ಬಾಗಲಕೋಟೆ
ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಹೊಸ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್‌ಗೆ ಲೋಕಸಭೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಅವಕಾಶ ನೀಡಿದೆ. ಇದರಿಂದ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡರೂ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ವೀಣಾ ಕಾಶಪ್ಪನವರ್‌ಗೆ ಟಿಕೆಟ್ ಕೈ ತಪ್ಪಿದಂತಾಗಿದೆ.
ಟಿಕೆಟ್ ಕೈ ತಪ್ಪಿರುವ ವಿಚಾರ ತಿಳಿಯುತ್ತಿದ್ದಂತೆ ಬಹಿರಂಗವಾಗಿ ಕಣ್ಣೀರು ಹಾಕಿದ್ದ ವೀಣಾ ಕಾಶಪ್ಪನವರ್, ಇದೀಗ ಪಕ್ಷೇತರ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ. ಲೋಕಸಭಾ ಚುನಾವಣಾ ಟಿಕೆಟ್ ಸಿಗದೇ ಇದ್ದರೂ ಕೂಡ, ವೀಣಾ ಕಾಶಪ್ಪನವರ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ತಮ್ಮ ಬೆಂಬಲಿಗರ ಹಾಗೂ ಕಾರ್ಯಕರ್ತರ ಜೊತೆ ಕ್ಷೇತ್ರ ಸಂಚಾರ ನಡೆಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಟಿಕೆಟ್ ನೀಡಿಲ್ಲ, ನಾನು ಅಭ್ಯರ್ಥಿ ಅಲ್ಲ ಎಂದು ನಾನು ಕ್ಷೇತ್ರದಲ್ಲಿ ಓಡಾಡುವುದನ್ನು ನಿಲ್ಲಿಸಿಲ್ಲ. ನೀವು ಪಕ್ಷೇತರ ನಿಂತರೂ ನಾವು ನಿಮಗಾಗಿ ಕೆಲಸ ಮಾಡುತ್ತೇವೆ ಎಂದು ನಮ್ಮ ಕಾರ್ಯಕರ್ತರು ಹೇಳಿದ್ದಾರೆ ಎಂದರು.
ಟಿಕೆಟ್ ಸಿಗದೇ ಇದ್ದರೂ ಈಗಲೂ ಕ್ಷೇತ್ರದಲ್ಲಿ ಓಡಾಡುತ್ತಿದ್ದೇನೆ. ಜನರ ಸಂಪರ್ಕದಲ್ಲಿದ್ದೇನೆ. ನನ್ನ ಕ್ಷೇತ್ರದ ಜನ ನನ್ನ ಬಳಿ ಇಂದು ಒಂದೇ ಮನವಿ ಮಾಡಿಕೊಂಡಿರುವುದು. ನಿಮ್ಮ ಕಣ್ಣಿನ ಒಂದು ಹನಿಯೂ ಭೂಮಿಗೆ ಬೀಳಬಾರದು ಎಂದಿದ್ದಾರೆ. ನಮಗೆ ಬಹಳ ನೋವಾಗಿದೆ. ನೀವು ಪಕ್ಷೇತರ ನಿಂತರೂ ನಾವು ನಿಮಗಾಗಿ ಕೆಲಸ ಮಾಡುತ್ತೇವೆ. ನಿಮ್ಮ ನಿರ್ಧಾರಕ್ಕೆ ನಾವು ಬದ್ಧ ಎಂದು ಪ್ರತಿಯೊಬ್ಬರು ಹೇಳಿದ್ದಾರೆ ಎಂದು ಹೇಳಿದರು.
ಪಕ್ಷೇತರರಾಗಿ ಸ್ಪರ್ಧಿಸುವ ಬಗ್ಗೆ ಪಕ್ಷಾತೀತವಾಗಿ ಹೇಳಿದ್ದಾರೆ, ಪಕ್ಷದಲ್ಲಿದ್ದವರು ಹೇಳಿದ್ದಾರೆ. ಇನ್ನು ಪಕ್ಷೇತರರ ಪರ ಕೆಲಸ ಮಾಡದಂತೆ ಕಾರ್ಯಕರ್ತರಿಗೆ ನೋಟಿಸ್ ಏನೋ ನೀಡುತ್ತಿದ್ದಾರೆ ಅಂತೆ ಎಂದರು.
ಟಿಕೆಟ್ ಸಿಗದ ವಿಚಾರ ತಿಳಿಯುತ್ತಿದ್ದಂತೆ ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದ ವೀಣಾ ಕಾಶಪ್ಪನವರ್, ನನಗೆ ಗೊತ್ತಾಗಬೇಕು ಯಾವ ಮಾನದಂಡದ ಮೇಲೆ ನನ್ನನ್ನು ಕೈ ಬಿಟ್ಟಿದ್ದಾರೆ ಎಂದು, ಕಳೆದ ಐದು ವರ್ಷಗಳಿಂದ ಕ್ಷೇತ್ರದ ಜನರ ಜೊತೆಗೆ ನಾನಿದ್ದೇನೆ. ಅವರ ಕಷ್ಟ ಸುಖಗಳಿಗೆ ಆಗಿದ್ದೇನೆ. ಎಲ್ಲಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರದಲ್ಲಿಯೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ.
ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಏಕೈಕ ಮಹಿಳೆ ನಾನು. ನಮ್ಮ ಜಿಲ್ಲೆಯಲ್ಲಿ ಯಾರೂ ಸ್ಪರ್ಧೆ ಮಾಡಲ್ಲ ಎಂದಾಗ, ನಾನು ಸ್ಪರ್ಧೆ ಮಾಡುತ್ತೇನೆ ಎಂದು ಒಪ್ಪಿ ಮುಂದೆ ಬಂದವಳು. ಸೋಲುತ್ತೀನಿ ಎಂದು ಗೊತ್ತಿದ್ದರೂ ಕೂಡ ಅಂತಹ ಸಂದರ್ಭದಲ್ಲಿಯೂ ಕೂಡ ಸ್ಪರ್ಧೆಗಿಳಿದ್ದಿದ್ದೆ. ಪಕ್ಷ ಕಷ್ಟದಲ್ಲಿರುವ ಸಂದರ್ಭದಲ್ಲಿ ನಾನು ಸ್ಪರ್ಧೆ ಮಾಡಿದ್ದೆ. ಇಂದು ಪಕ್ಷ ಅಧಿಕಾರದಲ್ಲಿದೆ. ಕ್ಷೇತ್ರದಲ್ಲಿ ಐದು ಜನ ಶಾಸಕರಿದ್ದಾರೆ. ಈಗ ಅವಕಾಶ ಇಲ್ಲ ಅಂದರೆ ಹೇಗೆ ಎಂದು ಪ್ರಶ್ನಿಸಿದ್ದರು.








