ಬೈಲಹೊಂಗಲ
ಈ ಭಾಗದ ಜನತೆಗೆ ಅನುಕೂಲಕ್ಕಾಗಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಮತ್ತು ಅತ್ಯಾಧುನಿಕ ಸೌಲಭ್ಯದೊಂದಿಗೆ ಸುಸಜ್ಜಿತವಾದ ಮಲಪ್ರಭಾ ಮಲ್ಟಿಸ್ಪೇಷಾಲಿಟಿ ಹಾಸ್ಪಿಟಲ್ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ದಿ.22 ರಂದು ಮುಂಜಾನೆ 10.30 ಕ್ಕೆ ಪಟ್ಟಣದ ಸೋಮವಾರ ಪೇಟೆಯ ಶ್ರೀ ದಾನಮ್ಮದೇವಿ ದೇವಸ್ಥಾನದ ಹತ್ತಿರ ಅದ್ದೂರಿಯಾಗಿ ಜರುಗಲಿದೆ ಎಂದು ಎಲುವು ಕೀಲು ರೋಗ ಶಸ್ರ್ತತಜ್ಞ ಡಾ.ಮಂಜುನಾಥ ಮುದಕನಗೌಡರ ಹೇಳಿದರು.
ಅವರು ಗುರುವಾರ ಪಟ್ಟಣದ ನೂತನ ಮಲಪ್ರಭಾ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಈಗಾಗಲೇ ಪಟ್ಟಣದಲ್ಲಿ ಕಳೆದ 13 ವರ್ಷಗಳಿಂದ ಆಸ್ಪತ್ರೆ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ನಾಡಿನಲ್ಲಿ ಮನೆ ಮಾತಾಗಿದ್ದು, ಅಲ್ಲದೇ ನಮ್ಮ ನೂತನ 12 ಗುಂಟೆ ಜಾಗೆಯಲ್ಲಿ 100 ಹಾಸಿಗೆಗಯುಳ್ಳ ಸುಸಜ್ಜಿತವಾದ ಆಸ್ಪತ್ರೆಯಲ್ಲಿ ಎಲ್ಲ ತರಹದ ಚಿಕಿತ್ಸೆಗೆ ಸಕಲ ಸೌಲಭ್ಯಗಳನ್ನು ನೀಡಲು ಸಿದ್ದತೆ ಕೈಗೊಳ್ಳಲಾಗಿದೆ. ಸುಸಜ್ಜಿತವಾದ ಹೆರಿಗೆ, ಹೈಟೆಕ್ ಶಸ್ರ್ತ ಚಿಕಿತ್ಸಾ ನಿಗಾ ಘಟಕ, 24*7 ತುರ್ತು ನಿಗಾ ಸೇವೆ ಇನ್ನಿತರ ಸೌಲಭ್ಯ ದೊರಕಲಿದೆ ಅಲ್ಲದೇ ಸರ್ಕಾರದ ಆರೋಗ್ಯ ಯೋಜನೆಗಳ ಕೂಡ ಪಡೆದುಕೊಳ್ಳಬಹುದಾಗಿದೆ. ಈ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಸುಕ್ಷೇತ್ರ ಇಂಚಲದ ಡಾ.ಶಿವಾನಂದ ಭಾರತಿ ಸ್ವಾಮಿಜಿ, ಮುರಗೋಡದ ನೀಲಕಂಠ ಸ್ವಾಮಿಜಿ, ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮಿಜಿ, ನಯಾನಗರದ ಅಭಿನವ ಸಿದ್ದಲಿಂಗ ಸ್ವಾಮಿಜಿ, ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಮಹಾಂತಯ್ಯ ಶಾಸ್ರ್ತಿ ಆರಾದ್ರಿಮಠ, ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿನಿ ಬಿ ಕೆ ಪ್ರಭಾ ಅಕ್ಕಾ, ಮುಸ್ಲಿಂ ಧರ್ಮಗುರು ಮೌಲಾನಾ ಶೌಕತಅಲಿ ಬಾದಿ ವಹಿಸಲಿದ್ದಾರೆ.
ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಸಂಸದರಾದ ಜಗದೀಶ ಶೆಟ್ಟರ, ಈರಣ್ಣ ಕಡಾಡಿ, ಕೆ ಎಲ್ ಇ ನಿರ್ದೇಶಕ ಡಾ.ಪ್ರಭಾಕರ ಕೋರೆ ಹಾಗೂ ಅತಿಥಿಗಳಾಗಿ ಶಾಸಕರಾದ ಬಾಬಾಸಾಹೇಬ ಪಾಟೀಲ, ವಿಶ್ವಾಸ ವೈದ್ಯ, ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ಮಹಾಂತೇಶ ದೊಡಗೌಡ್ರ, ಜಿಪಂ.ಮಾಜಿ ಸದಸ್ಯ ಶಂಕರ ಮಾಡಲಗಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಈಶ್ವರಪ್ಪ ಗಡಾದ, ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜಯ ಸಿದ್ದನ್ನವರ, ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ, ವಿಶೇಷ ಸನ್ಮಾನಿತರಾಗಿ ಡಾ.ಬಿ.ಎಸ್.ಮಹಾಂತಶೆಟ್ಟಿ, ಹಿರಿಯ ವೈದ್ಯ ಡಾ.ಎ.ಎನ್.ಬಾಳಿ ಆಗಮಿಸಲಿದ್ದಾರೆ ಎಂದರು.
ಚಿಕ್ಕಮಕ್ಕಳ ತಜ್ಞ ಡಾ.ಶರಣಕುಮಾರ ಅಂಗಡಿ, ಸ್ತೀರೋಗ ತಜ್ಞ ಡಾ.ಅಶೋಕ ದೊಡವಾಡ ಮಾತನಾಡಿ, ನಾಡಿ ಜನತೆ ಅನೂಕೂಲಕ್ಕಾಗಿ ಒಂದೇ ಸೂರಿನಡಿಯಲ್ಲಿ ನೂತನವಾದ ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣ ಮಾಡಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು. ಕರೆಯ ಮೇರೆಗೆ ನುರಿತ ತಜ್ಞ ವೈದ್ಯರು ಸೌಲಭ್ಯ ಒದಗಿಸಲಿದ್ದಾರೆ ಎಂದರು.ಗೋಷ್ಠಿಯಲ್ಲಿ ಡಾ.ರವೀಂದ್ರಕುಮಾರ ಜಕನೂರ ಹಾಗೂ ಸಿಬ್ಬಂದಿಗಳು ಇದ್ದರು.








