ಬೀಜಿಂಗ್:
ಅರುಣಾಚಲ ಪ್ರದೇಶ ತನ್ನ ಅವಿಭಾಜ್ಯ ಅಂಗ ಎಂದು ಭಾರತ ಪದೇ ಪದೆ ಸ್ಪಷ್ಟಪಡಿಸಿದ್ದರೂ ಆ ಬಗ್ಗೆ ಚೀನಾ ಸೋಮವಾರ ಮತ್ತೆ ತಗಾದೆ ತೆಗೆದಿದೆ. ಅರುಣಾಚಲ ಕುರಿತ ಚೀನಾದ ಹಕ್ಕು ಪ್ರತಿಪಾದನೆ ‘ಅಸಂಗತ’ ಹಾಗೂ ‘ಹಾಸ್ಯಾಸ್ಪದ’. ಈ ಗಡಿ ರಾಜ್ಯವು ‘ಭಾರತದ ಸಹಜ ಭಾಗ’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಶನಿವಾರ ಪ್ರತಿಪಾದಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್, ಅರುಣಾಚಲವು ಚೀನಾಕ್ಕೆ ಸೇರಿದ್ದಾಗಿದೆ ಎಂದು ಹೇಳಿದ್ದಾರೆ.
ಸಿಂಗಾಪುರ ನ್ಯಾಷನಲ್ ಯೂನಿವರ್ಸಿಟಿಯ ಪ್ರತಿಷ್ಠಿತ ದಕ್ಷಿಣ ಏಷ್ಯಾ ಅಧ್ಯಯನಗಳ ಸಂಸ್ಥೆಯಲ್ಲಿ ಶನಿವಾರ ಜೈಶಂಕರ್ ಉಪನ್ಯಾಸ ಮಾಡಿದ ನಂತರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಮೊದಲಿನಿಂದಲೂ ಚೀನಾದ ಪ್ರತಿಪಾದನೆ ಹಾಸ್ಯಾಸ್ಪದವಾಗಿದ್ದು ಈಗಲೂ ಹಾಗೆಯೇ ಇದೆ ಎಂದಿದ್ದರು.
ಜೈಶಂಕರ್ ಹೇಳಿಕೆ ಕುರಿತು ಚೀನಾದ ಅಧಿಕೃತ ಮಾಧ್ಯಮದವರು ಸೋಮವಾರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಲಿನ್, ಭಾರತ ಮತ್ತು ಚೀನಾ ನಡುವಿನ ಗಡಿ ಇನ್ನೂ ಇತ್ಯರ್ಥವಾಗಿಲ್ಲ. ಅರುಣಾಚಲ ಪ್ರದೇಶಕ್ಕೆ ಚೀನಾದ ಅಧಿಕೃತ ಹೆಸರಾಗಿರುವ ಝೆಂಗ್ನನ್, ಭಾರತ ‘ಅಕ್ರಮವಾಗಿ ವಶಪಡಿಸಿಕೊಳ್ಳುವವರೆಗೆ’ ಯಾವತ್ತೂ ಚೀನಾದ ಭಾಗವಾಗಿತ್ತು ಎಂದು ಲಿನ್ ಹೇಳಿದರು. ಲಾಗಾಯ್ತಿನಿಂದಲೂ ಅದರ ಮೇಲೆ ಚೀನಾ ಪರಿಣಾಮಕಾರಿ ಆಡಳಿತ ಹೊಂದಿದೆ ಎಂದೂ ಲಿನ್ ಹೇಳಿಕೊಂಡರು. ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಪ್ರದೇಶದಲ್ಲಿ ಭಾರತ 1987ರಲ್ಲಿ ‘ತಥಾಕಥಿತ ಅರುಣಾಚಲ ಪ್ರದೇಶ’ವನ್ನು ಸ್ಥಾಪಿಸಿತು ಎಂದು ಹೇಳಿದರು.
ಅರುಣಾಚಲ ಪ್ರದೇಶದ ಮೇಲೆ ಹಕ್ಕು ಸಾಧಿಸಿ ಚೀನಾ ಈ ತಿಂಗಳಲ್ಲಿ ಹೇಳಿಕೆ ನೀಡಿರುವುದು ಇದು ನಾಲ್ಕನೇ ಸಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 9ರಂದು ಅರುಣಾಚಲಕ್ಕೆ ಭೇಟಿ ಕೊಟ್ಟಿದ್ದನ್ನು ಚೀನಾ ವಿರೋಧಿಸಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ