ದಾವಣಗೆರೆ: ಮಗು ಮಾರಾಟ ಮಾಡಿದ್ದ ವೈದ್ಯೆ ಸೇರಿ 6 ಮಂದಿ ಬಂಧನ….!

ದಾವಣಗೆರೆ:

    ನಕಲಿ ದಾಖಲೆಗಳನ್ನು ಸೃಷ್ಟಿಸಿ ನವಜಾತ ಶಿಶುವೊಂದನ್ನು ರೂ.4 ಲಕ್ಷಕ್ಕೆ ಮಾರಾಟ ಮಾಡಿದ ಜಾಲ ಭೇದಿಸಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಹಿಳಾ ಠಾಣೆಯ ಪೊಲೀಸರು, ವೈದ್ಯೆ ಸೇರಿ 6 ಮಂದಿ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

   ದಾವಣಗೆರೆಯ ಎಂ.ಕೆ.ಮೆಮೋರಿಯಲ್‌ ಆಸ್ಪತ್ರೆಯ ವೈದ್ಯೆ ಭಾರತಿ, ಶಿಶುವಿನ ತಾಯಿ ಕಾವ್ಯಾ, ಶಿಶು ಖರೀದಿಸಿದ್ದ ಜಯಾ ಹಾಗೂ ಪ್ರಶಾಂತ್‌ ಕುಮಾರ್‌ ದಂಪತಿ, ಮಧ್ಯವರ್ತಿಗಳಾದ ವಾದಿರಾಜ್‌, ಮಂಜಮ್ಮ, ಬಂಧಿತರು. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಅಪರಾಧವನ್ನು ಒಪ್ಪಿಕೊಂಡಿದ್ದು, ಪೊಲೀಸರು ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮಾರಾಟವಾಗಿದ್ದ ಎರಡೂವರೆ ತಿಂಗಳ ಗಂಡು ಶಿಶುವಿಗೆ ಮಕ್ಕಳ ಆರೈಕೆ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ.

   ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ ವ್ಯಕ್ತಿಯೊಬ್ಬರು ಕಾವ್ಯಾ ಎಂಬುವರಿಗೆ ಸೇರಿದ ಮಗುವನ್ನು ಮಧ್ಯವರ್ತಿಗಳಾದ ವಾದಿರಾಜ್ ಮತ್ತು ಮಂಜಮ್ಮ ಎಂಬುವರ ಮೂಲಕ ಎಂಕೆ ಸ್ಮಾರಕ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ ಭಾರತಿ ಅವರು ಜಯ ಮತ್ತು ಪ್ರಶಾಂತ್ ಕುಮಾರ್ ಕುರುಡೇಕರ್ ಅವರಿಗೆ ಮಾರಾಟ ಮಾಡಿದ್ದಾರೆಂದು ಮಾಹಿತಿ ನೀಡಿದ್ದರು.

   ಈ ಮಾಹಿತಿ ಆಧರಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಟಿ.ಎನ್.ಕವಿತಾ ಮತ್ತು ತಂಡ ವಿನೋಭನಗರದಲ್ಲಿರುವ ಜಯ ಮತ್ತು ಪ್ರಶಾಂತ್ ಅವರ ಮನೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ ಜನನ ಪ್ರಮಾಣಪತ್ರ ಸೇರಿ ಹಲವು ನಕಲಿ ಪ್ರಮಾಣಪತ್ರಗಳನ್ನು ವಶಕ್ಕೆ ಪಡೆದರು.

   ಜಯಾ ಹಾಗೂ ಪ್ರಶಾಂತ್‌ ದಂಪತಿಗೆ ಆ.26ರಂದು ಶಿಶು ಜನನವಾಗಿದೆ ಎಂಬುದಾಗಿ ದಾಖಲೆ ಸೃಷ್ಟಿಸಿರುವುದು ಕಂಡು ಬಂದಿತ್ತು. ದಾಖಲೆಗಳನ್ನು ಆಧರಿಸಿ ಆಸ್ಪತ್ರೆಗೆ ಭೇಟಿ ನೀಡಿದ ತಂಡ ಪರಿಶೀಲನೆ ನಡೆಸಿದಾಗ ಮಕ್ಕಳ ಮಾರಾಟ ವಿಚಾರ ಖಚಿತವಾಗಿದೆ.

   ಮದುವೆಯಾಗಿ ಗಂಡನಿಂದ ವಿಚ್ಛೇದನ ಪಡೆದಿದ್ದ ಕಾವ್ಯಾ ಅವರು ಕೆಲ ತಿಂಗಳ ಹಿಂದಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಮಗು ಮಾರಾಟ ಮಾಡಲು ನಿರ್ಧರಿಸಿದ್ದರು. ಇತ್ತ ಮದುವೆಯಾಗಿ 7 ವರ್ಷಗಳು ಕಳೆದರೂ ಜಯಾ ಹಾಗೂ ಪ್ರಶಾಂತ್ ಅವರಿಗೆ ಮಕ್ಕಳಿರಲಿಲ್ಲ. ಹೀಗಾಗಿ ಮಧ್ಯವರ್ತಿ ವಾದಿರಾಜ್ ಮೂಲಕ ಮಗುವನ್ನು ರೂ.4ಲಕ್ಷಕ್ಕೆ ಪಡೆದಿದ್ದರು.

   ವಾದಿರಾಜ್ ಡಾ.ಭಾರತಿ ಹಾಗೂ ಎಂಕೆ ಮಂಜುಳಾ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದರಿಂದ ನಕಲಿ ಜನನ ಪ್ರಮಾಣ ಪತ್ರ ಪಡೆದು, ಆಗಸ್ಟ್ 26ರಂದು ಜನನವಾಗಿದೆ ಎಂದು ದಾವಣೆಗೆರೆ ಮಹಾನಗರ ಪಾಲಿಕೆಯಲ್ಲಿ ದಾಖಲಾತಿ ಪಡೆದು, ಮಗು ಮಾರಾಟ ಮಾಡಿದ್ದಾನೆ.ಇದೀಗ ಆರೋಪಿಗಳ ವಿರುದ್ಧ ಬಾಲ ನ್ಯಾಯ ಕಾಯ್ದೆ 2015, ಮಕ್ಕಳ ರಕ್ಷಣಾ ಕಾಯ್ದೆ 2004 ಹಾಗೂ ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ ದಾಖಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ತಿಳಿಸಿದ್ದಾರೆ.

   ವಿಚಾರಣೆ ವೇಳೆ ಮಗುವಿನ ತಾಯಿ ಮಗುವನ್ನು ನೋಡಿಕೊಳ್ಳಲು ಸಾಧ್ಯವಾಗದ ಕಾರಣ, ಮಾರಾಟ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆಂದು ಹೇಳಿದ್ದಾರೆ.

Recent Articles

spot_img

Related Stories

Share via
Copy link
Powered by Social Snap