ಚೆನ್ನೈ:
ಅತಿಲೋಕ ಸುಂದರಿ ಶ್ರೀದೇವಿ ಬಾಲಿವುಡ್‌ನಲ್ಲಿ ನೆಲೆ ಕಂಡುಕೊಂಡಿದ್ದರೂ, ಮೂಲತ: ದಕ್ಷಿಣ ಭಾರತದವರು. ಅದರಲ್ಲೂ ತಮಿಳುನಾಡಿನವರು. ಹಿಂದಿ ಸಿನಿಮಾಗಳಲ್ಲಿ ನಟಿಸುವುದಕ್ಕೂ ಮುನ್ನ ದಕ್ಷಿಣ ಭಾರತದಲ್ಲಿ ಸ್ಟಾರ್ ನಟಿಯಾಗಿ ಮೆರೆದಿದ್ದವರು. ಶ್ರೀದೇವಿ ಅಗಲಿದ ಬಳಿಕ ಪುತ್ರಿ ಜಾಹ್ನವಿ ಕಪೂರ್ ಅವರದ್ದೇ ಹಾದಿಯನ್ನು ಹಿಡಿದಿದ್ದಾರೆ.
ಶ್ರೀದೇವಿ ಮೂಲತ: ತಮಿಳುನಾಡಿನವರಾಗಿದ್ದರಿಂದ ಬಾಲಿವುಡ್‌ನಲ್ಲಿ ನೆಲೆಯೂರಿಸಿದ್ದರೂ, ಚೆನ್ನೈನಲ್ಲಿ ಆಸ್ತಿಯನ್ನು ಖರೀದಿ ಮಾಡಿದ್ದರು. ಇಂದಿಗೂ ಚೆನ್ನೈನ ಸಮುದ್ರ ತೀರದಲ್ಲಿ ಶ್ರೀದೇವಿಯ ಖರೀದಿ ಮಾಡಿದ್ದ ಬೃಹತ್ ಬಂಗಲೆ ಇದೆ. ಅದನ್ನು ಅವರ ಪುತ್ರಿ ಜಾಹ್ನವಿ ಕಪೂರ್ ನೋಡಿಕೊಂಡು ಹೋಗುತ್ತಿದ್ದಾರೆ.
ಸದ್ಯ ಶ್ರೀದೇವಿ ಹಾಗೂ ಜಾಹ್ನವಿ ಕಪೂರ್ ಅಭಿಮಾನಿಗಳಿಗೊಂದು ಖುಷಿ ವಿಷಯವಿದೆ. ನಾಲ್ಕು ಎಕ್ಕರೆ ವಿಸ್ತೀರ್ಣದಲ್ಲಿರೋ ಈ ಬಂಗಲೆಯಲ್ಲಿ ಆಯ್ದ ಕೆಲವೇ ಮಂದಿಗೆ ಉಳಿದುಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಇದೇ ತಿಂಗಳು ಅಂದರೆ, ಮೇ 12ರಿಂದ ಚೆನ್ನೈ ಬಂಗಲೆಯಲ್ಲಿ ಉಳಿದುಕೊಳ್ಳುವುದಕ್ಕೆ ಬುಕಿಂಗ್ ಓಪನ್ ಆಗಲಿದೆ.
ಹೌದು, ಶ್ರೀದೇವಿ ಖರೀದಿಸಿದ್ದ ಚೆನ್ನೈನ ಬಂಗಲೆಯಲ್ಲಿ ನೀವು ಉಳಿದುಕೊಳ್ಳಬಹುದು. ಸ್ವತ: ಜಾಹ್ನವಿ ಕಪೂರ್ ಈ ಬಂಗಲೆಯಲ್ಲಿ ಉಳಿದುಕೊಳ್ಳಲಿರುವ ಅತಿಥಿಗಳನ್ನು ಆಯ್ಕೆ ಮಾಡುತ್ತಾರೆ. ಬಳಿಕ ಅದೇ ಅತಿಥಿಗಳನ್ನು ಅವರೇ ಸ್ವಾಗತ ಮಾಡುತ್ತಾರೆ. ಈ ಇಬ್ಬರು ಅದೃಷ್ಟಶಾಲಿಗಳಿಗೆ ಒಂದು ಬೆಡ್‌ರೂಮ್ ಹಾಗೂ ಬಾತ್‌ರೂಮ್ ಇರುವ ರೂಮ್ ಅನ್ನು ನೀಡಲಾಗುತ್ತೆ. ಹಾಗೇ ಅವರನ್ನು ಶ್ರೀದೇವಿ ಹಾಗೂ ಜಾಹ್ನವಿ ಕಪೂರ್ ಇಷ್ಟು ಪಡುತ್ತಿದ್ದಂತಹ ಊಟವನ್ನು ನೀಡಲಾಗುತ್ತೆ.
ಜಾಹ್ನವಿ ಕಪೂರ್ ಮನೆಯಲ್ಲಿ ಉಳಿದುಕೊಳ್ಳುವವರಿಗೆ ದಕ್ಷಿಣ ಭಾರತದ ಫೇವರಿಟ್ ಊಟವನ್ನು ಬಡಿಸಲಾಗುತ್ತೆ. ಇದರೊಂದಿಗೆ ಶ್ರೀದೇವಿ ಹೇಳಿಕೊಟ್ಟ ಬ್ಯೂಟಿ ಸೀಕ್ರೆಟ್ ಅನ್ನು ಜಾಹ್ನವಿ ಮನೆಗೆ ಬಂದ ಅತಿಥಿಗಳೊಂದಿಗೆ ಹಂಚಿಕೊಳ್ಳಲಿದ್ದಾರಂತೆ. ಇಷ್ಟೇ ಅಲ್ಲದೆ, ಜಾಹ್ನವಿ ಇಷ್ಟ ಪಡುವ ಗೀ ಪೋಡಿ ರೈಸ್, ಆಂಧ್ರ ಬಿರಿಯಾನಿ, ಪೆಸರಟ್ಟು ದೋಸೆ ಹಾಗೂ ಪಾಲ್ಕೋವಾವನ್ನು ಅತಿಥಿಗಳಿಗೆ ನೀಡಿಲಾಗುತ್ತೆ.
ಅಂದ್ಹಾಗೆ, ಜಾಹ್ನವಿ ಕಪೂರ್ ಚೆನ್ನೈ ಬಂಗಲೆಯನ್ನು ಏರ್‌ಬಿಎನ್‌ಬಿಗೆ ಅಟ್ಯಾಚ್ ಮಾಡಿದ್ದಾರೆ. ಮೇ 12ರಿಂದ ಬುಕಿಂಗ್ ಓಪನ್ ಆಗಲಿದ್ದು, ಕೆಲವೇ ಕೆಲವು ಮಂದಿಗೆ ಈ ಬಂಗಲೆಯಲ್ಲಿ ಉಳಿದುಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಇದೇ ಸಂದರ್ಭದಲ್ಲಿ “ಇಲ್ಲಿ ನನ್ನ ಬಾಲ್ಯದ ಅತ್ಯಮೂಲ್ಯ ನೆನಪುಗಳು ಇವೆ. ಬೇಸಿಗೆಯನ್ನು ಚೆನ್ನೈನ ಕರಾವಳಿಯಲ್ಲಿ ಕಳೆಯುತ್ತಿದ್ದೆವು. ಈ ಕಾರಣಕ್ಕಾಗಿ, ಇದೇ ಮೊದಲ ಬಾರಿಗೆ ಕೆಲವು ಅತಿಥಿಗಳಿಗೆ ನಮ್ಮ ಮನೆಯಲ್ಲಿ ಉಳಿದುಕೊಂಡು ಹಾಗೆ ಕಪೂರ್ ಫ್ಯಾಮಿಲಿಯ ಅನುಭವ ಮಾಡಿಕೊಡಲು ವ್ಯವಸ್ಥೆ ಮಾಡಲಾಗಿದೆ.” ಎಂದು ಜಾಹ್ನವಿ ಕಪೂರ್ ಏರ್‌ಬಿಎನ್‌ಬಿಗೆ ಹೇಳಿದ್ದಾರೆ.
ಏರ್‌ಬಿಎನ್‌ಬಿ ಐಕಾನ್ಸ್ ಅನ್ನೋ ಕ್ಯಾಟಗರಿಯಲ್ಲಿ ಸುಮಾರು 11 ಮಂದಿ ಸೆಲೆಬ್ರಿಟಿಗಳ ಪ್ರಾಪರ್ಟಿಗಳನ್ನು ಲಿಸ್ಟ್ ಮಾಡಿದೆ. ಇದರಲ್ಲಿ ಹಾಲಿವುಡ್ ಸೆಲೆಬ್ರಿಟಿಗಳೂ ಸೇರಿದ್ದು, ಅದರಲ್ಲಿ ಜಾಹ್ನವಿ ಕಪೂರ್ ಬಂಗಲೆ ಕೂಡ ಸೇರಿದೆ. ಸದ್ಯ ಈ ಸುದ್ದಿ ಜಾಹ್ನವಿ ಕಪೂರ್ ಅಭಿಮಾನಿಗಳ ಕಿವಿಗೆ ಬಿದ್ದಿದ್ದು, ಶ್ರೀದೇವಿ ಹಾಗೂ ಜಾಹ್ನವಿ ಕಪೂರ್ ಉಳಿದಿದ್ದ ಬಂಗಲೆಯಲ್ಲಿ ಉಳಿಯುವ ಅವಕಾಶ ಮಾಡಿಕೊಡಲಾಗುತ್ತಿದೆ.