ನವದೆಹಲಿ:
ಕಾಂಗ್ರೆಸ್ ಟರ್ಕಿಯಲ್ಲಿ ಕಚೇರಿ ಹೊಂದಿದೆ ಎಂದು ದುರುದ್ದೇಶಪೂರಕವಾಗಿ ತಪ್ಪು ಮಾಹಿತಿ ಹರಡಿದ ಬಿಜೆಪಿಯ ಅಮಿತ್ ಮಾಳವೀಯ ಮತ್ತು ರಿಪಬ್ಲಿಕ್ ಟೆಲಿವಿಷನ್‌ನ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ ಕಾಂಗ್ರೆಸ್ ಪೊಲೀಸ್ ಪ್ರಕರಣ ದಾಖಲಿಸಿದೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಇವರಿಬ್ಬರು ಟರ್ಕಿಯಲ್ಲಿ ಕಾಂಗ್ರೆಸ್ ಕಚೇರಿ ಇದೆ ಎಂದು ಸುಳ್ಳು ಮಾಹಿತಿ ಹರಡಿದ್ದು, ಇದರಿಂದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಪ್ರತಿಷ್ಠೆಗೆ ಕುಂದು ಬಂದಿದೆ ಎಂದು ಆರೋಪಿಸಿದೆ.
ಆರೋಪಿಗಳಿಬ್ಬರು ಈ ಮೂಲಕ ಪಕ್ಷದ ನಾಯಕರನ್ನು ಕೆಣಕಿ ಅಶಾಂತಿಯನ್ನು ಪ್ರಚೋದಿಸಲು ಪ್ರಯತ್ನಿಸಿದ್ದಾರೆ. ಈ ಮೂಲಕ ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸುವ ಸಂಚು ರೂಪಿಸಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ನೇರ ದಾಳಿ ಮಾಡಲು ದುರುದ್ದೇಶಪೂರಿತ ಪ್ರಯತ್ನ ನಡೆಸಿದ್ದಾರೆ ಎಂದು ಕಾಂಗ್ರೆಸ್ ಕಾನೂನು ಘಟಕ ಹೇಳಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ನಾವು ಮೌನವಾಗಿರುವುದಿಲ್ಲ. ಇದು ಸ್ಪಷ್ಟ ಸಂದೇಶ. ನಮ್ಮ ಪಕ್ಷ ಅಥವಾ ಅದರ ನಾಯಕತ್ವದ ವಿರುದ್ಧ ನಕಲಿ ಸುದ್ದಿಗಳನ್ನು ಹರಡುವ ಯಾವುದೇ ಪ್ರಯತ್ನಕ್ಕೆ ದೃಢವಾದ ಕಾನೂನು ಮತ್ತು ರಾಜಕೀಯ ಪ್ರತಿಕ್ರಿಯೆಯನ್ನು ನೀಡಲಾಗುವುದು ಎಂದು ಹೇಳಿದೆ.
ಟರ್ಕಿಯಲ್ಲಿರುವ ಇಸ್ತಾನ್‌ಬುಲ್ ಕಾಂಗ್ರೆಸ್ ಕೇಂದ್ರವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಕಚೇರಿ ಎಂಬ ನಕಲಿ ಹೇಳಿಕೆಯನ್ನು ಅಮಿತ್ ಮಾಳವೀಯ ನೀಡಿದ್ದು, ಇದನ್ನು ಗೋಸ್ವಾಮಿ ಅವರು ತಮ್ಮ ಮಾಧ್ಯಮದ ಮೂಲಕ ಪ್ರಸಾರ ಮಾಡಿದ್ದಾರೆ ಎಂದು ಕಾಂಗ್ರೆಸ್ ತನ್ನ ದೂರಿನಲ್ಲಿ ತಿಳಿಸಿದೆ.
ಈ ಮೂಲಕ ಅವರಿಬ್ಬರು ಭಾರತೀಯ ನಾಗರಿಕರನ್ನು ವಂಚಿಸಿದ್ದಾರೆ. ಪ್ರಮುಖ ರಾಜಕೀಯ ಪಕ್ಷವನ್ನು ದೂಷಿಸಲು ರಾಷ್ಟ್ರೀಯತಾವಾದಿ ಭಾವನೆಯನ್ನು ಬಳಸಿಕೊಂಡಿದ್ದಾರೆ. ಈ ಮೂಲಕ ಸಾರ್ವಜನಿಕ ಅಶಾಂತಿಯನ್ನು ಪ್ರಚೋದಿಸುವ ಮತ್ತು ರಾಷ್ಟ್ರೀಯ ಭದ್ರತೆ ಮತ್ತು ಪ್ರಜಾಪ್ರಭುತ್ವದ ಸಮಗ್ರತೆಯನ್ನು ದುರ್ಬಲಗೊಳಿಸುವ ಕ್ರಿಮಿನಲ್ ಕೃತ್ಯವನ್ನು ಮಾಡಿದ್ದಾರೆ. ಸುಳ್ಳು ಮಾಹಿತಿ ಪ್ರಸಾರ ಮಾಡಲು ಕ್ರಿಮಿನಲ್ ಪ್ರೇರಿತ ಅಭಿಯಾನವನ್ನು ಅವರು ರೂಪಿಸಿದ್ದಾರೆ ಎಂದು ದೂರಿದೆ.
ಆಪರೇಷನ್ ಸಿಂದೂರ್ ಸಮಯದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಅನಂತರ ದೇಶದಲ್ಲಿ ಸಾರ್ವಜನಿಕ ಮನಸ್ಥಿತಿ ಟರ್ಕಿಯ ವಿರುದ್ಧವಾಗಿದೆ. ಟರ್ಕಿ ಪ್ರವಾಸ ಬುಕ್ಕಿಂಗ್‌ಗಳನ್ನು ರದ್ದುಗೊಳಿಸಲಾಗಿದೆ. ವಿಶ್ವವಿದ್ಯಾಲಯಗಳು ತಮ್ಮ ಟರ್ಕಿಶ್ ಸಹವರ್ತಿಗಳೊಂದಿಗಿನ ಕಾರ್ಯಕ್ರಮಗಳನ್ನು ರದ್ದುಗೊಳಿಸಿವೆ. ದೇಶಾದ್ಯಂತ ಟರ್ಕಿಗೆ ಬೈಕಾಟ್ ಮಾಡಲಾಗುತ್ತಿದೆ. ಈ ನಡುವೆ ಕಾಂಗ್ರೆಸ್ ವಿರುದ್ಧ ಈ ರೀತಿಯ ಆರೋಪ ಮಾಡಿರುವುದು ಉದ್ದೇಶಪೂರ್ವಕ ಕ್ರಿಮಿನಲ್ ಪಿತೂರಿಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
