ಹಿರಿಯೂರು
ರಾಷ್ಟ್ರೀಯ ಹೆದ್ದಾರಿ ನಾಲ್ಕರ ರಸ್ತೆಯಲ್ಲಿ ಎನ್‌ಹೆಚ್‌ಎಐ ಅಧಿಕಾರಿಗಳು ರಸ್ತೆಯಲ್ಲಿ ಹಂಪ್ಸ್ ಹಾಕಿ ಯಡವಟ್ಟು ಮಾಡಿದ್ದು, ಇದರಿಂದ ಒಂದೇ ದಿನ ನಾಲ್ಕೈದು ಅಪಘಾತ ಸಂಭವಿಸಿರುವ ಘಟನೆ ನಡೆದಿದೆ. ಇನ್ನು ನಿನ್ನೆ (ಏಪ್ರಿಲ್ 18) ರಾತ್ರಿ ವೇಳೆಗೆ ವೇಗವಾಗಿ ಬಂದ ಆಟೋ ಪಲ್ಟಿಯಾದ ಘಟನೆ ಚಿತ್ರದುರ್ಗದ ಬಳಿ ನಡೆದಿದೆ.
ಚಿತ್ರದುರ್ಗ ಉಪಾಧ್ಯ ಹೋಟೆಲ್ ಮುಂಭಾಗದ ರಸ್ತೆಯಲ್ಲಿ ಹಂಪ್ಸ್ ಹಾಕಿದ್ದು, ಈ ಹಿನ್ನೆಲೆ ಮೂರ್ನಾಲ್ಕು ಜನರನ್ನು ಕೂರಿಸಿಕೊಂಡು ವೇಗವಾಗಿ ಬಂದ ಆಟೋವೊಂದು ಪಲ್ಟಿಯಾಗಿದೆ. ಇನ್ನು ಆಟೋದಲ್ಲಿ ಕೊಲಿಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಹಂಪ್ಸ್ ಇದೆ ನಿಧಾನವಾಗಿ ಹೋಗಿ ಎಂದು ಚಾಲಕನಿಗೆ ಸೂಚನೆ ನೀಡಿದ್ದಾರೆ.
ಆದರೆ ಕೂಡ ಆಟೋ ಚಾಲಕ ಕೂಲಿ ಕಾರ್ಮಿಕನ ಮಾತನ್ನೂ ಪರಿಗಣಿಸದೇ ಆಟೋವನ್ನು ಕಂಟ್ರೋಲ್ ಮಾಡದೇ ಹಂಪ್ಸ್ ಮೇಲೆ ಜೋರಾಗಿ ಹತ್ತಿಸಿದ್ದು, ಪರಿಣಾಮವಾಗಿ ಆಟೋ ಪಲ್ಟಿಯಾಗಿದೆ. ಈ ವೇಳೆ ಆಟೋದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಟೋ ಸಂಪೂರ್ಣ ಜಖಂ ಗೊಂಡಿದೆ ಎಂದು ತಿಳಿದುಬಂದಿದೆ.
ಬೆಂಗಳೂರು-ಪುಣೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಬೆಂಗಳೂರು, ತುಮಕೂರು, ಶಿರಾ, ಹಿರಿಯೂರು ಚಿತ್ರದುರ್ಗ, ದಾವಣಗೆರೆ, ಹರಿಹರ ಹಾವೇರಿ ಗದಗ ಮೂಲಕ ಪುಣೆ ತಲುಪಲಿದೆ. ಇಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಹೈವೇ ರಸ್ತೆಯಾಗಿರುವುದರಿಂದ ವಾಹನಗಳು ಅತೀ ವೇಗವಾಗಿ ಸಂಚಾರ ಮಾಡುತ್ತವೆ.
ಆದರೆ ಇಷ್ಟು ದಿನ ಇಲ್ಲದ ಹಂಪ್ಸ್ ಈಗ ಯಾಕೆ ಹಳವಡಿಸಿದ್ದಾರೆ ಏನು ಎಂಬುದು ಗೊತ್ತಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ಜನಸಂದಣಿ ಇಲ್ಲದ ಕಡೆ ಹಂಪ್ಸ್ ಹಾಕಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಹಂಪ್ಸ್ ತೆರವುಗೊಳಿಸುವಂತೆ ವಾಹನ ಸವಾರರು ಆಗ್ರಹಿಸಿದ್ದಾರೆ. ಇನ್ನು ಆಟೋ ಅಪಘಾತ ಘಟನೆ ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.