‘ಅವತಾರ್ 2’ ಈ ಬಾರಿ ನೀರಿನ ಮೇಲೆ ದಾಳಿ, ನೀರಿನಲ್ಲೇ ಸಾಹಸ!

‘ಅವತಾರ್ 2 :

ಹಾಲಿವುಡ್‌ನ ಅತಿ ಜನಪ್ರಿಯ ಸಿನಿಮಾಗಳಲ್ಲೊಂದಾದ ‘ಅವತಾರ್’ ಇದೀಗ ಮತ್ತೆ ಬಂದಿದೆ. 2009 ರಲ್ಲಿ ಬಿಡುಗಡೆ ಆಗಿದ್ದ ‘ಅವತಾರ್’ ಸಿನಿಮಾದ ಮುಂದುವರೆದ ಭಾಗ ಬಿಡುಗಡೆಗೆ ತಯಾರಾಗಿದ್ದು, ಸಿನಿಮಾದ ಟೀಸರ್ ಇದೀಗ ಬಿಡುಗಡೆ ಆಗಿದೆ.

‘ಅವತಾರ್ 2’ ಸಿನಿಮಾಕ್ಕೆ ‘ದಿ ವೇ ಆಫ್ ವಾಟರ್’ ಎಂದು ಅಡಿನಾಮ ನೀಡಲಾಗಿದೆ, ಈ ಬಾರಿ ‘ಅವತಾರ್ 2’ ನಲ್ಲಿ ಸಮುದ್ರದಾಳದ ಅದ್ಭುತ ಲೋಕವನ್ನು ಪ್ರದರ್ಶಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

2009ರ ಅವತಾರ್‌ನಲ್ಲಿ ಹತ್ತು ಅಡಿ ಎತ್ತರದ ನೀಲಿ ಬಣ್ಣದ, ದೈತ್ಯ ದೇಹಿ ನಾವಿ ಜನರು ವಾಸಿಸುತ್ತಿದ್ದ ಪ್ಯಾಂಡೊರಾ ಎನ್ನುವ ಅದ್ಭುತ ಲೋಕದ ಪರಿಚಯ ಮಾಡಿಸಲಾಗಿತ್ತು. ‘ಅವತಾರ್ 2’ ನಲ್ಲಿ ನಾವಿ ಜನಗಳು ಅದೇ ಪ್ಯಾಂಡೋರಾನಲ್ಲಿ ವಾಸಿಸುತ್ತಿದ್ದಾರೆ. ಆದರೆ ಈ ಬಾರಿ ಅವರ ನೀರಿನ ಆಕರದ ಮೇಲೆ ದುಷ್ಟರ ಕಣ್ಣು ಬಿದ್ದಿದೆ.

                     ನೀರಿನಾಳದಲ್ಲಿ ಅದ್ಭುತ ದೃಶ್ಯಗಳಿವೆ

 ಇದೀಗ ಬಿಡುಗಡೆ ಆಗಿರುವ ‘ಅವತಾರ್ 2’ ಟೀಸರ್‌ನಲ್ಲಿ ನೀರಿನಲ್ಲಿ ಹಲವು ಅದ್ಭುತ ದೃಶ್ಯಗಳಿವೆ. ಅವತಾರ್ ಗುಂಪಿನ ನಾಯಕ ಜಾಕ್ ಸೂಲಿ ದೈತ್ಯ ತಿಮಿಂಗಲವೊಂದರ ರೆಕ್ಕೆ ಹಿಡಿದುಕೊಂಡು ಈಜುವ ದೃಶ್ಯ ಮನ ಮೋಹಕವಾಗಿದೆ. ಅದರ ಜೊತೆಗೆ ನೀರಿನಲ್ಲಿ ನಡೆವ ಕೆಲವು ಸಾಹಸ ದೃಶ್ಯಗಳು ಸಹ ಅದ್ಭುತವಾಗಿವೆ.

    ‘ಟೈಟ್ಯಾನಿಕ್’ ನಿರ್ದೇಶಿಸಿದ್ದ ಜೇಮ್ಸ್ ಕ್ಯಾಮರೂನ್

ವಿಶ್ವದ ಅತಿ ದೊಡ್ಡ ಬಜೆಟ್‌ನ ಸಿನಿಮಾ ಎಂದೇ ಕರೆಸಿಕೊಳ್ಳುತ್ತಿರುವ ‘ಅವತಾರ್ 2’ ಇದೇ ವರ್ಷ ಡಿಸೆಂಬರ್ 16 ರಂದು ಬಿಡುಗಡೆ ಆಗಲಿದೆ. ‘ಅವತಾರ್ 2’ ಸಿನಿಮಾವನ್ನು ‘ಟೈಟ್ಯಾನಿಕ್’ ಸಿನಿಮಾದ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದಾರೆ. ಇವರ ಜೊತೆಗೆ ‘ಟೈಟಾನಿಕ್’ ಸಿನಿಮಾಕ್ಕೆ ಬಂಡವಾಳ ಹೂಡಿದ್ದ ಜೇಮ್ಸ್ ಲಾಂಡೌ ಸಹ ಇದ್ದಾರೆ. ಸಿನಿಮಾವನ್ನು ಲೈಟ್‌ಸ್ಟ್ರಾಮ್ ನಿರ್ಮಾಣ ಸಂಸ್ಥೆಯ ವತಿಯಿಂದ ನಿರ್ಮಾಣ ಮಾಡಲಾಗುತ್ತಿದೆ. ವಿತರಣೆ ಮಾಡಲಿರುವುದು 20 ಸೆಂಚುರಿ ಫಾಕ್ಸ್.

              ‘ಅವತಾರ್’ ಸರಣಿಯ ಐದು ಸಿನಿಮಾಗಳು ತೆರೆಗೆ

‘ಅವತಾರ್ 2’ ಹಾಗೂ ‘ಅವತಾರ್ 3’ ಸಿನಿಮಾ ಏಕಕಾಲದಲ್ಲಿ ಚಿತ್ರೀಕರಣ ಪ್ರಾರಂಭಿಸಿದವು. 2017 ರಲ್ಲಿ ಪ್ರಾರಂಭವಾದ ಚಿತ್ರೀಕರಣ ಇದೀಗ ಐದು ವರ್ಷಗಳ ಬಳಿಕ ಬಹುತೇಕ ಪೂರ್ಣವಾಗಿದ್ದು ಕೆಲವು ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ಬಳಿಕ ಮೊದಲಿಗೆ ‘ಅವತಾರ್ 2’ ಸಿನಿಮಾ ಇದೇ ವರ್ಷದ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ನಂತರ 2024ರ ಡಿಸೆಂಬರ್ ವೇಳೆಗೆ ‘ಅವತಾರ್ 3’ ಸಿನಿಮಾ ಬಿಡುಗಡೆ ಆಗಲಿದೆ. ಆ ಬಳಿಕ ಅವತಾರ್ ಸಿನಿಮಾ ಸರಣಿಯ ನಾಲ್ಕನೇ ಸಿನಿಮಾ ‘ಅವತಾರ್: ಟಲ್ಕನ್ ರೈಡರ್’ ಸಿನಿಮಾ 2026 ಕ್ಕೆ ಬಿಡುಗಡೆ ಆಗಲಿದೆ. ಬಳಿಕ 2028 ಕ್ಕೆ ‘ಅವತಾರ್ 5’ ಬಿಡುಗಡೆ ಆಗಲಿದೆ. ಈ ಎಲ್ಲ ಸಿನಿಮಾಗಳನ್ನು ಜೇಮ್ಸ್ ಕ್ಯಾಮರನ್ ಅವರೇ ನಿರ್ದೇಶಿಸಲಿದ್ದಾರೆ.

              ‘ಅವತಾರ್’ ಸಿನಿಮಾಕ್ಕೆ ಸಮರ್ಪಿಸಿಕೊಂಡಿರುವ ಜೇಮ್ಸ್

ಜೇಮ್ಸ್ ಕ್ಯಾಮೆರಾನ್ ವಿಶ್ವದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. 1982 ರಲ್ಲಿ ‘ಫಿರ್ಹಾನಾ 2’ ಸಿನಿಮಾ ಮೂಲಕ ನಿರ್ದೇಶನ ಆರಂಭಿಸಿದ ಜೇಮ್ಸ್, ಆ ಬಳಿಕ ಆಲ್‌ ಟೈಮ್ ಬ್ಲಾಕ್‌ ಬಸ್ಟರ್ ‘ಟರ್ಮಿನೇಟರ್’, ‘ಟರ್ಮಿನೇಟರ್ 2’ ಸಿನಿಮಾಗಳನ್ನು ನಿರ್ದೇಶಿಸಿದರು.

ಅದರ ಜೊತೆ ‘ಏಲಿಯನ್ಸ್’, ‘ದಿ ಅಬಿಸ್’, ‘ಟ್ರು ಲೈಸ್’, ‘ಗೋಸ್ಟ್ಸ್ ಆಫ್‌ ದಿ ಅಬೀಸ್’, ‘ಏಲಿಯನ್ಸ್ ಆಫ್‌ ದಿ ಡೀಪ್’, ‘ಅವತಾರ್’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. 2009 ರಲ್ಲಿ ಬಿಡುಗಡೆ ಆದ ‘ಅವತಾರ್’ ಸಿನಿಮಾದ ಬಳಿಕ ಇನ್ಯಾವ ಸಿನಿಮಾವನ್ನು ಜೇಮ್ಸ್ ನಿರ್ದೇಶಿಸಿಲ್ಲ. ತಮ್ಮನ್ನು ಸಂಪೂರ್ಣವಾಗಿ ‘ಅವತಾರ್’ ಸಿನಿಮಾ ಸರಣಿಗೆ ಸಮರ್ಪಿಸಿಕೊಂಡಿದ್ದಾರೆ ಜೇಮ್ಸ್.

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap