ಅಗತ್ಯ ಸೇವೆಯಲ್ಲಿರುವವರಿಗೆ ಅಂಚೆ ಮತದಾನಕ್ಕೆ ಅವಕಾಶ

ತುಮಕೂರು

      ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮತದಾನಕ್ಕೆ ಅವಕಾಶವಿದ್ದು, ಅಗತ್ಯ ಸೇವೆಯಲ್ಲಿರುವವರು ಮತದಾನದಿಂದ ವಂಚಿತರಾಗಬಾರದೆAಬ ಉದ್ದೇಶದಿಂದ ಭಾರತ ಚುನಾವಣಾ ಆಯೋಗವು ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಅಗತ್ಯ ಸೇವೆಯಲ್ಲಿರುವವರಿಗೆ ಅಂಚೆ ಮತ ಪತ್ರದ ಮೂಲಕ ಮತದಾನ ಮಾಡಲು ಅವಕಾಶ ನೀಡಿದೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಹೋಟೆಲ್ ಶಿವಪ್ಪ ತಿಳಿಸಿದರು.

    ತಾಲ್ಲೂಕು ಕಚೇರಿಯಲ್ಲಿ ಗುರುವಾರ ಸಂಜೆ ಅಗತ್ಯ ಸೇವೆ ಒದಗಿಸುವ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಆಯೋಗವು ಆರೋಗ್ಯ ಇಲಾಖೆ, ಸಾರಿಗೆ ಇಲಾಖೆ, ವಾರ್ತಾ ಇಲಾಖೆ, ಕೆ.ಎಸ್.ಆರ್.ಟಿ.ಸಿ., ಬಿಎಸ್‌ಎನ್‌ಎಲ್, ಅಗ್ನಿಶಾಮಕ ಕಚೇರಿ, ಸಂಚಾರಿ ಪೊಲೀಸ್, ಭಾರತೀಯ ರೈಲ್ವೆ ಇಲಾಖೆ, ಬೆಸ್ಕಾಂ, ಕೆಪಿಟಿಸಿಎಲ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳನ್ನು ಅಗತ್ಯ ಸೇವೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗೈರು ಹಾಜರಿ ಮತದಾರರೆಂದು ಪರಿಗಣಿಸಿ ಅಂಚೆ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.

    ಅಗತ್ಯ ಸೇವೆ ಒದಗಿಸುವ ಇಲಾಖೆಗಳ ಮುಖ್ಯಸ್ಥರು ತಮ್ಮ ಇಲಾಖೆಯಲ್ಲಿ ಅಂಚೆ ಮತ ಪತ್ರದ ಮೂಲಕ ಮತದಾನ ಮಾಡಲಿಚ್ಛಿಸುವವರ ಪಟ್ಟಿಯನ್ನು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಪಾಳಿ ಆಧಾರದ ಮೇಲೆ ಕೆಲಸ ಮಾಡುವವರು ಮತಗಟ್ಟೆಗೆ ಭೇಟಿ ನೀಡಿ ಮತದಾನ ಮಾಡುವುದು ಸೂಕ್ತವೆಂದು ಸಲಹೆ ನೀಡಿದರಲ್ಲದೆ, ಮತದಾನ ದಿನದಂದು ಪೂರ್ಣ ಪ್ರಮಾಣದ ಸೇವೆಯಲ್ಲಿ ತೊಡಗಿಸಿಕೊಂಡವರು ಅಂಚೆ ಮತಪತ್ರದ ಮೂಲಕ ಮತದಾನ ಮಾಡಬಹುದಾಗಿದೆ ಎಂದು ತಿಳಿಸಿದರು.

    ಇಲಾಖಾ ಮುಖ್ಯಸ್ಥರು ತಮ್ಮ ಇಲಾಖೆಯಲ್ಲಿ ಅಂಚೆ ಮೂಲಕ ಮತದಾನ ಮಾಡಲಿಚ್ಛಿಸುವವರ ಪಟ್ಟಿ ನೀಡಿದಲ್ಲಿ ಪಟ್ಟಿಗನುಗುಣವಾಗಿ ಅಂಚೆ ಮೂಲಕ ಮತದಾನ ಮಾಡಲು ಅನುವಾಗುವಂತೆ ನಮೂನೆ 12ಡಿಯನ್ನು ವಿತರಿಸಲಾಗುವುದು. ಅಗತ್ಯ ಸೇವೆಯಲ್ಲಿರುವವರು ತಮಗೆ ಬಿತ್ತರಿಸಿದ ನಮೂನೆ 12ಡಿಯನ್ನು ಭರ್ತಿ ಮಾಡಿ ತುಮಕೂರು ಗ್ರಾಮಾಂತರ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಗೆ ತಲುಪಿಸಿದಲ್ಲಿ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡ ನಂತರ ನಮೂನೆಯಲ್ಲಿ ಒದಗಿಸಿರುವ ವಿಳಾಸಕ್ಕೆ ಅಂಚೆ ಮತಪತ್ರವನ್ನು ಕಳುಹಿಸಲಾಗುವುದು ಎಂದು ಮಾಹಿತಿ ನೀಡಿದರು.

     ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಪಿ.ಓಂಕಾರಪ್ಪ, ವಾರ್ತಾ ಇಲಾಖೆಯ ಆರ್. ರೂಪಕಲಾ ಸೇರಿದಂತೆ ಅಗತ್ಯ ಸೇವೆ ಒದಗಿಸುವ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link