ಮೈಸೂರು:
ಚಾಮುಂಡಿ ಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ಹಾಗೂ ದರ್ಶನದ ವೇಳೆ ಮೊಬೈಲ್ ನಿಷೇಧ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಘೋಷಿಸಿದ್ದಾರೆ.ಮೈಸೂರು ಜಿಲ್ಲಾ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ, ಚಾಮುಂಡೇಶ್ವರಿ ದರ್ಶನ ಪಡೆದರು. ಬಳಿಕ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಭೆ ನಡೆಸಿದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಚಾಮುಂಡಿಬೆಟ್ಟದಲ್ಲಿ ಪ್ರಸಾದ ವಿತರಣೆಗೆ ಕ್ರಮ ಕೈಗೊಳ್ಳುತ್ತೇವೆ. ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆ, ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧಿಸಲಾಗಿದೆ. ಅಲ್ಲದೇ ಚಾಮುಂಡೇಶ್ವರಿ ದರ್ಶನದ ವೇಳೆ ಮೊಬೈಲ್ ನಿಷೇಧ ಮಾಡಲಾಗಿದೆ ಎಂದರು. ಚಾಮುಂಡಿ ಬೆಟ್ಟವಷ್ಟೇ ಅಲ್ಲ ಎಲ್ಲಾ ದೇಗುಲಗಳಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಚಾಮುಂಡಿ ತಾಯಿ ಸನ್ನಿಧಿಯಲ್ಲಿ ಗುಣಮಟ್ಟದ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಟ್ಟದಲ್ಲಿ ಸುರಕ್ಷತೆ ಇರಬೇಕೆಂದು ಸಿಸಿಟಿವಿ ಅಳವಡಿಕೆ ಮಾಡಲಾಗುವುದು ಎಂದು ಸಿಎಂ ತಿಳಿಸಿದರು.
ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಭೆ ನನ್ನ ಅಧ್ಯಕ್ಷತೆಯಲ್ಲಿ ನಡೆದಿದೆ. ಹಿಂದಿನ ಸಮಿತಿ ಕ್ಷೇತ್ರ ಅಭಿವೃದ್ಧಿ ಹಾಗೂ ಭಕ್ತರಿಗೆ ಮೂಲಸೌಕರ್ಯ ಒದಗಿಸುವ ಕೆಲಸ ಮಾಡ್ತಿತ್ತು. ಮಹದೇಶ್ವರ ಬೆಟ್ಟದ ರೀತಿ ಚಾಮುಂಡೇಶ್ವರಿ ಕ್ಷೇತ್ರಕ್ಕೂ ಪ್ರಾಧಿಕಾರ ರಚನೆ ಮಾಡಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಭಕ್ತಾದಿಗಳು ಬರುತ್ತಾರೆ. ಹೀಗಾಗಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸ ಆಗಬೇಕಿದೆ. ಚಾಮುಂಡೇಶ್ವರಿ ಕ್ಷೇತ್ರ ಹಾಗೂ ಕ್ಷೇತ್ರಕ್ಕೆ ಸೇರಿದ ದೇವಾಲಯಗಳ ಅಭಿವೃದ್ಧಿ ಪ್ರಾಧಿಕಾರದ ಉದ್ದೇಶವಾಗಿದೆ. ಭಕ್ತರಿಗೆ ಅಗತ್ಯ ಸೌಲಭ್ಯ ಒದಗಿಸುವುದು ಇದರ ಉದ್ದೇಶ. ಈ ಹಿಂದೆ ಬಸ್ ಸ್ಟ್ಯಾಂಡ್, ಪಾರ್ಕಿಂಗ್ ಹಾಗೂ ಸ್ಟಾಲ್‌ಗಳನ್ನ ನಿರ್ಮಾಣ ಮಾಡಲಾಗಿತ್ತು. ಬಾಕಿಯಿರುವ ಯೋಜನೆಗಳು ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಉನ್ನತ ಮಟ್ಟದ ಆರೋಗ್ಯಕರ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಚಾಮುಂಡಿ ಬೆಟ್ಟದ ಅಭಿವೃದ್ಧಿ ದೃಷ್ಟಿಯಿಂದ ಪ್ರಾಧಿಕಾರ ರಚನೆ ಮಾಡಿದ್ದೇವೆ. ಅಪರಾಧ ತಡೆಗಟ್ಟಲು ಟಾಸ್ಕ್ಫೋರ್ಸ್ ರಚನೆ ಮಾಡುತ್ತೇವೆ. ದಸರಾ ಸಂದರ್ಭದಲ್ಲಿ ವಿವಿಧ ಭಾಗದಿಂದ ಜನರು ಬರುತ್ತಾರೆ. ಚಾಮುಂಡಿಬೆಟ್ಟಕ್ಕೆ ಬರುವ ಭಕ್ತರಿಗೆ ಸೌಲಭ್ಯ ಒದಗಿಸಬೇಕಿದೆ ಎಂದರು.