ಬಾಗಲಕೋಟೆ:
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಪೊಲೀಸರು, ಘಟನೆಯ ಸಂಬಂಧ 18 ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
ಬನಹಟ್ಟಿಯ ಮಹಾತ್ಮಾ ಗಾಂಧಿ ವೃತ್ತದಲ್ಲಿರುವ ಸರ್ಕಾರಿ ಕಾಲೇಜಿನಲ್ಲಿ ಮಂಗಳವಾರವೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರಿಂದ ಮತ್ತೊಂದು ಗುಂಪು ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸಿತು. ಪರಸ್ಪರ ಘೋಷಣೆ ಕೂಗಿ, ಕಾಲೇಜು ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮೊದಲಿಗೆ ಪೊಲೀಸರು ಕಡಿಮೆ ಪ್ರಮಾಣದಲ್ಲಿದ್ದ ಕಾರಣ ಕಲ್ಲು ತೂರಾಟ ನಡೆಯುವಲ್ಲಿ ಕಾರಣವಾಯಿತು. ಬೆಳಿಗ್ಗೆಯಿಂದಲೇ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾದ ಕಾರಣ ನಗರದಾದ್ಯಂತ ಪೊಲೀಸ್ ಕಣ್ಗಾವಲು ಹೆಚ್ಚಾಗಿತ್ತು. ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು ಹಿಜಾ ವಿರೋಧಕ್ಕೆ ಭಾರೀ ಆಕ್ರೋಶ ಹೊರಹಾಕಿದರು.
ಮತ್ತೊಂದೆಡೆ ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿದ್ದರು. ಕಾಲೇಜಿಗೆ ರಜೆ ಘೋಷಿಸಿದ ಕಾರಣ ಪೊಲೀಸ್ ಬಂದೋಬಸ್ತ್ ನಲ್ಲಿ ನೂರಾರು ವಿದ್ಯಾರ್ಥಿಗಳು ಖಾಸಗಿ ಬಸ್ ಗಳ ಮೂಲಕ ಮನೆಗೆ ಕಳುಹಿಸುವಲ್ಲಿ ತಾಲೂಕಾಡಳಿತ ಹಾಗೂ ಪೊಲೀಸ್ ಇಲಾಖೆ ಯಶಸ್ವಿಯಾಯಿತು.
ಮಧ್ಯಾಹ್ನದವರೆಗೂ ವಿದ್ಯಾರ್ಥಿಗಳೊಂದಿಗೆ ಮುಸ್ಲಿಂ ಸಂಘಟನೆಗಳು ಹಾಗೂ ದಲಿತ ಸಂಘಟನೆಗಳಿಂದ ಪ್ರತಿಭಟನೆ ಮುಂದುವರೆಯಿತು.
ಈ ವೇಳೆ ಪ್ರತಿಭಟನೆ ತೀವ್ರಗೊಂಡು ಕಲ್ಲು ತೂರಾಟ ಆರಂಭವಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಪೊಲೀಸರು ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆ ಲಾಠಿ ಪ್ರಹಾರ ನಡೆಸಿ ಸ್ಥಳದಲ್ಲಿದ್ದ ಜನರನ್ನು ಚದುರಿಸಿ ಪರಿಸ್ಥಿತಿ ಹತೋಟೆಗೆ ತಂದರು.
ಇನ್ನು ಘಟನೆ ಸಂಬಂಧ ಇದೀಗ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಎರಡೂ ಕಡೆಯವರಿಂದ 18 ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
ಘಟನೆ ಸಂಬಂಧ ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದು, ಕೇಸರಿ ಶಾಲುಗಳನ್ನು ಧರಿಸಿದ್ದ ವ್ಯಕ್ತಿಗಳು ಕಾಲೇಜಿಗೆ ಬಂದು ಮುಖ್ಯದ್ವಾರವನ್ನು ಮುಚ್ಚಿದರು. ಈ ವೇಳೆ ಬುರ್ಖಾ ಹಾಗೂ ಹಿಜಾಬ್ ಧರಿಸಿ ಬರುತ್ತಿದ್ದ ಕೆಲ ಯುವತಿಯನ್ನು ಕಂಡು ಹಿಜಾಬ್ ಹಾಗೂ ಬುರ್ಖಾ ತೆಗೆದರೆ ಮಾತ್ರ ಮುಖ್ಯದ್ವಾರ ತೆರೆಯುವುದಾಗಿ ಹೇಳಿದರು.
ಈ ವಿಚಾರ ಎಲ್ಲೆಡೆ ಹರಡಿತ್ತು. ಬಳಿಕ ಯುವತಿಯರ ಪೋಷಕರು, ಇನ್ನಿತರೆ ಜನರು ಕಾಲೇಜು ಆವರಣಕ್ಕೆ ಬರಲು ಆರಂಭಿಸಿ ಸರ್ಕಾರ ಹಾಗೂ ಕಾಲೇಜಿನ ವಿರುದ್ಧ ಪ್ರತಿಭಟಿಸಲು ಆರಂಭಿಸಿದ್ದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಲಾಠಿಚಾರ್ಜ್ ನಡೆಸಿ ಜನರನ್ನು ಚದುರಿಸಿದರು ಎಂದು ಹೇಳಿದ್ದಾರೆ.
ಎಸ್’ಪಿ ಲೋಕೇಶ್ ಜಗಳಸರ್ ಅವರು ಪ್ರತಿಕ್ರಿಯೆ ನೀಡಿ, ಎರಡೂ ಕಡೆಯವರ ಕಲ್ಲು ತೂರಾಟಗಾರರನ್ನು ಬಂಧನಕ್ಕೊಳಪಡಿಸಲಾಗಿದೆ. ಕ್ರಮ ಕೈಗೊಳ್ಳುವುದಕ್ಕೂ ಮುನ್ನ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗುತ್ತದೆ. ಘಟನೆ ಸಂಬಂಧ ಕ್ರಮ ಕೈಗೊಳ್ಳಲಾಗುತ್ತದೆ.
ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ಕಾಲೇಜು ಸುತ್ತಮುತ್ತಲೂ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ