ಬೆಳಗಾವಿ :
ಬಾಣಂತಿಯರ ಸಾವಿನ ಪ್ರಕರಣದ ತನಿಖೆಯನ್ನು ಎಸ್‌ಐಟಿ ಅಥವಾ ನ್ಯಾಯಾಂಗ ತನಿಖೆ ನಡೆಸಬೇಕು ಎಂಬ ಕೂಗು ಬಿಜೆಪಿ ಸದಸ್ಯರಿಂದ ಮೊಳಗಿತು. ಬಾಣಂತಿಯರ ಸಾವಿನ ವಿಷಯವಾಗಿ ಮೇಲ್ಮನೆ ಸದಸ್ಯರು ಮಾನವೀಯತೆಯ ನೆಲೆಗಟ್ಟಿನಲ್ಲಿ ವಿಷಯ ಪ್ರಸ್ತಾಪಿಸಿದರು. ಸಾವಿಗೆ ಒಂದಿಷ್ಟು ಪರಿಹಾರ ನೀಡಿದರೆ, ಜೀವ ಮರಳಿ ಬರುವುದಿಲ್ಲ, ಅನಾಥವಾದ ಮಕ್ಕಳ ಭವಿಷ್ಯದ ಪ್ರಶ್ನೆಯೇನು? ಸರ್ಕಾರ ನೀಡುವ ಪರಿಹಾರ ಹಣ ಸಾಕಾಗುವುದಿಲ್ಲ, ಇನ್ನೂ ಆ ಪರಿಹಾರವನ್ನು ಹೆಚ್ಚಿಸಿ ಎಂಬ ಮಾನವೀಯ ನೆಲಗೆಟ್ಟಿನಲ್ಲಿ ಭಾರತಿ ಶೆಟ್ಟಿ, ರವಿಕುಮಾರ, ಸಿ.ಟಿ. ರವಿ, ಉಮಾಶ್ರೀ, ಐವಾನ್ ಡಿಸೋಜಾ, ಭೋಜೆಗೌಡ, ತಿಪ್ಪೇಸ್ವಾಮಿ ಸೇರಿದಂತೆ ಅನೇಕ ಸದಸ್ಯರು ತಮ್ಮ ವಿಚಾರ ವ್ಯಕ್ತಪಡಿಸಿದರು.
ಈ ರೀತಿಯ ಘಟನೆ ಮರುಕಳಿಸದಂತೆ ಇನ್ನುಳಿದ ಔಷಧಿಗಳನ್ನು ಪೂರೈಸುತ್ತಿರುವ ಕಂಪನಿಗಳ ಬಗ್ಗೆ ನಿಗಾ ವಹಿಸುವ ನಿಟ್ಟಿನಲ್ಲಿ ವಿಶೇಷ ತನಿಖಾ ತಂಡ ರಚನೆ ಮಾಡಿ ಹಾಗೂ ಬೆಂಗಳೂರನ್ನು ಕೇಂದ್ರಿಕರಿಸಿ ಔಷಧಿ ಪೂರೈಸುವ ಬದಲು ಆಯಾ ಜಿಲ್ಲಾ ಕೇಂದ್ರದಲ್ಲಿಯೇ ಔಷಧಿ ಪೂರೈಕೆಯಾಗುವ ವ್ಯವಸ್ಥೆ ರೂಪಿಸಿ ಎಂಬ ಸಲಹೆಯನ್ನು ಎನ್. ರವಿಕುಮಾರ ನೀಡಿ, ಸಾವಿನ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರೆ, ಇನ್ನೋರ್ವ ಸದಸ್ಯ ಕೇಶವ ಪ್ರಸಾದ್, ಈ ಪ್ರಕರಣವನ್ನು ಜಂಟಿ ಸದನ ಸಮಿತಿ ರಚಿಸಿ ಆ ಮೂಲಕ ತನಿಖೆ ನಡೆಸಿ ಎಂಬ ಸಲಹೆ ನೀಡಿದರು.
ಕಪ್ಪುಪಟ್ಟಿಗೆ ಸೇರ್ಪಡೆಯಾಗಿದ್ದರೂ ಸಹ ಔಷಧಿ ಪೂರೈಕೆಗೆ ಸರ್ಕಾರ ಏಕೆ ಅವಕಾಶ ನೀಡಿತು, ನ್ಯಾಯಾಲಯ ಔಷಧ ಕಂಪನಿಗೆ ವಿಧಿಸಿದ್ದ ಕಪ್ಪುಪಟ್ಟಿಗೆ ಸಂಬಂಧಿಸಿದಂತೆ ಮಾತ್ರ ತಡೆಯಾಜ್ಞೆ ನೀಡಿತ್ತು ಹೊರತು ಪೂರೈಕೆಯ ಯಾವ ವಿಷಯವನ್ನೂ ಹೇಳಿರಲಿಲ್ಲ, ಈ ವಿಷಯದಲ್ಲಿ ಸರ್ಕಾರ ಜವಾಬ್ದಾರಿ ಮರೆತಿದೆ, ಸಚಿವರು ನೇರವಾಗಿ ತಪ್ಪು ಮಾಡದೇ ಹೋದರೂ ಇಲಾಖೆಯ ಕಸ್ಟೋಡಿಯನ್ ಅವರೇ ಆಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಿ.ಟಿ. ರವಿ ಸರ್ಕಾರಕ್ಕೆ ಚಾಟಿ ಬೀಸಿದರು. ಸರ್ಕಾರವೇ ಡ್ರಗ್ಸ್ ಜಾಲದ ಬಗ್ಗೆ ಅಸಹಾಯಕತೆಯಾದರೆ ಹೇಗೆ? ಎಂಬ ಆಕ್ರೋಶವನ್ನು ಪ್ರತಿಪಕ್ಷದವರು ಹೊರಹಾಕಿದರು.
![](https://prajapragathi.com/wp-content/uploads/2024/12/session-belgavi.gif)