ನವದೆಹಲಿ:
ಸ್ವಾತಂತ್ರ್ಯೋತ್ಸವ ದಿನದಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬದಲಾಗಿ ಸಚಿವೆ ಅತಿಶಿ ಅವರು ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ ಎಂದು ದೆಹಲಿ ಸಚಿವ ಗೋಪಾಲ್ ರೈ ಅವರು ಸೋಮವಾರ ಹೇಳಿದ್ದಾರೆ. ಇದು ಲೆಫ್ಟಿನೆಂಟ್ ಗವರ್ನರ್ ಕಚೇರಿ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ಹೊಸ ಸಂಘರ್ಷಕ್ಕೆ ದಾರಿಮಾಡಿಕೊಡಬಹುದು.
ಇಂದು ತಿಹಾರ್ ಜೈಲಿನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾದ ನಂತರ ಗೋಪಾಲ್ ರೈ ಅವರು, ಸಚಿವೆ ಅತಿಶಿ ಅವರು ರಾಷ್ಟ್ರಧ್ವಜಾರೋಹಣ ಮಾಡುವುದಕ್ಕೆ ವ್ಯವಸ್ಥೆ ಮಾಡುವಂತೆ ಸಾಮಾನ್ಯ ಆಡಳಿತ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.
ಸಾಮಾನ್ಯ ಆಡಳಿತ ಸಚಿವರೂ ಆಗಿರುವ ರೈ, “ನಾನು ಇಂದು ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದೇನೆ. 2024 ರ ಆಗಸ್ಟ್ 15 ರಂದು ಛತ್ರಸಾಲ್ ಕ್ರೀಡಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಸಚಿವೆ ಅತಿಶಿ ಅವರು ಧ್ವಜಾರೋಹಣ ಮಾಡಬೇಕು ಎಂದು ಅವರು ಬಯಸಿದ್ದಾರೆ. ಅದಕ್ಕೆ ಅನುಗುಣವಾಗಿ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕು ಎಂದು ಸೂಚಿಸಿದ್ದಾರೆ. ಈ ಸಂಬಂಧ ಕಳೆದ ವಾರ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಬರೆದ ಪತ್ರದಲ್ಲಿ, ಕೇಜ್ರಿವಾಲ್ ಅವರು ತಮ್ಮ ಸ್ಥಾನದಲ್ಲಿ ದೆಹಲಿ ಸರ್ಕಾರದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕ್ಯಾಬಿನೆಟ್ ಸಚಿವೆ ಅತಿಶಿ ಅವರು ರಾಷ್ಟ್ರಧ್ವಜಾರೋಹಣ ಮಾಡುತ್ತಾರೆ ಎಂದು ತಿಳಿಸಿರುವುದಾಗಿ ಹೇಳಿದ್ದಾರೆ.ಆದರೆ, ಮುಖ್ಯಮಂತ್ರಿಯಿಂದ ಯಾವುದೇ ಪತ್ರವನ್ನು ಸ್ವೀಕರಿಸಿಲ್ಲ ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿ ಸ್ಪಷ್ಟನೆ ನೀಡಿದೆ.