ಹುಳಿಯಾರು:
ಹುಳಿಯಾರು ಹೋಬಳಿ ಗಡಿ ಭಾಗವಾದ ದಸೂಡಿ ಗ್ರಾಮ ಪಂಚಾಯಿತಿಗೆ ಸೇರಿದ ಬಲ್ಲಪ್ಪನಹಟ್ಟಿಯ ರಸ್ತೆ ದುರಸ್ತಿ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಬುಡಕಟ್ಟಿನ ಕಾಡುಗೊಲ್ಲ ಜನಾಂಗದ ಗೊಲ್ಲರಹಟ್ಟಿ ತುಂಬಾ ಹಿಂದುಳಿದಿದ್ದು ಈ ಹಟ್ಟಿಯಲ್ಲಿ ಸರಿ ಸುಮಾರು 180 ಮನೆಗಳಿದ್ದು 1700 ಜನಸಂಖ್ಯೆ ಇದೆ. ಈ ಗೊಲ್ಲರಹಟ್ಟಿಯ ಜನರು ದಸೂಡಿ ಸಂಪರ್ಕಿಸಲು ಬಂಡೆ ಗೇಟ್ ರಸ್ತೆಯಿದ್ದು. ಈ ರಸ್ತೆಯ ಎರಡೂ ಕಡೆ ನೀರು ನಿಂತು ಓಡಾಡಲಾಗದ ದುಸ್ಥಿತಿಯಿದೆ.
ಮಳೆ ಬಂದರಂತೂ ಈ ರಸ್ತೆಗಳು ಕೆಸರು ಗದ್ದೆಯಾಗಿ ಓಡಾಡಲಾಗುವುದಿಲ್ಲ. ಕಷ್ಟಪಟ್ಟು ಓಡಾಡಿದರೂ ಬಟ್ಟೆಯೆಲ್ಲಾ ಕೆಸರಾಗುವುದು ನಿಶ್ಚಿತ. ಅಲ್ಲದೆ ಗುಂಡಿಗಳಲ್ಲಿ ಮಳೆ ನೀರು ನಿಂತು ದ್ವಿಚಕ್ರ ವಾಹನ ಸವಾರರು ಬಿದ್ದುಎದ್ದು ಓಡಾಡುವಂತ್ತಾಗಿದೆ.
ಈ ಊರಿನ ಗ್ರಾಮಸ್ಥರು ರಾಜಕೀಯ ಮುಖಂಡರಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಸಹ ಇಲ್ಲಿಯವರೆಗೆ ಈ ರಸ್ತೆ ದುರಸ್ಥಿಗೆ ಗಮನಹರಿಸಿಲ್ಲ. ಮತಭಿಕ್ಷೆಗೆ ಬರುವ ರಾಜಕಾರಣಿಗಳು ದುರಸ್ತಿ ಮಾಡುವ ಭರವಸೆ ನೀಡುತ್ತರಾದರೂ ಚುನಾವಣೆ ಮುಗಿದ ನಂತರ ಇತ್ತ ತಿರುಗಿ ನೋಡುವುದಿಲ್ಲ.
ಎತ್ತರದ ಪ್ರದೇಶದಿಂದ ತಗ್ಗಿನ ಪ್ರದೇಶಕ್ಕೆ ಈ ರಸ್ತೆಯ ಮೇಲೆ ನೀರು ಹರಿಯುತ್ತದೆ. ಮೊದಲೇ ಮಣ್ಣಿನ ರಸ್ತೆಯಾಗಿರುವುದರಿಂದ ನೀರು ಹರಿದಾಗಲೆಲ್ಲಾ ಕೆಸರಾಗುತ್ತದೆ. ರಸ್ತೆ ಕೆಳಗೆ ನೀರು ಸರಾಗವಾಗಿ ಹರಿಯಲು ಸಿಸಿ ಪೈಪ್‍ಗಳನ್ನು ಅಳವಡಿಸಿದರೆ ಈ ಸಮಸ್ಯೆಗೆ ಮುಕ್ತಿ ಕೊಡಬಹುದಾಗಿದೆ. ಪಂಚಾಯ್ತಿ ಅನುದಾನದಲ್ಲೇ ಇದನ್ನು ಮಾಡಬಹುದಾಗಿದ್ದು ಪಂಚಾಯ್ತಿ ಈ ಬಗ್ಗೆ ಗಮನ ಹರಿಸುವಂತೆ ಇಲ್ಲಿನ ಶಿಕ್ಷಕರು ಮತ್ತು ನಿವಾಸಿಗಳು ಮನವಿ ಮಾಡಿದ್ದಾರೆ.
ಸದಸ್ಯರಿಗೆ ಬರುವ ಪಂಚಾಯ್ತಿ ಅನುದಾನದಲ್ಲಿ ಈಗಾಗಲೇ ಗ್ರಾಮದ ನೀರಿನ ಪೈಪ್‍ಲೈನ್ ಮಾಡಿ ಜಂಗಲ್ ಕ್ಲೀನ್ ಮಾಡಿಸಿದ್ದೇನೆ. ಅಲ್ಲದೆ ಕೆಸರು ಆಗದಂತೆ ಕಾಡುಜಲ್ಲಿಸಹ ರಸ್ತೆಗೆ ಹೊಡೆಸಿದ್ದೇನೆ. ಆದರೂ ಕೆಸರಾಗುತ್ತಿದೆ. ಪಿಡಿಓ ಅವರಿಗೆ ಈ ಬಗ್ಗೆ ಗಮನ ಸೆಳೆದು ವಿಶೇಷ ಅನುದಾನ ಮಂಜೂರು ಮಾಡಿಸಿ ರಸ್ತೆ ಕೆಳಗೆ ಪೈಪ್ ಅಳವಡಿಸಿ ಕೆಸರಾಗದಂತೆ ನೋಡಿಕೊಳ್ಳುತ್ತೇನೆ.
ಚಿತ್ತಯ್ಯ, ಗ್ರಾಪಂ ಸದಸ್ಯ, ಬಲ್ಲಪ್ಪನಹಟ್ಟಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ