ನವದೆಹಲಿ:
ಬಹುನಿರೀಕ್ಷಿತ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಪಂದ್ಯಾವಳಿ ಸೆಪ್ಟೆಂಬರ್ 9ರಿಂದ 28ರವರೆಗೆ ನಡೆಯಲಿದೆ. ಟೂರ್ನಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಆತಿಥ್ಯ ವಹಿಸಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಯುಎಇ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಸೆ.4 ರಂದು ಟೀಮ್ ಇಂಡಿಯಾ ದುಬೈ ತಲುಪಲಿದೆ. ಆದರೆ ಇದೇ ಮೊದಲ ಬಾರಿಗೆ ಭಾರತ ತಂಡದ ಆಟಗಾರರು ಪ್ರತ್ಯೇಕವಾಗಿ ದುಬೈಗೆ ಪ್ರಯಾಣಿಸಲಿದ್ದಾರೆ.
ಬಿಸಿಸಿಐ ವಾಡಿಕೆ ಪ್ರಕಾರ ಯಾವುದೇ ವಿದೇಶಿ ಸರಣಿಗೆ ಭಾರತ ತಂಡದ ಆಟಗಾರರು ಮುಂಬೈ ಅಥವಾ ದೇಶದ ಪ್ರಮುಖ ನಗರವೊಂದರಲ್ಲಿ ಒಗ್ಗೂಡಿ ನಂತರ ಜತೆಯಾಗಿ ಪ್ರಯಾಣ ಬೆಳೆಸುತ್ತಿದ್ದರು. ಆದರೆ ಈ ಬಾರಿ ಬಿಸಿಸಿಐ ಈ ವಾಡಿಕೆಗೆ ಬ್ರೇಕ್ ಹಾಕಿದೆ. ಪ್ರತ್ಯೇಕವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದೆ. ಅದರಂತೆ ಆಟಗಾರರು ತಮ್ಮ ತವರು ರಾಜ್ಯದದ ನಗರ ಅಥವಾ ತಮಗೆ ಅನುಕೂಲವೆನಿಸುವ ನಗರದಿಂದ ದುಬೈಗೆ ವಿಮಾನ ಏರಬಹುದಾಗಿದೆ.
ಸೆ.4 ರಂದು ದುಬೈಗೆ ಬಂದಿಳಿಯುವ ಟೀಮ್ ಇಂಡಿಯಾ ಆಟಗಾರರು ಅಂದು ವಿಶ್ರಾಂತಿ ಪಡೆದು, ಸೆ. 5ರಿಂದ ಅಭ್ಯಾಸ ಆರಂಭಿಸಲಿದ್ದಾರೆ. ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತ ತಂಡದ ವೇಗದ ಬೌಲಿಂಗ್ ವಿಭಾಗವನ್ನು ಜಸ್‌ಪ್ರೀತ್ ಬುಮ್ರಾ ನಿರ್ವಹಿಸಲಿದ್ದಾರೆ. ಅವರೊಂದಿಗೆ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್, ಹರ್ಷಿತ್ ರಾಣಾ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಕಾಣಿಸಿಕೊಂಡಿದ್ದಾರೆ.
ಸೂರ್ಯ ಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿ.ಕೀ.), ಜಸ್‌ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಸಂಜು ಸ್ಯಾಮ್ಸನ್ (ವಿ.ಕೀ.), ಹರ್ಷಿತ್ ರಾಣಾ, ರಿಂಕು ಸಿಂಗ್.








