ಚೆನ್ನೈ:
ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ ಸೇವಿಸಿ 20ಕ್ಕೂ ಹೆಚ್ಚು ಮಕ್ಕಳ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ, ಕೋಲ್ಟ್ರಿಫ್ ಕಾಫ್ ಸಿರಪ್ ತಯಾರಿಕೆ ಸಂಸ್ಥೆ ಶ್ರೀಸನ್ ಫಾರ್ಮಾದ ಮಾಲೀಕ ಎಸ್. ರಂಗನಾಥನ್ ಅವರನ್ನು ಬುಧವಾರ ತಡರಾತ್ರಿ ಬಂಧಿಸಲಾಗಿದೆ. ಈ ಕಂಪನಿ ತಮಿಳುನಾಡು ಮೂಲದ್ದಾಗಿದ್ದು, ಮಾಲಿಕರನ್ನು ಚೆನ್ನೈನಲ್ಲಿ ಬಂಧಿಸಲಾಯಿತು.
ಮಧ್ಯಪ್ರದೇಶ ಪೊಲೀಸರ ತಂಡಗಳು ಅವರನ್ನು ಬಂಧಿಸಲು ಚೆನ್ನೈ ಹಾಗೂ ಕಾಂಚೀಪುರಂಗೆ ಬಂದಿವೆ. ಮೂಲಗಳ ಪ್ರಕಾರ, ರಂಗನಾಥನ್ ಬಂಧನದ ನಂತರ ಅವರನ್ನು ಕಾಂಚೀಪುರಂನ ಕೆಮ್ಮಿನ ಸಿರಪ್ ಕಾರ್ಖಾನೆಗೆ ಕರೆದೊಯ್ಯುವ ನಿರೀಕ್ಷೆಯಿದೆ. ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 105 ಮತ್ತು 276 ಮತ್ತು 27A ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ತಂಡಗಳು ನಗರಕ್ಕೆ ಬಂದಿದ್ದವು. ತಂಡ ಚೆನ್ನೈಗೆ ಆಗಮಿಸಿ, ರಂಗನಾಥನ್ ಆರ್ 3 ಅಶೋಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಮಾಹಿತಿ ಪಡೆದಿದೆ. ತದನಂತರ, ಚೆನ್ನೈ ಪೊಲೀಸರ ಸಹಾಐ ಪಡೆದು, ರಂಗನಾಥನ್ ಅವರನ್ನು ಅವರ ನಿವಾಸದಲ್ಲಿ ಬಂಧಿಸಲಾಯಿತು.
‘ಕೋಲ್ಡ್ರಿಫ್’ ಕೆಮ್ಮಿನ ಸಿರಪ್ ಉತ್ಪಾದಿಸುವ ಜವಾಬ್ದಾರಿಯನ್ನು ಶ್ರೀಸನ್ ಫಾರ್ಮಾಸ್ಯುಟಿಕಲ್ಸ್ ಹೊಂದಿದೆ. ಮಧ್ಯಪ್ರದೇಶದಲ್ಲಿ ಇದರ ಸೇವನೆಯಿಂದ ಇದುವರೆಗೆ 20 ಮಕ್ಕಳು ಸಾವನ್ನಪ್ಪಿದ್ದಾರೆ. ಇದು ಶ್ರೀಸನ್ ಫಾರ್ಮಾ ತಯಾರಿಸಿದ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವನೆಯಿಂದ ಎಂದು ಹೇಳಲಾಗಿದೆ.
ಉಪಮುಖ್ಯಮಂತ್ರಿ ರಾಜೇಂದ್ರ ಶುಕ್ಲಾ ಬುಧವಾರ ಚಿಂದ್ವಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಸಂತ್ರಸ್ತರಿಗೆ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ರಂಗನಾಥನ್ ಅವರನ್ನು ಬಂಧಿಸಲು ಪೊಲೀಸರ ತಂಡವನ್ನು ತಮಿಳುನಾಡಿಗೆ ಕಳುಹಿಸಲಾಗಿದೆ ಎಂದು ಹೇಳಿದರು.
ಕೋಲ್ಡ್ರಿಫ್ ಸಿರಪ್ ಮಕ್ಕಳ ಮೂತ್ರಪಿಂಡಗಳಿಗೆ ತೀವ್ರ ಹಾನಿ ಉಂಟುಮಾಡುವ ವಿಷಕಾರಿ ರಾಸಾಯನಿಕಗಳನ್ನು ಹೊಂದಿದೆ ಎಂದು ವೈದ್ಯಕೀಯ ಅಧ್ಯಯನಗಳು ಬಹಿರಂಗಪಡಿಸಿವೆ. ಇದನ್ನು ಸೇವಿಸಿದ ಕೆಲವೇ ಗಂಟೆಗಳಲ್ಲಿ ಮೂತ್ರಪಿಂಡ ವೈಫಲ್ಯದ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದವು. ಇದು ಮಕ್ಕಳ ಆರೋಗ್ಯದಲ್ಲಿ ಶೀಘ್ರ ಕ್ಷೀಣತೆಗೆ ಕಾರಣವಾಯಿತು.
ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ಪಂಜಾಬ್, ಗೋವಾ, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಈ ಕೆಮ್ಮಿನ ಸಿರಪ್ ಅನ್ನು ನಿಷೇಧಿಸಲಾಗಿದೆ. ಚಿಂದ್ವಾರ ಜಿಲ್ಲಾಡಳಿತವು ಐದು ಮೆಡಿಕಲ್ ಅಂಗಡಿಗಳನ್ನು ಮುಚ್ಚಿದೆ. ಪ್ರಯೋಗಾಲಯ ಪರೀಕ್ಷೆಗೆ ಸಿರಪ್ ಮಾದರಿಗಳನ್ನು ಕಳುಹಿಸಿದೆ. ಮಕ್ಕಳಿಗೆ ಯಾವುದೇ ಕೆಮ್ಮಿನ ಸಿರಪ್‌ಗಳನ್ನು ನೀಡದಂತೆ ಪೋಷಕರಿಗೆ ಎಚ್ಚರಿಕೆ ನೀಡಲಾಗಿದ್ದು, ಹಳ್ಳಿಗಳಲ್ಲಿ ಸಾರ್ವಜನಿಕ ಪ್ರಕಟಣೆಗಳನ್ನು ಮಾಡಲಾಗಿದೆ.
