ಬೆಂಗಳೂರು
ಆರೋಗ್ಯ ಹಾಗೂ ಆಹಾರ ಸುರಕ್ಷತಾ ಇಲಾಖೆ ಜನರ ಹಿತದೃಷ್ಟಿ ಕಾಪಾಡುವ ಸಲುವಾಗಿ, ಅನೇಕ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಜನರು ಸೇವಿಸುವ ಆಹಾರ ದಿನದಿಂದ ದಿನಕ್ಕೆ ಕಲುಷಿತವಾಗುತ್ತಿದ್ದು, ಕಲಬೆರಕೆ ಆಹಾರದ ವಿರುದ್ಧ ಸಮರ ಸಾರಿದೆ. ಗೋಬಿ, ಕಬಾಬ್, ಕಾಟನ್ ಕ್ಯಾಂಡಿ, ಪಾನಿಪುರಿ ತಿನಿಸುಗಳ ಮೇಲೆ ಆಹಾರ ಇಲಾಖೆ ಒಂದಷ್ಟು ನಿರ್ಬಂಧಗಳನ್ನು ವಿಧಿಸಿತ್ತು. ಜೊತೆಗೆ ಹೋಟೆಲ್‌ಗಳು ಹಾಗೂ ಬೀದಿ ಬದಿ ವ್ಯಾಪಾರಿಗಳ ಮೇಲೂ ಕೂಡಾ ಒಂದಷ್ಟು ನಿರ್ಬಂಧಗಳನ್ನು ಹೇರಲಾಗಿತ್ತು. ಇಲಾಖೆಯ ಮುಂದಿನ ಗುರಿ ಬೇಕರಿ ತಿನಿಸುಗಳಾಗಿವೆ.
ಇನ್ನು ಆಹಾರ ಸರಕ್ಷತಾ ಹಾಗೂ ಆರೋಗ್ಯ ಇಲಾಖೆ ಸರಣಿ ರೇಡ್‌ಗಳು ಹಾಗೂ ಆಹಾರಗಳಿಗೆ ಬಳಸುವ ಕೆಲವೊಂದು ಪದಾರ್ಥಗಳಿಗೆ ನಿರ್ಬಂಧ ವಿಧಿಸುತ್ತಿರುವುದನ್ನು ಬೇಕರಿ ಮಾಲೀಕರ ಸಂಘಟನೆ ಸ್ವಾಗತ ಮಾಡಿದೆ. ನಾವು ಸಹಜ ಕಲರ್ ಬಳಕೆ ಮಾಡುತ್ತೇವೆ. ಕೆಮಿಕಲ್ ಬಳಕೆ ಮಾಡಲ್ಲ ಆಹಾರ ಇಲಾಖೆಯ ಕ್ರಮ ಸರಿಯಾಗಿದೆ ಎಂದು ಬೇಕರಿ ಮಾಲೀಕರು ಹೇಳಿದ್ದಾರೆ.
ಆಹಾರ ಇಲಾಖೆ ಹಾನಿಕಾರ ಕಲರ್ ಬ್ಯಾನ್ ಮಾಡಿದೆ. ಇಷ್ಟಾದರೂ ಕೆಲವು ಹೋಟಲ್ಗಳಲ್ಲಿ ಹಾನಿಕಾರಕ ಕಲರ್ ಬಳಕೆ ಮಾಡಲಾಗಿದೆ. ಈ ಬಗ್ಗೆ ಖುದ್ದು ಆಹಾರ ಇಲಾಖೆಯೇ ದಾಳಿ ಮಾಡಿ ಮಾಹಿತಿ ನೀಡಿದೆ. ಜುಲೈ ಹಾಗೂ ಅಗಸ್ಟ್ ನಲ್ಲಿ ಆಹಾರ ಇಲಾಖೆ 3467 ಹೋಟೆಲ್ಗಳನ್ನ ತಪಾಸಣೆ ಮಾಡಿದೆ. ಈ ಪೈಕಿ 986 ಹೊಟೆಲ್ಗಳಿಗೆ ನೋಟಿಸ್ ನೀಡಿದೆ. 142 ಹೋಟೆಲ್ಗಳಿಗೆ 4.93 ಲಕ್ಷ ರೂ. ದಂಡ ವಿಧಿಸಿದೆ. ಕಲರ್ ಬಳಕೆ ಸೇರಿದ್ದಂತೆ ಹೋಟೆಲ್ಗಳಲ್ಲಿ ನೈರ್ಮಲ್ಯ ಇಲ್ಲ ಎಂದು ದಂಡ ವಿಧಿಸಿದೆ. ಜೊತೆಗೆ ದೇವನಹಳ್ಳಿಯ ಕೆಎಫ್ ಸಿ, ನೂಪ ಟೆಕ್ನಾಲಜಿಸ್, ಮಮತಾ ಏಜೆನ್ಸಿ ಸೇರಿದಂತೆ 4 ಹೋಟೆಲ್ ಲೈಸೆನ್ಸ್ ರದ್ದು ಮಾಡಲಾಗಿದೆ.
211 ಗೋಬಿ ಮಂಚೂರಿ ಮಾದರಿ ಸಂಗ್ರಹ ಮಾಡಲಾಗಿತ್ತು. ಈ ಪೈಕಿ 31 ಮಾದರಿಗಳಲ್ಲಿ ಸನ್ ಸೆಟ್ ಯೆಲ್ಲೋ ಮತ್ತು ಕಾರ್ಮೊಸಿನ್ ಅಂಶ ಕಂಡು ಬಂದಿದೆ. ತರಕಾರಿ, ಹಣ್ಣುಗಳಲ್ಲೂ ಕ್ರಿಮಿನಾಶಕ ಕಂಡು ಬಂದಿದೆ. ತರಕಾರಿ ಮತ್ತು ಹಣ್ಣಿನ 385 ಸ್ಯಾಂಪಲ್ ಪಡೆಯಲಾಗಿತ್ತು. ಈ ಪೈಕಿ 27 ಸ್ಯಾಂಪಲ್ ನಲ್ಲಿ ಕ್ರಿಮಿನಾಶಕ ಕಂಡು ಬಂದಿದೆ. ಹೀಗಾಗಿ ವೈದ್ಯರು ಆಹಾರ ಬಳಕೆಯ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಆಹಾರ ತಜ್ಞರು ಸಲಹೆ ನೀಡಿದ್ದಾರೆ.
ಇನ್ನು ಕೇಕ್ ಕಲರ್ ಕಡಿವಾಣಕ್ಕೆ ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಜನರು ಕೂಡಾ ಸಂತಸ ವ್ಯಕ್ತಪಡಿಸಿದ್ದು, ಇಲಾಖೆಯ ನಡೆಗೆ ಸಾಥ್ ನೀಡಿದ್ದಾರೆ.
