ ಕುಂಭಮೇಳ ದೇಶದ ಆಸ್ತಿಕರನ್ನು ಮಾತ್ರವಲ್ಲದೇ ವಿದೇಶಗಳ ಕುತೂಹಲಿಗರನ್ನೂ ಸಹ ತನ್ನತ್ತ ಸೆಳೆಯುತ್ತದೆ. ಈ ಬಾರಿಯ ಮಹಾ ಕುಂಭ ಮೇಳವು ಜನವರಿ 13ರಿಂದ ಫೆಬ್ರವರಿ 26ರವರೆಗೆ ಪ್ರಯಾಗ್ ರಾಜ್‌ನಲ್ಲಿ ನಡೆಯಲಿದೆ. ಈ ವಿಶೇಷ ಸಂದರ್ಭದಲ್ಲಿ ಸಾವಿರಾರು ವಿದೇಶಿ ಪ್ರವಾಸಿಗರು ವಿಶ್ವದ ನಾನಾ ಮೂಲೆಗಳಿಂದ ಇಲ್ಲಿಗೆ ಪ್ರತೀದಿನ ಅಗಮಿಸುತ್ತಾರೆ. ಮಾತ್ರವಲ್ಲದೇ ದೇಶದ ನಾನಾ ಭಾಗಗಳಿಂದಲೂ ಲಕ್ಷಾಂತರ ಮಂದಿ ಈ ಮಹಾ ಕುಂಭ ಮೇಳದಲ್ಲಿ ಭಾಗವಹಿಸುತ್ತಾರೆ.

    ಪ್ರಯಾಗ್ ರಾಜ್ ನಲ್ಲಿ ಮಹಾಕುಂಭ ಮೇಳ ನಡೆಯುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವೇ. ಆದರೆ ಇಲ್ಲಿಗೆ ಹೇಗೆ ಬರಬೇಕೆಂಬ ವಿಚಾರ ಬಹುತೇಕರಿಗೆ ಸ್ಪಷ್ಟವಿರಲಿಕ್ಕಿಲ್ಲ. ಹಾಗಾಗಿ ರಸ್ತೆ-ರೈಲು ಮತ್ತು ವಾಯು ಮಾರ್ಗದ ಮೂಲಕ ಮಹಾಕುಂಭ ಮೇಳ ನಡೆಯುವ ಪ್ರಯಾಗ್ ರಾಜ್‌ಗೆ ಹೇಗೆ ಬರಬಹುದೆಂಬುದನ್ನು ನಾವು ನಿಮಗೆ ಇಲ್ಲಿ ತಿಳಿಸಿಕೊಡಲಿದ್ದೇವೆ.

ರೈಲಿನ ಮೂಲಕ ಪ್ರಯಾಗ್‌ರಾಜ್‌ಗೆ ಬರೋದು ಹೇಗೆ?

  • ಒಂದು ವೇಳೆ ನೀವು ಪ್ರಯಾಗ್ ರಾಜ್ ಗೆ ನೀವು ರೈಲಿನ ಮೂಲಕ ಬರುವುದಾಗಿದ್ದಲ್ಲಿ, ದೇಶದ ಯಾವುದೇ ಮೂಲೆಯಿಂದಲೂ ನಿಮಗೆ ಇಲ್ಲಿಗೆ ಆರಾಮ್ ಸೆ ಬರಬಹುದು. ಯಾಕಂದ್ರೆ ರೈಲು ಪ್ರಯಾಣ ಸುಲಭ ಮತ್ತು ನಿಮಗೆ ಕಡಿಮೆ ವೆಚ್ಚದಾಯಕವೂ ಹೌದು.
  • ಪ್ರಯಾಗ್ ರಾಜ್ (ಅಲಹಾಬಾದ್) ಭಾರತೀಯ ರೈಲ್ವೇ ಉತ್ತರ-ಮಧ್ಯ ವಿಭಾಗದ ಕೇಂದ್ರಸ್ಥಾನವಾಗಿದೆ. ಹಾಗಾಗಿ ಇಲ್ಲಿಂದ ದೇಶದ ಪ್ರಮುಖ ನಗರಗಳಿಗೆ ಮತ್ತು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರೈಲುಗಳ ವ್ಯವಸ್ಥೆಯಿದೆ.
  • ದೆಹಲಿ, ಮುಂಬಯಿ. ಕೊಲ್ಕೊತ್ತಾ, ಕಾನ್ಪುರ, ಪಟ್ನಾ, ಜಾರ್ಖಂಡ್, ಆಗ್ರಾ ಸೇರಿದಂತೆ ಪ್ರಮುಖ ಪಟ್ಟಣಗಳಿಂದ ಇಲ್ಲಿಗೆ ರೈಲು ಸಂಪರ್ಕವಿದೆ.
  • ರೈಲು ಸಂಖ್ಯೆ 22436, 12312, 18310 ಮತ್ತು 12488 ರೈಲುಗಳು ದೆಹಲಿಯಿಂದ ಇಲ್ಲಿಗೆ ಸಂಪರ್ಕಿಸುವ ಕಾರಣ ಈ ರೈಲುಗಳಲ್ಲಿ ನೀವು ಬುಕ್ಕಿಂಗ್ ಮಾಡಬಹುದಾಗಿದೆ. ಇನ್ನು ಪಟ್ನಾದಿಂದ ನೀವು ಬರೋದಾದ್ರೆ, 19484, 07008 ಮತ್ತು 05585 ನಂಬರ್ ರೈಲುಗಳು ಪ್ರಯಾಗ್ ರಾಜ್ ಗೆ ಸಂಪರ್ಕಿಸುತ್ತವೆ.
  • ಸಂಗಮ್ ಘಾಟ್ ಪ್ರಯಾಗ್ ರಾಜ್ ರೈಲು ನಿಲ್ದಾಣದಿಂದ ಕೇವಲ 2 ಕಿ,ಮೀ. ದೂರದಲ್ಲಿದೆ. ಇಲ್ಲಿಂದ ಟ್ಯಾಕ್ಸಿ ಅಥವಾ ಕ್ಯಾಬ್ ಮೂಲಕ ನೀವು ಸಂಗಮ್ ಘಾಟ್ ಕಡೆಗೆ ಪ್ರಯಾಣಿಸಬಹುದಾಗಿರುತ್ತದೆ.

ರಸ್ತೆ ಮಾರ್ಗದ ಮೂಲಕ ಪ್ರಯಾಗ್ ರಾಜ್ ಸಂಪರ್ಕ ಹೇಗೆ?

   ಒಂದುವೇಳೆ ರಸ್ತೆ ಮಾರ್ಗದ ಮೂಲಕ ನೀವು ಪ್ರಯಾಗ್ ರಾಜ್ ಗೆ ಹೋಗಲು ಯೋಚಿಸುತ್ತಿದ್ದಲ್ಲಿ, ನೀವು ಉತ್ತರಪ್ರದೇಶದ ಯಾವುದೇ ನಗರದಿಂದ ಇಲ್ಲಿಗೆ ರಸ್ತೆ ಸಂಪರ್ಕವಿದೆ. ಕಾನ್ಪುರ, ಲಕ್ನೋ, ವಾರಣಾಶಿ ಮತ್ತು ಗೋರಖ್ ಪುರಗಳಿಂದ ಪ್ರಯಾಗ್ ರಾಜ್ ಗೆ ರಸ್ತೆ ಸಂಪರ್ಕವಿದೆ. ಇನ್ನು ದೆಹಲಿಯಿಂದಲೂ ಸಹ ರಸ್ತೆ ಮಾರ್ಗದ ಮೂಲಕ ಪ್ರಯಾಗ್ ರಾಜ್ ತಲುಪಬಹುದು.

  • ದೆಹಲಿಯಿಂದ ಪ್ರಯಾಗ್ ರಾಜ್ ಗೆ ಅಂದಾಜು 700 ಕಿ,ಮೀ ದೂರ  
  • ಲಕ್ನೋದಿಂದ ಪ್ರಯಾಗ್ ರಾಜ್ ಗೆ 250 ಕಿ,ಮೀ. ದೂರ  
  • ವಾರಣಾಸಿಯಿಂದ ಪ್ರಯಾಗ್ ರಾಜ್ ಗೆ 120 ಕಿ.ಮೀ. ದೂರ  
  • ಕಾನ್ಪುರದಿಂದ ಪ್ರಯಾಗ್ ರಾಜ್ ಗೆ 200 ಕಿ.ಮೀ. ದೂರ