ಏಷ್ಯಾಕಪ್
ಸೂಪರ್ 4 ಹಂತದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಮಾತ್ರವಲ್ಲದೆ ಮಳೆಯ ವಿರುದ್ಧವೂ ಹೋರಾಡಬೇಕಾಯಿತು. ಎರಡು ದಿನಗಳ ಕಾಲ ನಡೆದ ಈ ಕದನದಲ್ಲಿ ಭಾರತ ಅಮೋಘವಾದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ಮುಂದುವರಿಸಿದ್ದು ವಿಶ್ವಕಪ್‌ಗೆ ಭರ್ಜರಿ ಸಿದ್ಧತೆ ನಡೆಸಿದಂತಾಗಿದೆ.
ಇನ್ನು ಪಾಕಿಸ್ತಾನದ ವಿರುದ್ಧದ ಈ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲುವು ಬಹಳ ಅಗತ್ಯವಾಗಿತ್ತು. ಗ್ರೂಪ್ ಹಂತದಲ್ಲಿ ಅಪೂರ್ಣ ಪಂದ್ಯದಲ್ಲಿ ಭಾರತದ ಅಗ್ರ ಕ್ರಮಾಂಕ ವೈಫಲ್ಯ ಕಂಡ ಬಳಿಕ ಸೂಪರ್ 4 ಹಂತದಲ್ಲಿ ಭಾರತ ಮುಖಾಮುಖಿಯಾದಾಗ ಪಕ್ಕಾ ರಣತಂತ್ರದೊಂದಿಗೆ ಕಣಕ್ಕಿಳಿದಿದ್ದು ಸ್ಪಷ್ಟವಾಗಿತ್ತು. ಬಾಬರ್ ಅಜಂ ನೇತೃತ್ವದ ಬಲಿಷ್ಠ ತಂಡದ ವಿರುದ್ಧ ಭಾರತ ತಂಡದ ರಣತಂತ್ರ ಹೇಗಿತ್ತು ಎನ್ನುವುದರ ಮಾಹಿತಿ ಇಲ್ಲಿದೆ.
ಟೀಮ್ ಇಂಡಿಯಾ ಲೀಗ್ ಹಂತದಲ್ಲಿ ಅಗ್ರ ಕ್ರಮಾಂಕದ ಹಿನ್ನಡೆಯಿಂದ ಪಾಠ ಕಲಿತಿದ್ದು ಈ ಪಂದ್ಯದಲ್ಲಿ ಸ್ಪಷ್ಟವಾಗಿತ್ತು. ಶಾಹೀನ್ ಶಾ ಅಫ್ರಿದಿ ನೇತೃತ್ವದ ಪಾಕಿಸ್ತಾನದ ವೇಗದ ಬೌಲಿಂಗ್ ವಿಭಾಗದ ವಿರುದ್ಧ ಭಾರತದ ಆರಂಭಿಕ ಆಟಗಾರರು ಆಕ್ರಮಣಕಾರಿ ಆಟದ ಮೂಲಕ ಆಘಾತ ನೀಡುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿದ್ದರು.
ಅನುಭವಿ ರೋಹಿತ್ ಒಂದು ತುದಿಯಲ್ಲಿದ್ದಾಗ ಇದರ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದು ಯುವ ಆಟಗಾರ ಶುಬ್ಮನ್ ಗಿಲ್. ಪಾಕ್ ತಂಡದ ಪ್ರಮುಖ ವೇಗಿ ಶಾಹೀನ್ ಶಾ ಅವರನ್ನೇ ಗುರಿಯಾಗಿಸಿ ದಂಡಿಸಿದರು. ತಂಡದ ಪ್ರಮುಖ ವೇಗಿಯೇ ಯದ್ವಾತದ್ವ ಹೊಡೆತ ತಿಂದಾಗ ಪಾಕ್ ಉಳಿದ ಬೌಲರ್‌ಗಳು ನಿರೀಕ್ಷಿಸಂತೆಯೇ ಕಂಗಾಲಾಗಿದ್ದರು. ಭಾರತದ ಈ ರಣತಂತ್ರದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿತ್ತು.
ಈ ಪಂದ್ಯಕ್ಕೂ ಮುನ್ನ ಪಾಕಿಸ್ತಾನದ ವೇಗದ ಬೌಲಿಂಗ್ ವಿಭಾಗ ಬಲಿಷ್ಠವಾಗಿ ತೋರುತ್ತಿದ್ದರೂ ಮಧ್ಯಮ ಓವರ್‌ಗಳ ಬೌಲಿಂಗ್‌ನಲ್ಲಿ ಪಾಕ್ ಹಿನ್ನಡೆ ಅನುಭವಿಸುತ್ತಿರುವುದು ಸ್ಪಷ್ಟವಾಗಿತ್ತು. ಪಾಕ್ ತಂಡದ ಪ್ರಮುಖ ಸ್ಪಿನ್ನರ್ ಶದಬ್ ಖಾನ್ ಫಾರ್ಮ್ ಕಳೆದುಕೊಂಡಿರುವುದು ಹಾಗೂ ಪಾಕ್ ವೇಗಿಗಳು ಕೂಡ ಈ ಅವಧಿಯಲ್ಲಿ ಪರಿಣಾಮಕಾರಿಯಾಗಿರಲಿಲ್ಲ.
ಇದನ್ನು ಭಾರತ ಗುರಿಯಾಗಿಸಿಕೊಂಡಿತ್ತು. ಈ ಅವಧಿಯಲ್ಲಿ ಟೀಮ್ ಇಂಡಿಯಾದ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಪಾಕ್ ವಿರುದ್ಧ ಸವಾರಿ ಮಾಡಿದ್ದರು. ಭಾರತದ ಈ ರಣತಂತ್ರ ಎಷ್ಟು ಪರಿಣಾಮಕಾರಿಯಾಗಿತ್ತು ಎಂದರೆ ಗಿಲ್, ರೋಹಿತ್ ವಿಕೆಟ್ ಕಳೆದುಕೊಂಡ ಬಳಿಕ ಮತ್ತೊಂದು ವಿಕೆಟ್ ಪಡೆಯಲು ಪಾಕ್ ಬೌಲರ್‌ಗಳಿಂದ ಸಾಧ್ಯವಾಗಲೇ ಇಲ್ಲ.
ಇನ್ನು ಪಾಕಿಸ್ತಾನದ ಬ್ಯಾಟಿಂಗ್ ವಿಭಾಗ ಅದರ ಬೌಲಿಂಗ್‌ನಷ್ಟು ಬಲಿಷ್ಠವಾಗಿಲ್ಲದಿದ್ದರೂ ಆ ತಂಡದ ಮೂವರು ಬ್ಯಾಟರ್‌ಗಳು ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಟಾಪ್ 10ನಲ್ಲಿದ್ದಾರೆ ಎನ್ನುವುದು ಗಮನಾರ್ಹ. ಈ ಬ್ಯಾಟಿಂಗ್ ವಿಭಾಗದ ವಿರುದ್ಧ ವೇಗಿ ಜಸ್ಪ್ರೀತ್ ಬೂಮ್ರಾ ನೇತೃತ್ವದಲ್ಲಿ ರಣತಂತ್ರವನ್ನು ಹೆಣೆಯಲಾಗುತ್ತು. ಕೊಲಂಬೋದ ಪಿಚ್‌ನ ವರ್ತನೆಗೆ ತಕ್ಕಂತೆ ಬೌಲಿಂಗ್ ಮಾಡಿದ ಭಾರತದ ವೇಗಿಗಳು ಮೊದಲ 12 ಓವರ್‌ಗಳು ಮುಗಿಯುವ ಮುನ್ನ ಅಗ್ರ ಕ್ರಮಾಂಕದ ಮೂವರು ದಾಂಡಿಗರನ್ನು ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಬೂಮ್ರಾ, ಪಾಂಡ್ಯ ಹಾಗೂ ಶಾರ್ದೂಲ್ ಈ ಮೂವರು ಕೂಡ ಈ ಅವಧಿಯಲ್ಲಿ ತಲಾ ಒಂದೊಂದು ವಿಕೆಟ್ ಕಬಳಿಸಿದ್ದರು.
ಇನ್ನು ಪಾಕ್ ವೇಗಿಗಳ ಅದ್ಭುತ ಆರಂಭದ ಬಳಿಕ ಪಾಕ್ ಬ್ಯಾಟಿಂಗ್ ವಿಭಾಗದನ್ನು ಧ್ವಂಸಮಾಡುವ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದು ಸ್ಪಿನ್ನರ್ ಕುಲ್‌ದೀಪ್ ಯಾದವ್. ಸತತವಾಗಿ ಪಾಕ್ ದಾಂಡಿಗರಿಗೆ ಕುಲ್‌ದೀಪ್ ಆಘಾತ ನೀಡುತ್ತಲೇ ಹೋದರು. ನಂತರದ ಐವರು ಬ್ಯಾಟರ್‌ಗಳು ಕುಲ್‌ದೀಪ್‌ಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್‌ಗೆ ಸೇರಿಕೊಂಡರು. ಈ ಮೂಲಕ ಪಾಕಿಸ್ತಾನ ತಂಡವನ್ನು ಕೇವಲ 128 ರನ್‌ಗಳಿಗೆ ಆಲೌಟ್ ಮಾಡಿ ಪಂದ್ಯವನ್ನು ಮುಗಿಸುವಲ್ಲಿ ಭಾರತ ಯಶಸ್ವಿಯಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ