ಬೆಂಗಳೂರು:
ಲೋಕಸಭೆ ಚುನಾವಣೆಗೆ ಕರ್ನಾಟಕದ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು, ಇನ್ನು ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ಬಾಕಿ ಇದೆ.
ಈ ನಡುವೆ ಕೋಲಾರದಲ್ಲಿ ಬಣ ರಾಜಕೀಯ ತಾರಕಕ್ಕೇರಿದೆ. ಸಚಿವ ಕೆಎಚ್ ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣಗಳ ನಡುವಣ ತಿಕ್ಕಾಟ ಹೆಚ್ಚಾಗಿದೆ. ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡುವಂತೆ ಮುನಿಯಪ್ಪ ಪಟ್ಟು ಹಿಡಿದಿದ್ದರೆ, ಅವರಿಗೆ ಟಿಕೆಟ್ ನೀಡಿದರೆ ಕೆಲಸವೇ ಮಾಡುವುದಿಲ್ಲ ಎಂದು ರಮೇಶ್ ಕುಮಾರ್ ಬಣ್ಣಪಟ್ಟು ಹಿಡಿದಿದೆ.
ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಅಳಿಯ ಚಿಕ್ಕಪೆದ್ದಣ್ಣಗೆ ನೀಡುವಂತೆ ಮುನಿಯಪ್ಪ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಒತ್ತಡ ಹೇರಿದ್ದಾರೆ. ಇಷ್ಟೇ ಅಲ್ಲದೆ, ಹೈಕಮಾಂಡ್ ನಾಯಕರಿಗೂ ಈಗಾಗಲೇ ಮಾಡಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮ್ಮತಿಸಿದರೆ ಕೋಲಾರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚಿಕ್ಕಪೆದ್ದಣ್ಣ ಕಣಕ್ಕಿಳಿಯುವುದು ಬಹುತೇಕ ಖಚಿತ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಕೋಲಾರದಲ್ಲಿ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ಕೊಡುವ ತೀರ್ಮಾನವನ್ನು ಮಾಜಿ ಸ್ಪೀಕರ್ ಕೆಆರ್ ರಮೇಶ್ ಕುಮಾರ್ ಬಣ ತೀವ್ರವಾಗಿ ವಿರೋಧಿಸಿದೆ. ರಮೇಶ್ ಕುಮಾರ್ ಬಣ ಎಲ್ ಹನುಮಂತಯ್ಯ ಅವರಿಗೆ ಟಿಕೆಟ್ ಕೊಡಿಸುವ ಪ್ರಯತ್ನ ನಡೆಸುತ್ತಿದೆ. ಆದರೆ ಇದಕ್ಕೆ ಮುನಿಯಪ್ಪ ಬಣದ ವಿರೋಧ ಇದೆ.
35 – 40 ವರ್ಷದಿಂದ ಪಕ್ಷ ಕಟ್ಟಿದ್ದೇನೆ. ಎಲ್ಲರ ಮಕ್ಕಳಿಗೆ ಟಿಕೆಟ್ ಸಿಕ್ಕಿದೆ, ಹಾಗಾಗಿ ನಾನೂ ಕೇಳುತ್ತಿದ್ದೇನೆ. ಆಕಸ್ಮಾತ್ ಆಗಿ ಕಳೆದ ಬಾರಿ ನನಗೆ ಸೋಲಾಗಿದೆ. ನಾನು ಪಕ್ಷ ಕಟ್ಟಿದ್ದು, ಒಂದು ತಾಲೂಕಿಗೆ, ಜಿಲ್ಲೆಗೆ ಸೀಮಿತವಾಗಿರುವ ವ್ಯಕ್ತಿಯಲ್ಲ. ರಾಜ್ಯದಲ್ಲಿ ನನ್ನದೇ ಆದ ಶಕ್ತಿ ಇದೆ ಎಂದರು.
ನಮ್ಮದು ದೊಡ್ಡ ಪಕ್ಷ, ಹಾಗಾಗಿ ಭಿನ್ನಾಭಿಪ್ರಾಯಗಳು ಇರುತ್ತವೆ. ಅದನ್ನು ಸರಿಪಡಿಸಿಕೊಳ್ಳುತ್ತೇವೆ. ನಾನು ಚುನಾವಣೆಯಲ್ಲಿ ನನ್ನನ್ನು ಸೋಲಿಸಿದವರು ಸೇರಿದಂತೆ ಯಾರ ವಿರುದ್ದವೂ ಮಾತನಾಡಿಲ್ಲ. ರಮೇಶ್ ಕುಮಾರ್ ಕೂಡಾ ಯಾರ ವಿರುದ್ದವೂ ಮಾತನಾಡಿಲ್ಲ ಎಂದರು.