ಯಮುನಾ ನದಿಯಲ್ಲಿ ಮನಮೋಹನ್ ಸಿಂಗ್ ಅಸ್ತಿ ವಿಸರ್ಜನೆ

ನವದೆಹಲಿ:

   ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರ ಚಿತಾಭಸ್ಮವನ್ನು ಯಮುನಾ ನದಿಯಲ್ಲಿ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಯಾವೊಬ್ಬ ಕಾಂಗ್ರೆಸ್ ನಾಯಕರು ಅಲ್ಲಿರಲಿಲ್ಲ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಕುಟುಂಬದ ಖಾಸಗಿತನಕ್ಕೆ ಧಕ್ಕೆ ಉಂಟುಮಾಡದಿರಲು ಭಾಗಿಯಾಗಿರಲಿಲ್ಲ ಎಂದು ಸೋಮವಾರ ಹೇಳಿದೆ.

   ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ, ಮನಮೋಹನ್ ಸಿಂಗ್ ಅವರ ಕುಟುಂಬದ ಖಾಸಗಿತನಕ್ಕೆ ಗೌರವ ಸೂಚಿಸುವ ಸಲುವಾಗಿ ಚಿತಾಭಸ್ಮ ಸಂಗ್ರಹಿಸಲು ಮತ್ತು ವಿಸರ್ಜನೆ ಮಾಡುವ ವೇಳೆಯಲ್ಲಿ ಭಾಗಿಯಾಗಿರಲಿಲ್ಲ ಎಂದಿದ್ದಾರೆ.

   ‘ನಮ್ಮ ಪ್ರೀತಿಯ ಅಗಲಿದ ನಾಯಕನ ಅಂತ್ಯಕ್ರಿಯೆಯ ನಂತರ, ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಿಂಗ್ ಅವರ ನಿವಾಸಕ್ಕೆ ತೆರಳಿ ಕುಟುಂಬ ಸದಸ್ಯರನ್ನು ಭೇಟಿಯಾದರು. ಕುಟುಂಬದೊಂದಿಗೆ ಚರ್ಚಿಸಿದ ಬಳಿಕವೇ, ಶವಸಂಸ್ಕಾರದ ಸಮಯದಲ್ಲಿ ಕುಟುಂಬಕ್ಕೆ ಗೌಪ್ಯತೆ ಸಿಗದ ಕಾರಣ ಮತ್ತು ಕೆಲವು ಕುಟುಂಬ ಸದಸ್ಯರು ಚಿತಾಗಾರವನ್ನು ತಲುಪಲು ಸಾಧ್ಯವಾಗದ ಕಾರಣ, ಚಿತಾಭಸ್ಮ ವಿಸರ್ಜನೆ ವೇಳೆಯಲ್ಲಾದರೂ ಕುಟುಂಬದ ಗೌಪ್ಯತೆಯನ್ನು ಕಾಪಾಡಬೇಕೆಂಬ ನಿರ್ಧಾರ ಕೈಗೊಳ್ಳಲಾಯಿತು. ಅಸ್ಥಿ ವಿಸರ್ಜನೆಯು ಕುಟುಂಬ ಸದಸ್ಯರಿಗೆ ಭಾವನಾತ್ಮಕವಾಗಿ ನೋವಿನ ಮತ್ತು ಕಷ್ಟಕರವಾದ ಸಂದರ್ಭವಾಗಿದೆ’ ಎಂದು ಖೇರಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

   ಸಿಂಗ್ ಅವರ ಅಂತಿಮ ಸಂಸ್ಕಾರ ಮತ್ತು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಸ್ಮರಣಾರ್ಥ ಸ್ಮಾರಕವನ್ನು ನಿರ್ಮಿಸುವ ಕುರಿತು ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಅಂತ್ಯಸಂಸ್ಕಾರ ನೆರವೇರಿಸುವ ಪ್ರಕ್ರಿಯೆಯಲ್ಲಿ ಬಿಜೆಪಿ ಸರ್ಕಾರ ಮಾಜಿ ಪ್ರಧಾನಿಗೆ ಅಗೌರವ ತೋರಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಡಾ. ಸಿಂಗ್ ಅವರ ಚಿತಾಭಸ್ಮವನ್ನು ಅವರ ಕುಟುಂಬ ಸದಸ್ಯರು ಭಾನುವಾರ ಬೆಳಿಗ್ಗೆ ನಿಗಮಬೋಧ ಘಾಟ್‌ನಿಂದ ಸಂಗ್ರಹಿಸಿ, ಮಜ್ನೂ ಕಾ ತಿಲಾ ಗುರುದ್ವಾರದ ಬಳಿಯ ಯಮುನಾ ನದಿಯಲ್ಲಿ ವಿಸರ್ಜನೆ ಮಾಡಿದರು.

   ಸಿಖ್ ವಿಧಿವಿಧಾನಗಳ ಪ್ರಕಾರ ಜನವರಿ 1ರಂದು ಮೋತಿಲಾಲ್ ನೆಹರೂ ಮಾರ್ಗದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಸಿಂಗ್ ಅವರ ಕುಟುಂಬಸ್ಥರು ‘ಅಖಂಡ ಪಥ್’ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ಜನವರಿ 3ರಂದು ಸಂಸತ್ತಿನ ಬಳಿಯಿರುವ ರಖಬ್ ಗಂಜ್ ಗುರುದ್ವಾರದ ಬಳಿ ‘ಭೋಗ್’ ಕಾರ್ಯಕ್ರಮ, ‘ಅಂತಿಮ್ ಅರ್ದಾಸ್’ ಮತ್ತು ‘ಕೀರ್ತನ್’ ನಡೆಯಲಿವೆ.

  ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಡಿ. 26ರಂದು ದೆಹಲಿಯ ಏಮ್ಸ್‌ನಲ್ಲಿ ನಿಧನ ಹೊಂದಿದ್ದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ದೆಹಲಿಯ ನಿಗಮ್ ಬೋಧ್ ಘಾಟ್‌ನಲ್ಲಿ ಡಿ. 28 ರಂದು ಅಂತ್ಯಸಂಸ್ಕಾರ ನೆರವೇರಿತ್ತು.

 

Recent Articles

spot_img

Related Stories

Share via
Copy link