ಒಪ್ಪಂದ ಆಗಿದ್ದರೆ ಅವರಿಬ್ಬರೇ ರಾಜಕಾರಣ ನಡೆಸಲಿ : ಭುಗಿಲೆದ್ದ ಅಸಮಾಧಾನ

ಬೆಂಗಳೂರು:

    ರಾಜ್ಯದಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಒಪ್ಪಂದ ಆಗಿರುವ ವಿಚಾರ ನನಗೆ ಗೊತ್ತಿಲ್ಲ. ಒಪ್ಪಂದ ಆಗಿದೆ ಎನ್ನುವುದಾದರೆ ನಾವೆಲ್ಲ ಯಾಕಿರಬೇಕು?. ಅವರಿಬ್ಬರೇ ರಾಜಕಾರಣ ನಡೆಸಲಿ. ಬೇರೆಯವರು ಇರುವುದೇ ಬೇಡವೇ?. ಆ ರೀತಿ ಒಪ್ಪಂದ ಆಗಿರಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಸಚಿವ ಜಿ.ಪರಮೇಶ್ವರ್ ಸೂಚ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

    ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಹುದ್ದೆ ಒಪ್ಪಂದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಒಪ್ಪಂದ ಆಗಿದೆ ಅಂತಾದ್ರೆ ನಾವೆಲ್ಲ ಯಾಕೆ ಇರಬೇಕು? ಅವರಿಬ್ಬರೇ ರಾಜಕಾರಣ ಮಾಡಿ, ಅವರಿಬ್ಬರೇ ನಡೆಸಿ ಬಿಡಲಿ, ಬೇರೆ ಅವರು ಇರೋದೇ ಬೇಡವಾ? ಅದೆಲ್ಲ ಆ ರೀತಿ ಆಗೋಕೆ ಸಾಧ್ಯವಿಲ್ಲ. ಹೈಕಮಾಂಡ್ ಬಿಟ್ಟು ನಾವು ಹೋಗೋರಲ್ಲ. ಹೈಕಮಾಂಡ್ ತೀರ್ಮಾನವನ್ನು ಒಪ್ಪಿಕೊಳ್ಳುತ್ತೇವೆ. ಒಪ್ಪಂದ ಎಲ್ಲ ನಮಗೆ ಗೊತ್ತಿಲ್ಲ ಎಂದು ಹೇಳಿದರು.

   ಈ ಬಗ್ಗೆ ದೆಹಲಿ ಮತ್ತು ರಾಜ್ಯದಲ್ಲಿ ಇಬ್ಬರು, ಮೂವರನ್ನು ಕೇಳಿದ್ದೇನೆ. ಒಪ್ಪಂದ ಆಗಿದೆ ಅಂತ ಯಾರು ಹೇಳಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಅಂತಹ ಒಪ್ಪಂದ ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು. ಕೆಪಿಸಿಸಿ ಮತ್ತು ಸ್ವಾಭಿಮಾನಿಗಳ ಒಕ್ಕೂಟ ಒಟ್ಟಾಗಿ ಸಮಾವೇಶ ಮಾಡುತ್ತಿದ್ದು, ಯಾವುದೇ ಗೊಂದಲಗಳು ಇಲ್ಲ‌. ಕಾಂಗ್ರೆಸ್ ಪಕ್ಷ‌ ಮತ್ತು ಸರ್ಕಾರದ ಮೇಲೆ ಸ್ವಾಭಿಮಾನಿ ಒಕ್ಕೂಟಕ್ಕೆ ಸಹಾನುಭೂತಿ ಇದೆ. ಹೀಗಾಗಿ, ಒಟ್ಟಿಗೆ ಸಮಾವೇಶ ಮಾಡುತ್ತಿದ್ದು, ಇದರಲ್ಲಿ ಯಾವುದೇ ಗೊಂದಲವಿಲ್ಲ. ಗೊಂದಲ ಇದೆ ಎಂಬಂತೆ ಅವರಿರವರು ಸೃಷ್ಟಿ ಮಾಡುತ್ತಿದ್ದಾರೆ ಎಂದು ಹೇಳಿದರು.

    ನಾವು ರಾಜ್ಯದ ಜನತೆಗೆ ಚುನಾವಣೆಯ ಸಂದರ್ಭದಲ್ಲಿ ರಾಜಕೀಯವಾಗಿ ಏನೆಲ್ಲ ಮಾತನಾಡಿದ್ದೇವೆ, ಅದೆಲ್ಲವನ್ನು ನಾವು ಜನಗಳಿಗೆ ಹೇಳಬೇಕು. ಸರ್ಕಾರದ ಕಾರ್ಯಕ್ರಮಗಳಲ್ಲಿ ಅನೇಕ ರಾಜಕೀಯ ವಿಚಾರಗಳನ್ನು ಪ್ರಸ್ತಾಪ ಮಾಡಲು ಆಗುವುದಿಲ್ಲ. ಅದಕ್ಕಾಗಿ ಈ ಸಮಾವೇಶದಲ್ಲಿ ರಾಜಕೀಯ ವಿಚಾರಗಳನ್ನು ಪ್ರಸ್ತಾಪ‌ ಮಾಡುತ್ತೇವೆ. ಜನಗಳಿಗೆ ಸತ್ಯಾಂಶ ಗೊತ್ತಾಗಬೇಕು. ಅನೇಕ ವಿಚಾರದಲ್ಲಿ ಪ್ರತಿಪಕ್ಷದವರು ಮಾಡುವ ಆಪಾದನೆಗಳಿಗೆ ರಾಜಕೀಯವಾಗಿ ಉತ್ತರ ಕೊಡುತ್ತೇವೆ ಎಂದು ಪ್ರತಿಕ್ರಿಯಿಸಿದರು.

Recent Articles

spot_img

Related Stories

Share via
Copy link