ಚಾಮರಾಜನಗರ
ಭಾರತದ ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮತ್ತೊಂದು ಗೌರವದ ಗರಿ ಬಂದಿದೆ. ಈ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ ಸಂದಿದೆ.
ವಿದ್ಯಾರ್ಥಿಗಳಿಗೆ ಕಾಡಿನ ಬಗ್ಗೆ ಅರಿವು, ಅರಣ್ಯದ ಬಗ್ಗೆ ಜಾಗೃತಿ, ಪರಿಸರ ರಕ್ಷಣೆ ಪ್ರಾಮುಖ್ಯತೆ ಬಗ್ಗೆ ತಿಳಿಸಿಕೊಡಲು ಆರಂಭಿಸಿದ್ದ ಯುವಮಿತ್ರ ಕಾರ್ಯಕ್ರಮಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ ಸಂದಿದೆ. ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಅತಿಹೆಚ್ಚು ಮಂದಿ ಭಾಗಿಯಾಗಿದ್ದಾರೆ ಎಂದು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದ್ದು, ಪ್ರಶಸ್ತಿಯನ್ನು ವಿತರಣೆ ಮಾಡಲಾಗಿದೆ.
ಬಂಡೀಪುರ ಯುವ ಮಿತ್ರ ಜಾಗೃತಿ ಕಾರ್ಯಕ್ರಮದಲ್ಲಿ ಒಟ್ಟು 8,410 ಮಂದಿ ಭಾಗಿಯಾಗಿದ್ದಾರೆ. ಸಫಾರಿ ವೀಕ್ಷಿಸಿ, ಕಾನನದ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಜೊತೆಗೆ ಅರಣ್ಯ ಸಂರಕ್ಷಣೆ ಮಹತ್ವ ಅರಿತಿದ್ದಾರೆ. 8,410 ಮಂದಿಯಲ್ಲಿ 7,019 ವಿದ್ಯಾರ್ಥಿಗಳು, 655 ಶಿಕ್ಷಕರು, 197 ಗ್ರಾಮ ಪಂಚಾಯತಿ ಸಿಬ್ಬಂದಿ, ಸದಸ್ಯರು, 395 ಸ್ಥಳೀಯ ರೈತರು ಮತ್ತು 143 ಮಂದಿ ಗಿರಿಜನರಿದ್ದು, 2023ರ ಮಾರ್ಚ್ 3ರಿಂದ 2024ರ ಮಾರ್ಚ್ 8ರ ವರೆಗೆ 162 ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
2023ರಲ್ಲಿ ಅಂದಿನ ಬಂಡೀಪುರ ಸಿಎಫ್ಒ ಆಗಿದ್ದ ಡಾ.ಪಿ.ರಮೇಶ್ ಕುಮಾರ್ ಅವರಿಂದ ಬಂಡೀಪುರ ಯುವ ಮಿತ್ರ ಎಂಬ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತ್ತು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸುವರ್ಣ ಮಹೋತ್ಸವದ ಅಂಗವಾಗಿ ಈ ಕಾರ್ಯಕ್ರಮ ರೂಪಿಸಿ ವಿದ್ಯಾರ್ಥಿಗಳಿಗೆ ಉಚಿತ ಸಫಾರಿ ಮಾಡಿಸಿ ಪ್ರಕೃತಿ ಶಿಕ್ಷಣ ನೀಡುವ ಕಾರ್ಯಕ್ರಮ ಇದಾಗಿದೆ.
ಬಂಡೀಪುರ ಯುವ ಮಿತ್ರ ಕಾರ್ಯಕ್ರಮದಲ್ಲಿ ಭಾಗಿಯಾದ ವಿದ್ಯಾರ್ಥಿಗಳಿಗೆ “ಪರಿಸರ ಸ್ವಯಂ ಸೇವಕರು” ಎಂಬ ಗುರುತಿನ ಚೀಟಿ ಕೊಟ್ಟು ಅರಣ್ಯ ರಕ್ಷಣೆ ಜಾಗೃತಿಗೆ ಪ್ರೇರಣೆ ನೀಡುವ ವಿಶಿಷ್ಟ ಕಾರ್ಯಕ್ರಮ ಇದಾಗಿದೆ