ನವದೆಹಲಿ:
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಯನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ . ಒಟ್ಟು 9 ಉಗ್ರರ ನೆಲೆಗಳನ್ನು ಗುರಿಯಾಗಿಸಿ ಬರೋಬ್ಬರಿ 24 ಕ್ಷಿಪಣಿ ದಾಳಿ ನಡೆಸಲಾಗಿತ್ತು. ಇನ್ನು ಈ ದಾಳಿ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಅಪರಾಧಿಗಳನ್ನು ನ್ಯಾಯಾಂಗ ಕಟಕಟೆಗೆ ಕರೆತರುವುದು ಅತ್ಯವಶ್ಯಕ. ಕಾಶ್ಮೀರದಲ್ಲಿ ಅಬಿವೃದ್ಧಿ ತಡೆಯುವುದೇ ಪಾಕಿಸ್ತಾನದ ಗುರಿ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವುದು ನಮ್ಮ ಕರ್ತವ್ಯ. ಭಾರತಕ್ಕೆ ಮತ್ತೆ ಉಗ್ರರು ನುಸುಳದಂತೆ ತಡೆಯವ ನಿಟ್ಟಿನಲ್ಲಿ ಈ ದಾಳಿ ನಡೆಸಲಾಗಿದೆ. ಇದೊಂದು ನಮ್ಮ ಜವಾಬ್ದಾರಿಯುತ ದಾಳಿ ಎಂದಿದ್ದಾರೆ.
ಪಾಕಿಸ್ತಾನ ಉಗ್ರರಿಗೆ ಸ್ವರ್ಗವಾಗಿದೆ. ಪಾಕಿಸ್ತಾನ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಸಾಜಿದ್ ಮಿತ್ ಕೇಸ್ ಇದಕ್ಕೊಂದು ಉತ್ತಮ ಉದಾಹರಣೆ. ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಇಂದು ಬೆಳ್ಳ ಬೆಳಗ್ಗೆ ಭಾರತ ದಾಳಿ ನಡೆಸಿದೆ. ಉಗ್ರವಾದವನ್ನು ಸಂಪೂರ್ಣವಾಗಿ ಸರ್ವನಾಶ ಮಾಡುವುದೊಂದೇ ಭಾರತದ ಗುರಿ ಎಂದರು.
ಇನ್ನು ಇದೇ ವೇಳೆ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ಹಿರಿಯ ಮಹಿಳಾ ಸೇನಾಧಿಕಾರಿ ಕರ್ನಲ್ ಸೋಫಿಯಾ ಖರೇಷಿ ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ. ಪಹಲ್ಗಾಮ್‌ನಲ್ಲಿ ಬಲಿಯಾದವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲೇ ಇಂದು ಪಾಕಿಸ್ತಾನ ಮತ್ತು ಪಿಒಕೆಯಲ್ಲಿರುವ 9 ಉಗ್ರ ನೆಲೆ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಲಾಗಿದೆ. ಬೆಳಗ್ಗೆ 1:04 ಮತ್ತು 1:30ನಡುವೆ ಈ ದಾಳಿ ನಡೆದಿದೆ. ಈ ದಾಳಿಯಲ್ಲಿ ಯಾವುದೇ ನಾಗರಿಕರನ್ನು ಗುರಿಯಾಗಿಸಿಲ್ಲ. ಯಾವುದೇ ವಸತಿ ಪ್ರದೇಶಗಳ ಮೇಲೆ ದಾಳಿ ನಡೆದಿಲ್ಲ. ಗುಪ್ತಚರ ಇಲಾಖೆಯ ಸ್ಪಷ್ಟ ಮಾಹಿತಿ ಮೇರೆ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಎಲ್‌ಇಟಿ ಪ್ರಧಾನ ಕಚೇರಿಯನ್ನೂ ಧ್ವಂಸಗೊಳಿಸಲಾಗಿದೆ. ಇನ್ನು ದಾಳಿಯಲ್ಲಿ 2008ರ ಮುಂಬೈ ದಾಳಿಯ ಪ್ರಮುಖ ರೂವಾರಿ ಡೇವಿಡ್ ಹೆಡ್ಲಿ ಮತ್ತು ಅಜ್ಮಲ್ ಖಸಬ್ ತರಬೇತಿ ಪಡೆದಿದ್ದ ಉಗ್ರರ ನೆಲೆ ಪುಡಿಗಟ್ಟಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
