ಬೆಂಗಳೂರು
ಬೆಂಗಳೂರು ಸಮೀಪವೇ ಮೊಬೈಲ್ ಉತ್ಪಾದನಾ ಕಂಪನಿ ಶುರುವಾಗಲಿದ್ದು, 40 ಸಾವಿರ ಉದ್ಯೋಗ ಸೃಷ್ಟಿಯಾಗುವ ಗುರಿ ಇದೆ. ಮುಂದಿನ ಸಲ ಬಂದಾಗ ನಾನು ಈ ಕಂಪನಿಗೆ ಭೇಟಿ ಕೊಡುತ್ತೇನೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ಪಾದನಾ ವಲಯಕ್ಕೂ ಬಜೆಟ್ ಹೆಚ್ಚಿನ ಆದ್ಯತೆ ನೀಡಿದೆ. ಉದ್ಯೋಗ ಸೃಷ್ಟಿಯಾಗುವುದೇ ಉತ್ಪಾದನಾ ವಲಯದಿಂದ. ಮೊಬೈಲ್ ಫೋನ್, ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್, ಫೂಟ್‌ವೇರ್ ಉತ್ಪಾದಕ ವಲಯಗಳಿಗೆ ಬಜೆಟ್ ಪುಷ್ಟಿ ನೀಡಿದೆ ಎಂದಿದ್ದಾರೆ.
ಕರ್ನಾಟಕ ರೈಲ್ವೇಗೆ 7,564 ಕೋಟಿ ರೂ. ಅನುದಾನ ಕೊಡಲಾಗಿದೆ. ಯುಪಿಎ ಅವಧಿಯಲ್ಲಿ 850 ಕೋಟಿ ರೂ. ಕೊಡಲಾಗುತ್ತಿತ್ತು. 51,479 ಕೋಟಿಯಷ್ಟು ರೈಲ್ವೇ ವಲಯದಲ್ಲಿ ಬಂಡವಾಳ ಹೂಡಲಾಗಿದೆ. ಅಮೃತ್ ಸ್ಟೇಷನ್ ಯೋಜನೆಯಡಿ 61 ರೈಲ್ವೇ ನಿಲ್ದಾಣಗಳ ಮರು ನಿರ್ಮಾಣ ಆಗಿದೆ. 1,652 ಕಿ.ಮೀ. ಹೊಸ ರೈಲ್ವೇ ಮಾರ್ಗದ ನಿರ್ಮಾಣ ರಾಜ್ಯದಲ್ಲಾಗಿದೆ. 10 ವಂದೇ ಭಾರತ್ ರೈಲುಗಳು ಕರ್ನಾಟಕದಲ್ಲಿ ಸಂಚರಿಸುತ್ತಿವೆ, ಮತ್ತಷ್ಟು ಬರಲಿವೆ. ಸಬ್ ಅರ್ಬನ್ ರೈಲ್ವೇ ಯೋಜನೆಗೆ 15,762 ಕೋಟಿ ರೂ. ಕೊಡಲಾಗಿದೆ. 15,611 ಕೋಟಿ ರೂ. ಮೆಟ್ರೋಗೆ ಕೊಡಲಾಗಿದೆ ಎಂದು ಹೇಳಿದ್ದಾರೆ.
ಕಳೆದ 60 ವರ್ಷದಲ್ಲಿ ಆಗದಿರುವ ಕೆಲಸ ಪ್ರಧಾನಿ ಮೋದಿ ಅವಧಿಯಲ್ಲಾಗಿದೆ. ಒಂದು ಮತ್ತು ಎರಡನೇ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯ ದೇಶದ ಯಾವ ಭಾಗಕ್ಕೆ ಹೋದರೂ ಕಾಣುತ್ತದೆ. 12 ಲಕ್ಷದವರೆಗೆ ತೆರಿಗೆ ಇಲ್ಲದಿರುವುದು ಐಐಎಂ, ಐಐಟಿ ಇದೆಲ್ಲಾ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಿದೆ. ವಾಜಪೇಯಿ ಅವಧಿ ಬಳಿಕ ಯುಪಿಎ ಅವಧಿಯಲ್ಲಿ ಭಾರತದ ಆರ್ಥಿಕತೆ ಬಹಳ ಕೆಟ್ಟ ಸ್ವರೂಪದಲ್ಲಿ ಇತ್ತು. 2014 ರಲ್ಲಿ ಬ್ಯಾಂಕಿಂಗ್ ವಲಯ ಅಷ್ಟು ಉತ್ತಮವಾಗಿರಲಿಲ್ಲ. ಪ್ರಧಾನಿ ಮೋದಿ ಅದಕ್ಕೊಂದು ಆಯಾಮ ನೀಡಿದರು. ಪ್ರತಿ ವರ್ಷ ಹೈವೇ, ರೈಲ್ವೇ, ಏರ್ ಪೋರ್ಟ್ ಅಭಿವೃದ್ಧಿ ಆಯಿತು ಎಂದು ತಿಳಿದ್ದಾರೆ.
ಕೇಂದ್ರ ಸರ್ಕಾರದ ಆಡಳಿತಕ್ಕೆ ಜನ ಮೆಚ್ಚುಗೆ ದೊಡ್ಡದಾಗಿಯೇ ಸಿಗುತ್ತಿದೆ. ಮೋದಿ ದೂರದೃಷ್ಟಿ ಯೋಜನೆಗಳಿಗೆ ಜನರ ಬೆಂಬಲ ಸಿಕ್ಕಿದೆ. ಜನಧನ್, ಉಜ್ವಲಾ, ಜಲಜೀವನ್ ಯೋಜನೆಗಳು ಜನರ ಬದುಕಿನಲ್ಲಿ ದೊಡ್ಡ ಬದಲಾವಣೆ ತಂದಿವೆ. ಮೂಲಸೌಕರ್ಯ ವೃದ್ಧಿ, ಶಿಕ್ಷಣ ಅಭಿವೃದ್ಧಿ, ರೈಲ್ವೇ ಯೋಜನೆಗಳು ಜನರ ಬದುಕಿನ ಗತಿ ಬದಲಿಸಿವೆ ಎಂದರು.
ಈ ಬಾರಿಯ ಬಜೆಟ್ನ ಬಹು ಮುಖ್ಯ ಅಂಶ ತೆರಿಗೆ ಸುಧಾರಣೆ. ಪ್ರಧಾನಿ ಮೋದಿ ಆರ್ಥಿಕ ಚಿಂತನೆಗಳು ಸಾಕಷ್ಟು ಬದಲಾವಣೆ ತಂದಿದೆ. ಹತ್ತು ವರ್ಷಗಳ ಹಿಂದೆ ಕಾಲ್ ಡ್ರಾಪ್ ಆಗುವುದು ದೊಡ್ಡ ಚರ್ಚೆ ಆಗುತ್ತಿತ್ತು. ಈಗ ನಮಗೆ ಉತ್ತಮ 5ಜಿ ನೆಟ್ ವರ್ಕ್ ಇದೆ. ಕಳೆದ ಹತ್ತು ವರ್ಷದಿಂದ ವಿವಿಗಳು, ಐಐಎಂ, ಐಐಟಿ, ಮೆಡಿಕಲ್ ಕಾಲೇಜುಗಳ ಸಂಖ್ಯೆ ದುಪ್ಪಟ್ಟಾಗಿವೆ. ಬಡ-ಮಧ್ಯಮ ವರ್ಗದ ಮೇಲೆ ಈ ಬಾರಿ ಬಜೆಟ್ ಫೋಕಸ್ ಮಾಡಿದೆ. ಕಿಸಾನ್ ಸಮ್ಮಾನ್ ನಿಧಿಯಂತಹ ರೈತ ಕಲ್ಯಾಣ ಯೋಜನೆಗಳು ಬದಲಾವಣೆಗೆ ಸಾಕ್ಷಿ ಆಗಿವೆ. ಸಣ್ಣ, ಅತಿ ಸಣ್ಣ ಕೈಗಾರಿಕೆಗಳಿಗೆ ದೊಡ್ಡ ನಿರೀಕ್ಷೆ, ಭರವಸೆ ನಮ್ಮ ಸರ್ಕಾರದಿಂದ ಸಿಕ್ಕಿದೆ. ಈಗ ದೇಶ ದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಸೃಷ್ಟಿಸಿದೆ. ಹಣದುಬ್ಬರಕ್ಕೆ ಕಡಿವಾಣ ಬಿದ್ದಿದೆ ಎಂದು ಹೇಳಿದ್ದಾರೆ.
ಮುಂದಿನ ವರ್ಷದ ಹೊತ್ತಿಗೆ ನಮ್ಮ ದೇಶ 356 ಲಕ್ಷ ಕೋಟಿ ಆರ್ಥಿಕತೆ ಹೊಂದಲಿದೆ. ಜಗತ್ತಿನ ಐದನೇ ದೊಡ್ಡ ಆರ್ಥಿಕತೆಯ ದೇಶ ಭಾರತ. ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್ಗಳಿಗೆ ಹೋಲಿಸಿದರೆ ನಮ್ಮ ಆರ್ಥಿಕತೆಯ ಆರೋಗ್ಯ ಚೆನ್ನಾಗಿದೆ. ಉತ್ಪಾದನಾ ವಲಯಕ್ಕೂ ಬಜೆಟ್ ಹೆಚ್ಚಿನ ಆದ್ಯತೆ ನೀಡಿದೆ ಎಂದಿದ್ದಾರೆ.
