ಬ್ಯಾಲ್ಯ ಕೆರೆ ಒತ್ತುವರಿ : ಟ್ರೆಂಚ್ ನಿರ್ಮಿಸಲು ಆದೇಶ

 ಮಧುಗಿರಿ :

     ಕೆರೆ-ಕಟ್ಟೆ ಹಾಗೂ ಸರಕಾರಿ ಸ್ವತ್ತುಗಳನ್ನು ಸಂರಕ್ಷಿಸುವಂತೆ ಇತ್ತೀಚೆಗೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚಿಸಿದ್ದರೂ ಕೂಡ ಬ್ಯಾಲ್ಯ ಗ್ರಾಪಂ ಪಿಡಿಓ ಮಾತ್ರ ತನಗೇನು ಗೊತ್ತಿಲ್ಲದಂತೆ ಕೆರೆಯ ಒತ್ತುವರಿ ತೆರವುಗೊಳಿಸಲು ಮುಂದಾಗುತ್ತಿಲ್ಲ ಎಂಬ ಗಂಭೀರ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ತಾಲ್ಲೂಕಿನ ಪುರವರ ಹೋಬಳಿಯ ಬ್ಯಾಲ್ಯ ಗ್ರಾಮದ ಸ.ನಂ.97ರಲ್ಲಿ ಕೆರೆ ಇದ್ದು, ಇದರಲ್ಲಿ 13 ಎಕರೆ 35 ಗುಂಟೆ ಖರಾಬು ಜಮೀನನ್ನು ಹೊಂದಿದೆ. ಕೆಲವರು ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆಂದು ಗ್ರಾಮದ ಕೆಲವರು ಜಿಲ್ಲಾಧಿಕಾರಿಗಳಿಗೆ ಒತ್ತುವರಿ ತೆರವುಗೊಳಿಸುವಂತೆ ಮನವಿ ಪತ್ರ ಸಲ್ಲಿಸಿದ್ದರು.

      ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಈಗಾಗಲೇ ಸರ್ವೆ ಇಲಾಖೆಯ ವತಿಯಿಂದ ಕೆರೆ ಹಾಗೂ ಖರಾಬು ಜಮೀನಿಗೆ ಸಂಬಂಧಿಸಿದಂತೆ ಒತ್ತುವರಿ ಮಾಡಿರುವ ಮತ್ತು ಖರಾಬು ಜಮೀನಿನ ಗಡಿ ಗುರುತಿಸಲಾಗಿದ್ದರೂ ಸಹ ಪಿಡಿಓ ಮಾತ್ರ ಒತ್ತುವರಿ ತೆರವಿಗೆ ಮೀನಾ-ಮೇಷ ಎಣಿಸುತ್ತಿದ್ದಾರೆ. ಒತ್ತುವರಿ ತೆರವುಗೊಳಿಸುವಂತೆ ತಹಸೀಲ್ದಾರ್ ವೈ.ರವಿಯವರು ಸಂಬಂಧಪಟ್ಟ ಇಲಾಖೆಯವರಿಗೆ ಈಗಾಗಲೇ ನೋಟಿಸ್ ನೀಡಿದ್ದಾರೆ. ಆದರೆ ಪಿಡಿಓ ಮಾತ್ರ ತಹಸೀಲ್ದಾರ್ ಭೇಟಿ ನೀಡಲಿದ್ದಾರೆಂದು ಮೊದಲೆ ತಿಳಿದುಕೊಂಡು ಸ್ಥಳ ಪರಿಶೀಲನೆಗೆ ಬಾರದೆ ಗೈರು ಹಾಜರಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

      ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ಅರ್ಜಿದಾರರು ನೀಡಿದ ಮಾಹಿತಿ ಮೇರೆಗೆ ತಹಸೀಲ್ದಾರ್ ವೈ. ರವಿ ಸ್ಥಳ ಪರಿಶೀಲನೆ ನಡೆಸಿ, ಸರ್ವೆ ಇಲಾಖೆಯವರು ಗುರುತಿಸಿರುವ ಗಡಿ ಪರಿಶೀಲಿಸಿದರು. ಒತ್ತುವರಿಯಾಗಿರುವ ಸ್ಥಳದ ಸುತ್ತ ಟ್ರೆಂಚ್ ನಿರ್ಮಿಸುವಂತೆ ಸ್ಥಳದಲ್ಲಿದ್ದ ವಿಎ ಗೆ ತಿಳಿಸಿ, ಕಾಮಗಾರಿ ನಿರ್ಮಾಣ ಮಾಡುವಾಗ ಯಾರಾದರೂ ಅಡ್ಡಿ ಪಡಿಸಿದರೆ ಅವರ ವಿರುದ್ದ ಗಂಭೀರವಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸ್ಥಳ ಪರೀಶೀಲನೆ ಮಾಡುವಾಗ ಕೆಲವರು ತಾವುಗಳು ರೈತರಾಗಿದ್ದು, ತಮಗೆ ನ್ಯಾಯ ದೊರಕಿಸಿಕೊಡುವಂತೆ ಹಾಗೂ ಈ ಕೆರೆಯು ಎಂ.ಐ ವ್ಯಾಪ್ತಿಗೆ ಬರುತ್ತದೆಂದು ತಹಸೀಲ್ದಾರ್‍ರವರನ್ನು ಯಾಮಾರಿಸಲು ಕೆಲವರು ಮುಂದಾದರು. ಆಗ ತಹಸೀಲ್ದಾರ್ 40 ಎಕರೆಗೂ ಹೆಚ್ಚು ಮೇಲ್ಪಟ್ಟ ಕೆರೆಗಳು ಮಾತ್ರ ಸಣ್ಣ ನೀರಾವರಿ ಇಲಾಖಾ ವ್ಯಾಪ್ತಿಗೆ ಬರುತ್ತವೆ. ಸಣ್ಣಪುಟ್ಟ ಕೆರೆಗಳು ಜಿಪಂ ಹಾಗೂ ಗ್ರಾಪಂ ವ್ಯಾಪ್ತಿಗೆ ಬರುತ್ತವೆ ಎಂದರು.

      ಸ್ಥಳದಲ್ಲಿದ್ದ ಕೆಲ ಗ್ರಾಮಸ್ಥರು ಪಿಡಿಓ ಎಲ್ಲಿ ಎಂದು ಪ್ರಶ್ನಿಸಿದಾಗ ಉತ್ತರಿಸಿದ ರಾಜಕೀಯ ಮುಖಂಡರು, ಇಂದು ಅವರು ಇಲ್ಲಿಗೆ ಬಂದಿಲ್ಲ, ಸಭೆಗೆ ಹೋಗಿದ್ದಾರೆಂದು ಮಾಹಿತಿ ನೀಡಿದರು. ತಹಸೀಲ್ದಾರ್ ಸ್ಥಳ ಪರಿಶೀಲನೆಗೆ ಬರುವ ಬಗ್ಗೆ ಪಿಡಿಓಗೆ ಮೊದಲೆ ಮಾಹಿತಿ ಇದ್ದರೂ, ಸಹ ಸ್ಥಳಕ್ಕೆ ಬಾರದೆ ಗೈರು ಹಾಜರಾಗಿದ್ದ ಪಿಡಿಓರವರನ್ನು ದೂರವಾಣಿ ಮೂಲಕ ಸಂಪರ್ಕಿಸಲಾಗಿದ್ದು, ತಾವು ಬುಧವಾರ ಬೆಳಗ್ಗೆ 11 ಗಂಟೆಯವರೆವಿಗೂ ಗ್ರಾಪಂ ಕಚೇರಿಯಲ್ಲಿದ್ದೆ. ನಂತರ ಚೌಡೇಶ್ವರಿ ದೇವಾಲಯದ ಪ್ರಕರಣ ಇಂದೂ ಏನೂ ಇರಲಿಲ್ಲ, ಆದರೆ ಈ ಬಗ್ಗೆ ವಕೀಲರನ್ನು ಭೇಟಿ ಮಾಡಲು ತುಮಕೂರಿಗೆ ಒಂದಿದ್ದೇನೆ. ಆ ಸಂಧರ್ಭದಲ್ಲಿ ತಹಸೀಲ್ದಾರ್‍ರವರು ಮಧುಗಿರಿಯಿಂದ ಬ್ಯಾಲ್ಯಕ್ಕೆ ಭೇಟಿ ನೀಡಿ ಹೋಗಿದ್ದಾರೆ. ನಂತರ ತಾವು ತುಮಕೂರಿನಿಂದ ಬ್ಯಾಲ್ಯಕ್ಕೆ ಬಂದೆ ಎಂಬ ಪ್ರತಿಕ್ರಿಯೆಯನ್ನು ಗ್ರಾಪಂ ಪಿಡಿಓ ಮುದ್ದುರಾಜು ನೀಡಿದ್ದಾರೆ.
ಒತ್ತುವರಿದಾರರು ಹಾಗೂ ಕೆಲ ಮುಖಂಡರು, ತಹಸೀಲ್ದಾರ್, ಸಾಮಾಜಿಕ ಹೋರಾಟಗಾರರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆದವು. ನಂತರ ತಹಸೀಲಾರ್ ವೈ ರವಿಯವರು ಸ್ಥಳದಲ್ಲಿದ್ದವರಿಗೆ ತಿಳಿ ಹೇಳಿ, ಹೈಕೋರ್ಟ್ ಹಾಗೂ ಮೇಲಧಿಕಾರಿಗಳ ಆದೇಶ ಪಾಲನೆ ಮಾಡುವುದು ತಮ್ಮ ಕರ್ತವ್ಯವಾಗಿದೆ ಎಂದಷ್ಟೆ ಹೇಳಿ ಸ್ಥಳದಿಂದ ಹೊರ ನಡೆದರು.

      ಇತ್ತೀಚೆಗೆ ಕೆರೆ-ಕಟ್ಟೆಗಳ ಒತ್ತುವರಿ ತೆರವಿಗೆ ಹೈಕೋರ್ಟ್ ಆದೇಶ ನೀಡಿದ್ದು, ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಮಧುಗಿರಿ ತಾಲ್ಲೂಕಿನಲ್ಲಿ ಒತ್ತುವರಿಯಾಗಿರುವ ಜಾಗಗಳನ್ನು ತೆರವುಗೊಳಿಸುವ ಬಗ್ಗೆ ಕಾರ್ಯೋಖ್ಮವಾಗುತ್ತಿರುವ ಕಂದಾಯ ಹಾಗೂ ಸರ್ವೆ ಇಲಾಖೆಯ ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚ್ಚುಗೆ ವ್ಯಕ್ತವಾಗುತ್ತಿದ್ದು, ಮುಂದಿನ ಪೀಳಿಗೆಗೆ ಕೆರೆ-ಕಟ್ಟೆ ಉಳಿಸಿಕೊಳ್ಳಬೇಕಾಗಿದೆ.

      ಕೆರೆಯ ಒತ್ತುವರಿ ತೆರವು ಗೊಳಿಸುವ ಬಗ್ಗೆ ಸರ್ವೆ ಇಲಾಖೆ ಹಾಗೂ ತಹಸೀಲ್ದಾರ್ ಕ್ರಮ ಕೈಗೊಂಡರೂ ಕೂಡ ಪಿಡಿಓ ಮಾತ್ರ ಗುರುತಿಸಿರುವ ಒತ್ತುವರಿಯನ್ನು ತೆರವುಗೊಳಿಸಲು ಮುಂದಾಗದೆ ರಾಜಕೀಯ ನಾಯಕರ ಕೈಗೊಂಬೆಯಾಗುತ್ತಿದ್ದಾರೆ. ಇನ್ನೂ ಕೆರೆ ಸಂರಕ್ಷಣೆ ಹೋರಾಟಗಾರರು ಇಲ್ಲಿ ನ್ಯಾಯ ದೊರೆಯದೆ ಹೋದರೆ ಸಂಬಂಧಪಟ್ಟವರ ಹಾಗೂ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ದ ಮತ್ತೆ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
 

      ಒತ್ತುವರಿಯಾಗಿರುವ ಜಾಗವನ್ನು ಸ್ಥಳ ಪರಿಶೀಲನೆ ಮಾಡುತ್ತಿರುವ ತಹಸೀಲ್ದಾರ್ ವೈ.ರವಿ ಹಾಗೂ ಗ್ರಾಮಸ್ಥರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap