ಮೈಸೂರು:
ಮೈಸೂರು ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ, ದಸರಾದಲ್ಲಿ ಬಲೂನ್ ಮಾರಲು ಬಂದಿದ್ದ 10 ವರ್ಷದ ಬಾಲಕಿಯ ಶವ ಪತ್ತೆಯಾಗಿದೆ. ಬಾಲಕಿಯ ದೇಹದ ಮೇಲೆ ಬಟ್ಟೆ ಇಲ್ಲದೆ ಮೃತದೇಹ ಪತ್ತೆಯಾದ ಕಾರಣ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ದಸರಾ ಸಮಯದಲ್ಲಿ ಬಲೂನ್ ವ್ಯಾಪಾರಕ್ಕಾಗಿ ಕಲಬುರಗಿ ಕಡೆಯಿಂದ ಮೈಸೂರಿಗೆ ಹಕ್ಕಿಪಿಕ್ಕಿ ಜನಾಂಗದ 50ಕ್ಕೂ ಹೆಚ್ಚು ಕುಟುಂಬಗಳು ಬಂದಿವೆ. ಇವರು ದೊಡ್ಡಕೆರೆ ಮೈದಾನದ ಸುತ್ತಲಿನ ರಸ್ತೆಯಲ್ಲಿ ಬಿಡಾರ ಹಾಕಿಕೊಂಡು ನೆಲೆಸಿದ್ದರು. ಬುಧವಾರ ಚಾಮುಂಡೇಶ್ವರಿ ದೇವಾಲಯದ ತೆಪ್ಪೋತ್ಸವ ಮುಗಿಸಿ, ಗುರುವಾರ ಬೇರೆ ಕಡೆ ತೆರಳಲು ಸಿದ್ಧತೆ ನಡೆಸಿದ್ದರು.
ರಾತ್ರಿ ವ್ಯಾಪಾರ ಮುಗಿಸಿ ಬಂದ ಬಾಲಕಿ ತಂದೆ, ತಾಯಿಯೊಂದಿಗೆ ಮಲಗಿದ್ದಳು. ಮುಂಜಾನೆ ಮಳೆ ಬಂದು ಎಲ್ಲರೂ ಎದ್ದಾಗ ಬಾಲಕಿ ಸ್ಥಳದಿಂದ ನಾಪತ್ತೆಯಾಗಿದ್ದಳು. ಹುಡುಕಾಡಿದಾಗ ಟೆಂಟ್‌ನಿಂದ 50 ಮೀ ದೂರದಲ್ಲಿರುವ ಮಣ್ಣಿನ ರಾಶಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಕೇವಲ ಎರಡೇ ದಿನಗಳ ಹಿಂದೆ, ಬಾಲಕಿ ಶವ ಪತ್ತೆಯಾದ ಜಾಗದ ಬಳಿಯೇ ರೌಡಿಶೀಟರ್ ಒಬ್ಬನ ಸಹವರ್ತಿಯ ಕೊಲೆ ನಡೆದಿತ್ತು. ಈಗ ಅದೇ ಜಾಗದ ಸಮೀಪ ಬಾಲಕಿಯ ಮೃತದೇಹ ಸಿಕ್ಕಿದೆ. ವ್ಯಾಪಾರಕ್ಕೆ ಆಗಮಿಸಿದ್ಧ 50 ಹಕ್ಕಿಪಿಕ್ಕಿ ಕುಟುಂಬಸ್ಥರನ್ನು ಪೊಲೀಸರು ಈಗ ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಶ್ವಾನ ದಳ ಆಗಮಿಸಿದ್ದು, ಪೊಲೀಸರು ಸಿಸಿಟಿವಿ ಪರಿಶೀಲನೆ ಮಾಡುತ್ತಿದ್ದಾರೆ.
