ಬೆಂಗಳೂರು : ಮಾಲೀಕ ಹೇಳಿದ ಬಾಡಿಗೆ ಕೇಳಿ ತಂಡಾ ಹೊಡೆದ ಜನ ….!

ಬೆಂಗಳೂರು

    ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಲೇ ಇದೆ. ಕೋಟಿಗಟ್ಟಲೆ ಹೂಡಿಕೆ ಮಾಡೋ ಬಿಸಿನೆಸ್‌ಗಳು ಇಲ್ಲಿ ಆರಂಭವಾಗುತ್ತಿವೆ. ಬೃಹತ್‌ ಐಟಿ ದಿಗ್ಗಜರು ಬೆಂಗಳೂರಿನಲ್ಲಿ ಕಚೇರಿ ಆರಂಭಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಹೀಗಾಗಿಯೇ ನಗರ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಹೂಡಿಕೆ ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ.

   ಹಾಗೆಯೇ ಇಲ್ಲಿ ಲಿವಿಂಗ್‌ ಕಾಸ್ಟ್‌ ಸಹ ಸಿಕ್ಕಾಪಟ್ಟೆ ಹೆಚ್ಚು. ಮನೆ, ಕಚೇರಿ ಹೀಗೆ ಎಲ್ಲದಕ್ಕೂ ಸಿಕ್ಕಾಪಟ್ಟೆ ಬಾಡಿಗೆ ತೆರಬೇಕಾಗುತ್ತದೆ. ಹೀಗಾಗಿಯೇ ಬೆಂಗಳೂರಿಗೆ ಕಾಸ್ಟ್ಲೀ ಸಿಟಿ ಅನ್ನೋ ಹಣೆಪಟ್ಟಿ ಅಂಟಿಕೊಂಡಿದೆ. 

    1BHK, 2BHK, RK ರೂಮಿಗೂ ಇಲ್ಲಿ ದುಬಾರಿ ಬಾಡಿಗೆಯನ್ನು ತೆರಬೇಕಾಗುತ್ತದೆ. ಕೆಲವು ಏರಿಯಾಗಳಲ್ಲಿ RK ರೂಮ್‌ ಆರೇಳು ಸಾವಿರಕ್ಕೆ, 1BHK ಮನೆ 10-15 ಸಾವಿರಕ್ಕೆ, 2BHK 25-30 ಸಾವಿರಕ್ಕೆ ಸಿಕ್ಕಿಬಿಡುತ್ತದೆ. ಇದನ್ನು ಹೊರತುಪಡಿಸಿ ಬಹುತೇಕ ಏರಿಯಾಗಳಲ್ಲಿ ಮನೆ ಬಾಡಿಗೆ ಸಿಕ್ಕಾಪಟ್ಟೆ ಹೆಚ್ಚಿದೆ. ಅಪಾರ್ಟ್‌ಮೆಂಟ್‌, ಫ್ಲ್ಯಾಟ್‌ಗಳ ಕಥೆ ಹೇಳೋದೆ ಬೇಡ. ಅಡ್ವಾನ್ಸ್‌ ಸಹ ಲಕ್ಷಗಳಲ್ಲಿ ಪಾವತಿಸಬೇಕಾಗುತ್ತದೆ. ಇದರ ಮೇಲೆ ವಾಟರ್‌ ಬಿಲ್‌, ಲೈಟ್‌ ಬಿಲ್‌, ಕ್ಲೀನಿಂಗ್‌ ಜಾರ್ಜ್‌ ಹೆಚ್ಚುವರಿಯಾಗಿ ಪಾವತಿಸಬೇಕು. ಹೀಗಾಗಿಯೇ ಬೆಂಗಳೂರಿನಲ್ಲಿ ಮನೆ ಹುಡುಕುವುದು, ಮನೆ ಮಾಡುವುದು ಅಂದ್ರೆ ಬಹುತೇಕರಿಗೆ ತಲೆನೋವು ತರುವ ವಿಷಯ. ಆದ್ರೆ ಇತ್ತೀಚಿಗೆ ಮಹಿಳೆಯೊಬ್ಬರು ತಮ್ಮ ಮನೆ ಬಾಡಿಗೆಯ ಬಗ್ಗೆ ಮಾಡಿರೋ ಪೋಸ್ಟ್‌  ಎಲ್ಲರೂ ಬೆಚ್ಚಿ ಬೀಳುವಂತೆ ಮಾಡಿದೆ. 

     ಮಹಿಳೆಯೊಬ್ಬರು ತಮ್ಮ 2BHK ಅಪಾರ್ಟ್‌ಮೆಂಟ್‌ಗೆ ಬಾಡಿಗೆದಾರರನ್ನು ಕೋರಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮನೆ ಬಾಡಿಗೆ  43,000 ರೂ. ಮತ್ತು ಠೇವಣಿ  2.5 ಲಕ್ಷ ಎಂದು ಹೇಳಿಕೊಂಡಿದ್ದಾರೆ. ʼನಾವು ಕೋರಮಂಗಲದಲ್ಲಿರುವ ನಮ್ಮ ಪ್ರಸ್ತುತ 2BHKನಿಂದ ಹೊರಬರುತ್ತಿದ್ದೇವೆ ಮತ್ತು ಅದನ್ನು ತೆಗೆದುಕೊಳ್ಳಲು ಆಸಕ್ತಿ ಹೊಂದಿರುವ ಯಾರನ್ನಾದರೂ ಹುಡುಕುತ್ತಿದ್ದೇವೆ. ಯಾರಾದರೂ ಅದನ್ನು ತೆಗೆದುಕೊಳ್ಳಲು ಸಿದ್ಧರಿದ್ದರೆ (ಎಲ್ಲಾ ಪೀಠೋಪಕರಣಗಳೊಂದಿಗೆ) 43k ಬಾಡಿಗೆ, 2.5L ಠೇವಣಿ ಪಾವತಿಸಿದರೆ ಸಾಕುʼ ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ. ಅಪಾರ್ಟ್‌ಮೆಂಟ್‌ನ ಕೆಲವು ಫೋಟೋಗಳನ್ನು ಸಹ ಇದಕ್ಕೆ ಅಟ್ಯಾಚ್‌ ಮಾಡಲಾಗಿದೆ. 

   ಸೋಷಿಯಲ್‌ ಮೀಡಿಯಾದಲ್ಲಿ ಈ ಪೋಸ್ಟ್‌ 140,000 ವೀಕ್ಷಣೆಗಳನ್ನು ಗಳಿಸಿದೆ. ನೆಟ್ಟಿಗರು ಈ ಪೋಸ್ಟ್‌ಗೆ ನಾನಾ ರೀತಿ ಕಾಮೆಂಟ್‌ ಮಾಡಿದ್ದಾರೆ. ಒಬ್ಬ ಬಳಕೆದಾರರು, ʼಒಳ್ಳೆಯ ಮನೆ. ಆದರೆ ಕೋರಮಂಗಲದ ಮನೆಗೆ 2.5 ಲಕ್ಷ ಠೇವಣಿ ಯಾಕೆ. ಇದನ್ನು ಸರಿದೂಗಿಸಲು ಅಂಗಾಂಗಗಳನ್ನು ಮಾರಾಟ ಮಾಡಬೇಕಾಗಬಹುದುʼ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು,ʼ2.5 ಲಕ್ಷ ಡೆಪಾಸಿಟಾ, ಇದೇನು ತಮಾಷೆನಾʼ ಎಂದು ಪ್ರಶ್ನಿಸಿದ್ದಾರೆ. ʼ2bhk ಗೆ 43k ಬಾಡಿಗೆ ನೀಡುವುದು ಮೂರ್ಖತನʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

   ವರ್ಷದ ಮೊದಲ ತ್ರೈಮಾಸಿಕದಲ್ಲಿಯೇ ಬೆಂಗಳೂರಿನ ವಿವಿಧ ಏರಿಯಾಗಳಲ್ಲಿ ಬಾಡಿಗೆ ದರ ಹೆಚ್ಚಾಗುತ್ತಿದೆ. ಅದೂ ಸಹ 34,000 ಕ್ಕೆ ಏರಿದೆ. ಸರ್ಜಾಪುರ ರೋಡ್‌, ವೈಟ್‌ಫೀಲ್ಡ್ ಪ್ರದೇಶಗಳಲ್ಲಿ ಮನೆ ಪಡೆಯಬೇಕು ಎಂದರೆ ತಿಂಗಳಿಗೆ ಏನಿಲ್ಲಾ ಅಂದರೂ ಮೂವತ್ತು ಸಾವಿರಕ್ಕೂ ಅಧಿಕ ಹಣವನ್ನು ಬಾಡಿಗೆಗೆ ಅಂತಾನೇ ಮೀಸಲಿಡಬೇಕಾಗುತ್ತದೆ.

    ಸರ್ಜಾಪುರ ರೋಡ್‌ ಮತ್ತು ವೈಟ್‌ಫೀಲ್ಡ್ ನಲ್ಲಿ ಬಾಡಿಗೆ ಬೆಲೆಗಳು ಪ್ರತಿ ತ್ರೈಮಾಸಿಕದಲ್ಲೂ ಸಹ ಹೆಚ್ಚಾಗುತ್ತಿವೆ. 2023 ರ ಅಂತ್ಯದ ವೇಳೆಗೆ ಸರ್ಜಾಪುರ ರೋಡ್‌ನಲ್ಲಿ ತಿಂಗಳಿಗೆ ಸರಾಸರಿ 31,600 ರೂ. ಇತ್ತು ಹಾಗೂ ವೈಟ್‌ಫೀಲ್ಡ್ ನಲ್ಲಿ 30,200 ರೂ. ಆಗಿತ್ತು. ಆದರೆ, ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಸರ್ಜಾಪುರ ರೋಡ್‌ನಲ್ಲಿ 34,000 ರೂ.ಗಳು ಮತ್ತು ವೈಟ್‌ಫೀಲ್ಡ್‌ನಲ್ಲಿ ಸರಾಸರಿ 32,500 ರೂ. ಗಳಿಗೆ ಬೆಲೆ ಹೆಚ್ಚಾಗಿದೆ.