ವಿರೋಧದ ನಡುವೇ ಸಚಿವನಾಗಿ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಪ್ರಮಾಣ ವಚನ ಸ್ವೀಕಾರ

ಹೈದರಾಬಾದ್‌: 

   ಮಾಜಿ ಭಾರತೀಯ ಕ್ರಿಕೆಟ್ ನಾಯಕ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಮೊಹಮ್ಮದ್ ಅಜರುದ್ದೀನ್   ತೆಲಂಗಾಣ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಜಿಷ್ಣು ದೇವ್ ವರ್ಮಾ ಇಂದು ಬೆಳಿಗ್ಗೆ ರಾಜಭವನದಲ್ಲಿ ಮಾಜಿ ಕ್ರಿಕೆಟಿಗರಿಗೆ ಪ್ರಮಾಣ ವಚನ ಬೋಧಿಸಿದರು. 16ನೇ ಸದಸ್ಯನಾಗಿ ರೇವಂತ್ ರೆಡ್ಡಿಯವರ ಸಚಿವ ಸಂಪುಟಕ್ಕೆ ಅವರು ಸೇರ್ಪಡೆಗೊಂಡರು.

    ಮಧ್ಯಾಹ್ನ 12.30 ರ ಸುಮಾರಿಗೆ ತೆಲಂಗಾಣದ ರಾಜಭವನದಲ್ಲಿ ರಾಜ್ಯಪಾಲ ಜಿಷ್ಣು ದೇವ್ ವರ್ಮಾ ಅವರು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರಿಗೆ ಪ್ರಮಾಣವಚನ ಬೋಧನೆ ಮಾಡಿದರು. ಈ ವೇಳೆ ಅಲ್ಲಿ ಬಹುತೇಕ ಎಲ್ಲಾ ಸಚಿವರು, ಅಜರುದ್ದೀನ್ ಅವರ ಪುತ್ರ ಮತ್ತು ಪುತ್ರಿ, ಸಂಸದರು, ವಿಧಾನ ಪರಿಷತ್ ಸದಸ್ಯರು, ಶಾಸಕರು, ಮುಖ್ಯ ಕಾರ್ಯದರ್ಶಿ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

    ಅಜರುದ್ದೀನ್ ಅವರು ಇಂಗ್ಲೀಷ್ ಭಾಷೆಯಲ್ಲಿ ಅಲ್ಲಾಹ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿ ಕೊನೆಗೆ ಜೈ ಹಿಂದ್ ಜೈ ತೆಲಂಗಾಣ ಎಂದು ಹೇಳಿದರು. ಮುಖ್ಯಮಂತ್ರಿ ರೇವಂತ್ ರೆಡ್ಡಿಯವರು ಅಜರುದ್ದೀನ್ ಅವರಿಗೆ ಇಂದು ಅಥವಾ ನಾಳೆ ಖಾತೆ ಘೋಷಣೆ ಮಾಡಲಿದ್ದಾರೆ. ಅಜರುದ್ದೀನ್ ಅವರು ಜನರಿಂದ ಇನ್ನೂ ಶಾಸಕರಾಗಿ ಆಯ್ಕೆಯಾಗಿಲ್ಲ, ಅವರು ವಿಧಾನ ಪರಿಸತ್ ಸದಸ್ಯರು ಅಲ್ಲ, ಆದರೆ ನವಂಬರ್ 11ರಂದು ಇಲ್ಲಿನ ಜ್ಯುಬಿಲಿ ಹಿಲ್‌ ಕ್ಷೇತ್ರಕ್ಕೆ ವಿಧಾನಸಭಾ ಚುನಾವಣೆ ನಡೆಯಲಿದೆ. ಇಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಬಹಳಷ್ಟಿದ್ದು, ಈ ಕ್ಷೇತ್ರದಲ್ಲಿ ಅವರು ಚುನಾವಣೆಗೆ ನಿಲ್ಲಲಿದ್ದಾರೆ.

    ಹೀಗಾಗಿ ಅಜರುದ್ದೀನ್ ಅವರು ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸದಿಂದ ರೇವಂತ್ ರೆಡ್ಡಿಯವರು ಮೊಹಮ್ಮದ್ ಅಜರುದ್ದೀನ್ ಅವರು ಶಾಸಕರಾಗಿ ಆಯ್ಕೆಯಾಗುವ ಮೊದಲೇ ಸಚಿವ ಸ್ಥಾನ ನೀಡಿದ್ದಾರೆ. ಜ್ಯುಬಿಲಿ ಹಿಲ್ ಕ್ಷೇತ್ರದಲ್ಲಿ ಶೇ.25ರಷ್ಟು ಮುಸ್ಲಿಂ ಮತದಾರರಿದ್ದಾರೆ.ತೆಲಂಗಾಣ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಪಡೆದ ಮುಸ್ಲಿಂ ಸಮುದಾಯದ ಏಕೈಕ ಸದಸ್ಯ ಎನಿಸಿದ್ದಾರೆ. ಸೇರ್ಪಡೆಯ ಸಮಯವನ್ನು ಆಕ್ಷೇಪಿಸಿ, ಬಿಜೆಪಿ ಮುಖ್ಯ ಚುನಾವಣಾ ಅಧಿಕಾರಿಗೆ (ಸಿಇಒ) ಪತ್ರ ಬರೆದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿತ್ತು. ಇತ್ತೀಚೆಗೆ ಅದೇ ಸ್ಥಾನದಿಂದ ಟಿಕೆಟ್ ಪಡೆದಿದ್ದ ಸಚಿವರನ್ನು ಸೇರಿಸಿಕೊಳ್ಳುವುದು ಮತದಾರರ ಮೇಲೆ ಪ್ರಭಾವ ಬೀರಲು ಅಧಿಕೃತ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಂತೆ ಎಂದು ಬಿಜೆಪಿ ವಕ್ತಾರರು ವಾದಿಸಿದ್ದರು. ಆದರೆ ಇದನ್ನು ಲೆಕ್ಕಿಸದೆ ಮೊಹಮ್ಮದ್ ಅಜರುದ್ದೀನ್ಗೆ ಸಚಿವ ಸ್ಥಾನ ನೀಡಲಾಗಿದೆ. 

    ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಆದರೆ, ಅಜರುದ್ದೀನ್ ಅವರು ತಮ್ಮ ನೇಮಕವನ್ನು ರಾಜಕೀಯಕ್ಕಿಂತ ಪಕ್ಷದ ಮೇಲಿನ ನಂಬಿಕೆ ಮತ್ತು ಸೇವಾ ಮನೋಭಾವದೊಂದಿಗೆ ಜೋಡಿಸಿದ್ದಾರೆ. ಅವರ ಅನುಭವ ಮತ್ತು ಕ್ರಿಕೆಟ್ ಲೋಕದಲ್ಲಿನ ಜನಪ್ರಿಯತೆ, ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಸಹಾಯ ಮಾಡಬಹುದೆಂದು ಪಕ್ಷದ ನಾಯಕರು ಆಶಿಸಿದ್ದಾರೆ.

Recent Articles

spot_img

Related Stories

Share via
Copy link