ಬೆಂಗಳೂರು:
ಆಟೋ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ ವಿಚಾರವಾಗಿ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿರುವ ಆರೋಪದ ಹಿನ್ನಲೆ ಆಟೋ ಚಾಲಕನನ್ನು ರಾಜಧಾನಿಯ ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪವನ್ ಎಂದು ಗುರುತಿಸಲಾಗಿದ್ದು, ಆಟೋ ವಿಚಾರವಾಗಿ ಈಶಾನ್ಯ ಭಾರತ ಮೂಲದ ಯುವತಿ ಜೊತೆಗೆ ಈತನ ಗಲಾಟೆಯ ವಿಡಿಯೋ ವೈರಲ್ ಆಗಿತ್ತು.
ಅಕ್ಟೋಬರ್ 2ರ ಸಂಜೆ 7.30ರ ಸುಮಾರಿಗೆ ಈಶಾನ್ಯ ಭಾರತ ಮೂಲದ ಯುವತಿ ಕ್ಯಾಲಸನಹಳ್ಳಿಯಿಂದ ಬಾಣಸವಾಡಿಗೆ ತೆರಳಲು ಆಟೋ ಬುಕ್ ಮಾಡಿದ್ದಳು. ಆದರೆ ಬುಕ್ ಮಾಡಿದ್ದ ಆಟೋ ಬರೋದು ತಡವಾದ ಕಾರಣ, ಈ ವೇಳೆ ಅದೇ ಮಾರ್ಗದಲ್ಲಿ ಬಂದ ಮತ್ತೊಂದು ಆಟೋವನ್ನು ಆಕೆ ಹತ್ತಿದ್ದಳು. ಹಾಗೆಯೇ ಬುಕ್ ಮಾಡಿದ್ದ ಆಟೋವನ್ನು ಕ್ಯಾನ್ಸಲ್ ಮಾಡಿದ್ದಳು. ಆದರೆ ಈ ವೇಳೆಗೆ ಬುಕ್ ಮಾಡಿದ್ದ ಆಟೋ ಕೂಡ ಸ್ಥಳ ತಲುಪಿದ್ದು, ಬೇರೆ ಆಟೋ ಹತ್ತಿ ಹೊರಟ ಯುವತಿ ಬಳಿ ಚಾಲಕ ಪವನ್ ಜಗಳ ತೆಗೆದಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೊಡೆಯಲು ಯತ್ನ ಮಾಡಿರುವ ಬಗ್ಗೆ ಯುವತಿ ಆರೋಪಿಸಿದ್ದಳು. ಘಟನೆ ಬಗ್ಗೆ ಕೊತ್ತನೂರು ಠಾಣೆಗೆ ದೂರನ್ನೂ ನೀಡಿದ್ದಳು. ಆ ದೂರು ಆಧರಿಸಿ ಪೊಲೀಸರು ಆಟೋ ಚಾಲಕನನ್ನು ಬಂಧಿಸಿದ್ದಾರೆ.
ವಿಡಿಯೋ ರೆಕಾರ್ಡ್ ಮಾಡುತ್ತಿದ್ದರೂ ಕ್ಯಾರೇ ಎನ್ನದ ಆಟೋ ಚಾಲಕ ಪದೇ ಪದೆ ಹಲ್ಲೆಗೆ ಯತ್ನಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಳು. ಅಲ್ಲದೆ ಆ್ಯಪ್‌ಗಳ ಮೂಲಕ ಬುಕ್ಕಿಂಗ್ ಮಾಡಿ ತೆರಳುವ ಆಟೋಗಳಲ್ಲಿನ ಸುರಕ್ಷತೆ ಬಗ್ಗೆಯೂ ಪ್ರಶ್ನೆ ಮಾಡಿ ವಿಡಿಯೋ ಹಂಚಿಕೊಂಡಿದ್ದಳು. ಏಕಕಾಲಕ್ಕೆ ಎರಡು ಆಟೋಗಳನ್ನು ಬುಕ್ ಮಾಡಿದ್ದೇಕೆ, ಹಾಗೆ ಮಾಡಿದಾಗ ಇಂಥ ತಗಾದೆಗಳು ಉಂಟಾಗುತ್ತದೆ ಎಂದೂ ಕೆಲವರು ಟೀಕಿಸಿದ್ದಾರೆ.
