ಬೆಳಗಾವಿ:
ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಗೆ ಸೇರಿದ ಪಕ್ಷದ ಕಾರ್ಯಕರ್ತರೊಬ್ಬರ ಮನೆ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿ ಅವರ ಕುಟುಂಬದ ನಾಲ್ವರಿಗೆ ಗಾಯಗೊಳಿಸಿದ ಘಟನೆ ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆ ಸಮೀಪದ ಭಾರತ್ ನಗರದಲ್ಲಿ ಭಾನುವಾರ ನಡೆದಿದೆ. ಗಾಯಾಳುಗಳನ್ನು ಸುಂದರ್ ಶಾಂತಾರಾಮ್ ಕೆಲ್ವೇಕರ್ (32), ಸಚಿನ್ ಶಾಂತಾರಾಮ್ ಕೆಲ್ವೇಕರ್ (36), ನಿತಿನ್ ಶಾಂತಾರಾಮ್ ಕೆಲ್ವೇಕರ್ (34) ಮತ್ತು ಅವರ ತಾಯಿ ಲಕ್ಷ್ಮೀ ಶಾಂತಾರಾಮ್ ಕೆಲ್ವೇಕರ್ (56) ಎಂದು ಗುರುತಿಸಲಾಗಿದೆ. ಎಲ್ಲ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, 25ಕ್ಕೂ ಹೆಚ್ಚು ಜನರಿದ್ದ ದುಷ್ಕರ್ಮಿಗಳ ಗುಂಪು ಸಚಿನ್ ಕೆಲ್ವೇಕರ್ ಅವರ ಮನೆ ಮೇಲೆ ದಾಳಿ ಮಾಡಿದೆ. ಅವರೆಲ್ಲರೂ ಕಬ್ಬಿಣದ ಸರಳುಗಳು ಮತ್ತು ಇತರ ಹರಿತವಾದ ಆಯುಧಗಳಿಂದ ಶಸ್ತ್ರಸಜ್ಜಿತರಾಗಿದ್ದರು. ಕೆಲವರು ಕೆಲ್ವೇಕರ್ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆಸಿ ಕಿಟಕಿ ಗಾಜುಗಳಿಗೆ ಹಾನಿ ಮಾಡಿದರು. ದಾಳಿಯಲ್ಲಿ ಕೆಲ್ವೇಕರ್ ಕುಟುಂಬದ ನಾಲ್ವರು ಗಾಯಗೊಂಡಿದ್ದಾರೆ.
ಕೆಲ್ವೇಕರ್ ಮನೆ ಮೇಲೆ ದಾಳಿಯ ಸುದ್ದಿ ತಿಳಿದ ತಕ್ಷಣ ಎಂಇಎಸ್ ಮುಖಂಡರು ಸ್ಥಳಕ್ಕೆ ಧಾವಿಸಿದರು. ಶಹಾಪುರ ಪೊಲೀಸ್ ಠಾಣೆಯ ಸಮೀಪವೇ ಕೆಲ್ವೇಕರ್ ಅವರ ಮನೆ ಇರುವುದರಿಂದ ದಾಳಿಯನ್ನು ತಡೆಯುವಲ್ಲಿ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದರು.