ಪಾವಗಡ :
9 ತಿಂಗಳ ಮಗುವಿಗೆ ಗಂಟಲಲ್ಲಿ ಆಹಾರ ಸಿಲುಕಿ ತಕ್ಷಣವೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆ ತಂದರೂ ವೈದ್ಯರಿಲ್ಲದೆ ಮಗು ಸಾವನ್ನಪ್ಪಿದ ಘಟನೆ ನಡೆದಿದೆ.
ತಾಲ್ಲೂಕಿನ ರಾಜವಂತಿ ಗ್ರಾಮದ ರಾಜಪ್ಪ ಭಾರತಿ ದಂಪತಿಯ 9 ತಿಂಗಳ ಮಗು ಸತ್ಯ ಸಾವನ್ನಪ್ಪಿದ್ದು, ತಾಯಿ ಅಡುಗೆ ತಯಾರಿಸುತ್ತಿರುವ ವೇಳೆ ಪಕ್ಕದಲ್ಲೇ ಕೂತಿದ್ದ ಸತ್ಯ ತಿಂಡಿ ತಿನ್ನುತ್ತಿದ್ದ. ಈ ವೇಳೆ ಮಗುವಿಗೆ ಗಂಟಲಿನಲ್ಲಿ ಅನ್ನ ಸಿಲುಕಿದೆ. ಗಾಬರಿಯಾದ ಪೋಷಕರು ತಕ್ಷಣವೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆ ತಂದರೂ ಕೂಡ ಯಾವುದೇ ಪ್ರಯೋಜನವಾಗದೇ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಮಗು ಸಾವನ್ನಪ್ಪಿದ ಆಮಾನವೀಯ ಘಟನೆ ಭಾನುವಾರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ಮಗು ಸಾವಿನಿಂದ ಆಸ್ಪತ್ರೆಯ ಆವರಣದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.
ಪಟ್ಟಣದ ಕಾವಲಗೆರೆ ರಾಮಾಂಜಿನಪ್ಪ ಮಾತನಾಡಿ, ವೈದ್ಯರು ಕರ್ತವ್ಯದಲ್ಲಿ ಇದಿದ್ದರೆ ಮಗು ಸಾವನ್ನಪ್ಪುತ್ತಿರಲಿಲ್ಲ, ಹಲವು ಬಾರಿ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿಗೆ ಮನವಿ ಸಲ್ಲಿಸಿ ತಿಳಿಸಿದರು ಕೂಡ, ಯಾವುದೇ ಬದಲಾವಣಿ ಆಗಿಲ್ಲ ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆ. ಮಕ್ಕಳ ವೈದ್ಯರು ಒಬ್ಬರೆ ದಿನದ 24 ಗಂಟೆ ಕಾರ್ಯ ನಿರ್ವಹಿಸಬೇಕು. ಗಡಿ ಭಾಗದ ಆಸ್ಪತ್ರೆಗೆ ಇನ್ನು ಇಬ್ಬರು ಮಕ್ಕಳ ತಜ್ಞರನ್ನು ನೇಮಿಸಿ ಎಂದರೂ ಕೂಡ ಗಮನಹರಿಸದ ಕಾರಣ ಇಂತಹ ಘಟನೆಗಳು ಮರುಕಳಿಸುತ್ತಿವೆ. ರಾಜವಂತಿ ಗ್ರಾಮದ ರಾಜಪ್ಪ ಭಾರತಿ ದಂಪತಿಯ 9 ತಿಂಗಳ ಮಗು ಸತ್ಯ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಸಾವನ್ನಪ್ಪಿದ್ದು ದುರಂತವಾಗಿದ್ದು, ಇನ್ನೂ ಎಷ್ಟು ಜನ ಮುಗ್ದ ಜೀವಗಳನ್ನ ಸರ್ಕಾರಿ ಆಸ್ಪತ್ರೆ ವೈಫಲ್ಯಗಳಿಂದ ಬಲಿ ಪಡೆಯುತ್ತಾರೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ