ಬೆಂಗಳೂರು
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಹಗರಣದಲ್ಲಿ ಬಂಧಿನಕ್ಕೊಳಗಾಗಿದ್ದ ಮಾಜಿ ಸಚಿವ ಬಿ.ನಾಗೇಂದ್ರಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ, ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ. 2 ಲಕ್ಷದ ಬಾಂಡ್, ಇಬ್ಬರ ಶ್ಯೂರಿಟಿ ನೀಡಲು ಸೂಚನೆ ನೀಡಲಾಗಿದೆ.
ವಾಲ್ಮೀಕಿ ನಿಗಮ ಹಗರಣದಲ್ಲಿ ನಾಗೇಂದ್ರ ತಲೆದಂಡವಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಜಾರಿ ನಿರ್ದೇಶಾನಾಲಯದ ಅಧಿಕಾರಿಗಳು ಇತ್ತೀಚೆಗೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. 187 ಕೋಟಿ ರೂಪಾಯಿ ಹಗರಣ ಸಂಬಂಧ 4ಸಾವಿರದ 970 ಪುಟಗಳ ಚಾರ್ಜ್‌ಶೀಟ್ ಜೊತೆಗೆ 144 ಪುಟಗಳ ದೂರು ಸಲ್ಲಿಸಿದ್ದರು. ಇಡಿ ಚಾರ್ಜ್‌ಶೀಟ್‌ನಲ್ಲಿ ಮಾಜಿ ಸಚಿವ ನಾಗೇಂದ್ರ A1 ಆಗಿದ್ದರು.
ನಾಗೇಂದ್ರ ಮತ್ತು ಆತನ ಗ್ಯಾಂಗ್ ಅಕ್ರಮ ನಡೆಸಿರುವುದು ಇಡಿ ತನಿಖೆಯಲ್ಲಿ ದೃಢವಾಗಿತ್ತು. 187 ಕೋಟಿಯಲ್ಲಿ ರೂ. ಒಟ್ಟು 84 ಕೋಟಿ ರೂಪಾಯಿ ಅಕ್ರಮ ವಹಿವಾಟು ನಡೆಸಿರುವ ಬಗ್ಗೆ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು. ಅಕ್ರಮವಾಗಿ ಹಣ ಬಳಸಲು ನಾಗೇಂದ್ರ ಒಳಸಂಚು ಮಾಡಿದ್ದಾರೆ. ಜೊತೆಗೆ ಸಾಕ್ಷಿ ನಾಶ ಮಾಡಲು ಸಂಚು ರೂಪಿಸಿದ್ದಾರೆ ಅಂತಾ ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿತ್ತು.
ಇನ್ನು ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ. ಲೋಹಿತ್, ಕಿರಣ್, ಮಂಜುನಾಥ್ಗೆ ನಿರೀಕ್ಷಣಾ ಜಾಮೀನು ನೀಡಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನ್ಯಾ.ಸಂತೋಷ್ ಗಜಾನನ ಭಟ್ ಆದೇಶ ಹೊರಡಿಸಿದ್ದಾರೆ.