ಜಾತಿ ಗಣತಿ ಹೆಸರಿನಲ್ಲಿ ಬಂದು ಮನೆ ದರೋಡೆಗೆ ಯತ್ನಿಸಿದ ದಂಪತಿ

ಶಿವಮೊಗ್ಗ:

    ಖತರ್‌ನಾಕ್‌ ದಂಪತಿಗಳಿಬ್ಬರು, ಜಾತಿ ಗಣತಿಯ  ಹೆಸರಿನಲ್ಲಿ ಮನೆಯೊಳಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ  ಮಾಡಿ, ದರೋಡೆಗೆ  ವಿಫಲ ಯತ್ನ ನಡೆಸಿದ ಘಟನೆ ಶಿವಮೊಗ್ಗದಲ್ಲಿ  ನಡೆದಿದೆ. ಶಿವಮೊಗ್ಗದ ಆಜಾದ್‌ ನಗರದಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿದ್ದ ಮಹಿಳೆ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ದರೋಡೆಗೆ ಯತ್ನಿಸಿದ ದಂಪತಿಯನ್ನು ಸ್ಥಳೀಯರು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ.

   ಶಿವಮೊಗ್ಗ ನಗರದ ಕ್ಲಾರ್ಕ್ ಪೇಟೆಯ ಆಜಾದ್ ನಗರದ ಎರಡನೇ ತಿರುವಿನ ನಿವಾಸಿ ಮಹಿಳೆ ದಿಲ್ ಶಾದ್ ಎಂಬವರ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ನಡೆಸಿದ ದಂಪತಿ ಹೆಸರು ತಸ್ಲಿಮಾ ಹಾಗೂ ಅಸ್ಲಾಂ. ಮನೆಯಲ್ಲಿ ಪುರುಷರು ಇಲ್ಲದ ವೇಳೆ ಜಾತಿ ಗಣತಿ ಹೆಸರಿನಲ್ಲಿ ಮನೆಗೆ ಆಗಮಿಸಿದ ದಂಪತಿ, ಮನೆಯಲ್ಲಿದ್ದ ದಿಲ್ ಶಾದ್‌ ಜೊತೆ ವಿಚಾರಿಸಿದ್ದಾರೆ. ಆಧಾರ್ ಕಾರ್ಡ್ ತೋರಿಸುವಂತೆ ಹೇಳಿದ ಮಹಿಳೆ ತಸ್ಲೀಮಾ, ಆಧಾರ್ ಕಾರ್ಡ್ ತರಲು ಮನೆಯ ಒಳಗೆ ಹೋದ ದಿಲ್ ಶಾದ್ ಮೇಲೆ ಹಲ್ಲೆ ಮಾಡಿದ್ದಾರೆ. ಮಹಿಳೆಯ ತಲೆಗೆ ರಾಡ್‌ನಿಂದ ಬಲವಾಗಿ ಹೊಡೆದಿದ್ದಾರೆ.

   ಬಲವಾದ ಪೆಟ್ಟು ಬೀಳುತ್ತಿದ್ದಂತೆ ತಸ್ಲೀಮಾ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ವೇಳೆ ಆಕೆಯ ಕಿರುಚಾಟ ಕೇಳಿ ರಕ್ಷಣೆಗೆ ಅಕ್ಕಪಕ್ಕದ ಮನೆಯವರು ಧಾವಿಸಿದ್ದಾರೆ. ಈ ವೇಳೆ ಕಂಗಾಲಾದ ತಸ್ಲೀಮಾ, ಅದೇ ಮನೆಯಲ್ಲಿ ಅಡಗಿ ಕುಳಿತಿದ್ದಳು. ಸ್ಥಳೀಯರು ಆಕೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆಕೆ ತಂದ ಬ್ಯಾಗ್‌ಗಳನ್ನು ಪರಿಶೀಲನೆ ಮಾಡಿದಾಗ ಅದರಲ್ಲಿ ಕೆಲವು ಮಾರಕಾಸ್ತ್ರಗಳು ಪತ್ತೆ ಆಗಿವೆ. ರಕ್ತದ ಮಡಿಲಿನಲ್ಲಿ ಬಿದ್ದಿದ್ದ ಮಹಿಳೆ ದಿಲ್ ಶಾದ್‌ಳನ್ನು ಶಿವಮೊಗ್ಗ ನಗರದ ಸಹರಾ ಆಸ್ಪತ್ರೆಗೆ ದಾಖಲಿಸಲಾಗಿದೆ.

   ದಿಲ್ ಶಾದ್‌ಗೆ ತಲೆಯ ಭಾಗಕ್ಕೆ ಬಲವಾದ ಹೊಡೆತ ಬಿದ್ದಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ.

Recent Articles

spot_img

Related Stories

Share via
Copy link