ಅಡಿಕೆ ಬೆಳೆಗಾರರಿಗೆ ಅಭಯ ನೀಡಿದ ಕೇಂದ್ರ ಸರ್ಕಾರ

ಬೆಂಗಳೂರು:.

   ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಅಡಿಕೆ ಮಾನವನ ಆರೋಗ್ಯಕ್ಕೆ ಹಾನಿಕರ ಅದನ್ನು ನಿಷೇಧಿಸಬೇಕು ಎಂದು ಚರ್ಚೆಗಳು ಆರಂಭವಾಗಿದೆ. ಆದರೆ ಈಗ ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರಿಗೆ ಅಭಯ ನೀಡಿದೆ. ಅಡಿಕೆ ಮತ್ತು ಮಾನವನ ಆರೋಗ್ಯದ ಕುರಿತು ವೈಜ್ಞಾನಿಕ ಅಧ್ಯಯನವನ್ನು ನಡೆಸಲಿದೆ ಎಂದು ಹೇಳಿದೆ.

   ಲೋಕಸಭೆ ಕಲಾಪದಲ್ಲಿ ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತಾನ್ ಕೇಳಿದ್ದ ಪ್ರಶ್ನೆಗೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಗೀರಥ್ ಚೌಧರಿ ಉತ್ತರ ನೀಡಿದ್ದಾರೆ. ‘ ಅಡಿಕೆ ಮತ್ತು ಮಾನವನ ಆರೋಗ್ಯ’ ಎಂಬ ಕೇಂದ್ರಿಕೃತ ವಿಷಯದ ಕುರಿತು ಕೇಂದ್ರ ಸರ್ಕಾರದಿಂದ ವೈಜ್ಞಾನಿಕ ಅಧ್ಯಯನವನ್ನು ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

   “ವಿಶ್ವ ಆರೋಗ್ಯ ಸಂಸ್ಥೆಯ ಸಹ ಸಂಸ್ಥೆಯೊಂದು ನಡೆಸಿದ ಸಂಶೋಧನಾ ವರದಿಯಲ್ಲಿ ಅಡಿಕೆ ಕ್ಯಾನ್ಸರ್ಕಾರಕ ಎಂಬ ಅಂಶಗಳು ತಿಳಿದುಬಂದಿದೆ. ಈ ವರದಿ ಕುರಿತು ಮಾಹಿತಿ ಬಂದಿದೆ. ಆದರೆ ಅಡಿಕೆ ಬೆಳೆಗಾರರು ಆತಂಕಪಡುವ ಅಗತ್ಯವಿಲ್ಲ” ಎಂದು ಕೃಷಿ ಸಚಿವರು ಅಭಯ ನೀಡಿದರು.

  “ಅಡಿಕೆಯಿಂದ ಮಾನವನ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಕುರಿತು ಸುಮಾರು 16 ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸಂಸ್ಥೆಗಳ ಮೂಲಕ ವೈಜ್ಞಾನಿಕ ಅಧ್ಯಯನ ನಡೆಸಲಿದೆ. ಆಲ್ ಇಂಡಿಯಾ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮತ್ತಿತರ ಸಂಸ್ಥೆಗಳು ಅಧ್ಯಯನಕ್ಕೆ ಕೈ ಜೋಡಿಸಲಿವೆ” ಎಂದು ಸಚಿವರು ತಿಳಿಸಿದರು.

  “ಇದುವರೆಗೂ ನಡೆದ ಹಲವು ಅಧ್ಯಯನಗಳು ಪಾನ್ ಮಸಾಲಾ, ಗುಟ್ಕಾದಂತಹ ಮಿಶ್ರಣಗಳಿಂದ ಮಾನವನ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳನ್ನು ಚರ್ಚಿಸಿವೆ. ಆದರೆ ಅದರಲ್ಲಿ ಕೇವಲ ಅಡಿಕೆ ಇರುವುದಿಲ್ಲ ಇತರ ಪದಾರ್ಥಗಳು ಇರುತ್ತವೆ. ಆದ್ದರಿಂದ ಕೇವಲ ಅಡಿಕೆಗೆ ಸೀಮಿತವಾಗುವಂತೆ, ಅದು ಮಾನವನ ಆರೋಗ್ಯದ ಮೇಲೆ ಬೀರುವ ಪರಿಣಾಮದ ಕುರಿತು ಅಧ್ಯಯನ ನಡೆಸಲಾಗುತ್ತದೆ” ಎಂದು ಸಚಿವರು ಹೇಳಿದರು.

  “ನವೆಂಬರ್ 2023ರಲ್ಲಿ ಕಾಸರಗೋಡಿನಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಮಂಡಳಿ ಮತ್ತು ಕಾಸರಗೋಡು ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಅಡಿಕೆ ಕುರಿತು ಅಧ್ಯಯವನ್ನು ನಡೆಸಿತ್ತು. ಈಗ ವಿವಿಧ ಸಂಸ್ಥೆಗಳ ಮೂಲಕ ಅಡಿಕೆ ಕುರಿತು ಅಧ್ಯಯನ ನಡೆಸಲಾಗುತ್ತದೆ” ಎಂದು ಸಚಿವರು ಸ್ಪಷ್ಟಪಡಿಸಿದರು. ಅಡಿಕೆ ಕ್ಯಾನ್ಸರ್ಕಾರಕ ಉತ್ಪನ್ನ ಎಂದು ಸಂಶೋಧನಾ ವರದಿಗಳನ್ನೇ ತಿರುಚಿ ಪ್ರಕಟಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ.

   ಅಲ್ಲದೇ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇಂಟರ್ನ್ಯಾಷನಲ್ ಏಜನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (ಐಎಆರ್ಸಿ) ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಡಿಕೆ ಬೆಳೆಗಾರರು ಆರೋಪಿಸುತ್ತಿದ್ದಾರೆ. ಅಲ್ಲದೇ ಈ ವರದಿ ಬಂದ ಬಳಿಕ ಅಡಿಕೆ ಕೃಷಿಯನ್ನು ನಂಬಿರುವ ರೈತರು ಆತಂಕಗೊಂಡಿದ್ದಾರೆ. ಆದ್ದರಿಂದ ಬೆಳಗಾರರ ಹಿತ ಕಾಪಾಡಬೇಕು ಎಂದು ಮಲೆನಾಡು ಮತ್ತು ಕರಾವಳಿ ಭಾಗದ ಸಂಸದರು ಕೃಷಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.

ವಿಶ್ವ ಆರೋಗ್ಯ ಸಂಸ್ಥೆ ಬಹಳ ಸೀಮಿತವಾಗಿ ಸಂಶೋಧನೆ ನಡೆಸಿದೆ. ಆದ್ದರಿಂದ ಅ ವರದಿ ಅಪೂರ್ಣವಾಗಿದೆ. ಅಲ್ಲದೇ ಅಡಿಕೆಯೊಂದಿಗೆ ಬಳಕೆ ಮಾಡುವ ಇತರ ಉತ್ಪನ್ನಗಳ ಕುರಿತು ಅಧ್ಯಯನ ನಡೆಸದೇ ವರದಿ ತಯಾರು ಮಾಡಲಾಗಿದೆ. ಅಡಿಕೆ ಸೇವೆನೆಯಿಂದ ಮಾನವನ ಆರೋಗ್ಯದ ಮೇಲೆ ನಿರ್ದಿಷ್ಟ ಪರಿಣಾಮ ಬೀರುವುದಿಲ್ಲ. ಆದ್ದರಿಂದ ವೈಜ್ಞಾನಿಕ ಅಧ್ಯಯನ ನಡೆಸಬೇಕು ಎಂದು ಮನವಿ ಸಲ್ಲಿಸಲಾಗಿತ್ತು.

Recent Articles

spot_img

Related Stories

Share via
Copy link